ಮಡಿಕೇರಿ, ನ. 23: ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ, ಶಿಕ್ಷಣ ಇಲಾಖೆ ಹಾಗೂ ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತಿನ ವತಿಯಿಂದ ತಾ.29 ರಿಂದ 3 ದಿನಗಳ ಕಾಲ ಮೈಸೂರಿನ ಮುಕ್ತ ವಿಶ್ವವಿದ್ಯಾನಿಲಯ ದಲ್ಲಿ ‘ಸುಸ್ಥಿರ ಅಭಿವೃದ್ಧಿಗೆ ವಿಜ್ಞಾನ, ತಂತ್ರಜ್ಞಾನ ಮತ್ತು ನವೀನ ಅನ್ವಯಗಳ ಬಳಕೆ’ ಎಂಬ ಕೇಂದ್ರ ವಿಷಯದಡಿ ನಡೆಯಲಿರುವ 25 ನೇ ರಾಜ್ಯ ಮಟ್ಟದ ಮಕ್ಕಳ ವಿಜ್ಞಾನ ಸಮಾವೇಶಕ್ಕೆ ಜಿಲ್ಲೆಯಿಂದ 10 ಮಂದಿ ಬಾಲ ವಿಜ್ಞಾನಿಗಳು ಆಯ್ಕೆಗೊಂಡಿದ್ದಾರೆ.

ಸಾರ್ವಜನಿಕ ಶಿಕ್ಷಣ ಇಲಾಖೆ, ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತಿನ ಜಿಲ್ಲಾ ಸಮಿತಿ ವತಿಯಿಂದ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಹಾಗೂ ನಗರದ ರೋಟರಿ ಮಿಸ್ಟಿ ಹಿಲ್ಸ್‍ನ ಸಹಯೋಗದೊಂದಿಗೆ ನಗರದ ರೋಟರಿ ಮಕ್ಕಳ ವಿಜ್ಞಾನ ಕೇಂದ್ರದಲ್ಲಿ ಏರ್ಪಡಿಸಿದ್ದ ಜಿಲ್ಲಾ ಮಟ್ಟದ 25 ನೇ ರಾಷ್ಟ್ರೀಯ ಮಕ್ಕಳ ವಿಜ್ಞಾನ ಸಮಾವೇಶದಲ್ಲಿ ಉತ್ತಮವಾಗಿ ವೈಜ್ಞಾನಿಕ ಪ್ರಬಂಧ ಮಂಡಿಸಿದ ವಿದ್ಯಾರ್ಥಿಗಳು ರಾಜ್ಯಮಟ್ಟದ ಮಕ್ಕಳ ವಿಜ್ಞಾನ ಸಮಾವೇಶದಲ್ಲಿ ಭಾಗವಹಿಸಿ ಪ್ರಬಂಧ ಮಂಡಿಸಲಿದ್ದಾರೆ.

ಆರೋಗ್ಯ ಮತ್ತು ಸ್ವಚ್ಛತೆ ಎಂಬ ಉಪ ವಿಷಯದಡಿ ಮಾರ್ಗದರ್ಶಿ ಶಿಕ್ಷಕಿ ಬಿ.ಟಿ.ನೇತ್ರಾವತಿ ಮಾರ್ಗ ದರ್ಶನದಲ್ಲಿ ಸುಸ್ಥಿರ ಆರೋಗ್ಯಕ್ಕೆ ಔಷಧೀಯ ಸಸ್ಯಗಳು ಎಂಬ ಯೋಜನೆ ಸಿದ್ಧಪಡಿಸಿ ಉತ್ತಮವಾಗಿ ವೈಜ್ಞಾನಿಕ ಪ್ರಬಂಧ ಮಂಡಿಸಿದ ಕೂಡಿಗೆ ಅಂಜೆಲಾ ವಿದ್ಯಾನಿಕೇತನ ಶಾಲೆಯ ವಿದ್ಯಾರ್ಥಿನಿ ಫಾತಿಮತ್ ಜುಮನಾ ಜಿಲ್ಲಾಮಟ್ಟದ ಬಾಲ ವಿಜ್ಞಾನಿ ಪ್ರಶಸ್ತಿ ಗಳಿಸಿ ರಾಜ್ಯಮಟ್ಟದ ವಿಜ್ಞಾನ ಸಮಾವೇಶಕ್ಕೆ ಆಯ್ಕೆಯಾಗಿದ್ದಾರೆ.

ಕಿರಿಯ ವಿಭಾಗದಲ್ಲಿ ಮಾದಾಪುರ ಶ್ರೀಮತಿ ಡಿ.ಚೆನ್ನಮ್ಮ ಪದವಿ ಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗದ ಪಿ.ಪಿ. ಸಂದೀಪ್, ಕೊಡಗರಹಳ್ಳಿ ಬೆಸ್ಟ್ ಆಂಗ್ಲಮಾಧ್ಯಮ ಶಾಲೆಯ ಎಂ.ಡಿ.ಚಿರಂತನರಾಮ್, ಮಡಿಕೇರಿ ಭಾರತೀಯ ವಿದ್ಯಾಭವನ ಕೊಡಗು ವಿದ್ಯಾಲಯದ ಪಿ.ಎ.ನಂಜಪ್ಪ , ಇದೇ ಶಾಲೆಯ ವಿ.ಪಿ.ವೈಷ್ಣವಿ.

ಹಿರಿಯ ವಿಭಾಗದಲ್ಲಿ ಸೋಮವಾರಪೇಟೆ ಹಾನಗಲ್ಲುವಿನ ಓ.ಎಲ್.ವಿ. ಶಾಲೆಯ ಎಸ್.ಎಂ. ನಿಮಿಷ, ಮಡಿಕೇರಿ ಭಾರತೀಯ ವಿದ್ಯಾಭವನ ಕೊಡಗು ವಿದ್ಯಾಲಯದ ಅನಘ್ರ್ಯ, ಇದೇ ಶಾಲೆಯ ಕೆ.ಎಸ್. ಜಾಗೃತಿ, ಸುಂಟಿಕೊಪ್ಪ ಸರ್ಕಾರಿ ಪ್ರೌಢಶಾಲೆಯ ಸಿ.ವಿ. ಆದಿತ್ಯ, ಕೊಡಗರಹಳ್ಳಿ ಬೆಸ್ಟ್ ಆಂಗ್ಲಮಾಧ್ಯಮ ಶಾಲೆಯ ಬಿ.ಕೆ.ದಿಶಾಂತ್.

ಮೈಸೂರಿನಲ್ಲಿ ನಡೆಯಲಿರುವ ರಾಜ್ಯಮಟ್ಟದ ಮಕ್ಕಳ ವಿಜ್ಞಾನ ಸಮಾವೇಶದಲ್ಲಿ ಆಯ್ಕೆಯಾಗುವ ಮೊದಲ 30 ತಂಡಗಳು ಡಿ.27 ರಿಂದ 31 ರ ವರೆಗೆ ಗುಜರಾತಿನ ಅಹ್ಮದಾಬಾದ್ ನಗರದಲ್ಲಿ ನಡೆಯಲಿರುವ ರಾಷ್ಟ್ರೀಯ ಮಕ್ಕಳ ವಿಜ್ಞಾನ ಸಮಾವೇಶದಲ್ಲಿ ಪಾಲ್ಗೊಳ್ಳಲು ಅರ್ಹತೆ ಪಡೆಯಲಿವೆ ಎಂದು ಸಮಾವೇಶದ ಜಿಲ್ಲಾ ಸಂಯೋಜಕ ಸಿ.ಎಸ್. ಸುರೇಶ್ ತಿಳಿಸಿದ್ದಾರೆ.