ಗೋಣಿಕೊಪ್ಪ ವರದಿ, ನ. 27 : ಗೋಣಿಕೊಪ್ಪ ಲಯನ್ಸ್ ಕ್ಲಬ್, ಲಿಯೋ ಕ್ಲಬ್ ಹಾಗೂ ಹಾಕಿಕೂರ್ಗ್ ಸಹಯೋಗದಲ್ಲಿ ಬುಟ್ಟಿಯಂಡ ಜಿಮ್ಮಿ ಅಚ್ಚಪ್ಪ, ಅಶ್ವಿನಿ ಅಚ್ಚಪ್ಪ ಜ್ಞಾಪಕಾರ್ಥ ರಾಜ್ಯಮಟ್ಟದ ಅಂತರ್ ಕಾಲೇಜು ಹಾಕಿ ಟೂರ್ನಿಯಲ್ಲಿ ಫೀಲ್ಡ್ ಮಾರ್ಷಲ್ ಕಾರ್ಯಪ್ಪ, ಸೆಂಟ್ ಆನೀಸ್, ಗೋಣಿಕೊಪ್ಪ ಕಾವೇರಿ ಕಾಲೇಜು, ಶನಿವಾರಸಂತೆ ಎಫ್‍ಜಿಸಿ, ವಿದ್ಯಾ ವಿಕಾಸ್ ಹಾಗೂ ಲಯನ್ಸ್ ತಂಡಗಳು ಗೆಲುವು ಪಡೆದವು.

ಪೊನ್ನಂಪೇಟೆ ಪದವಿಪೂರ್ವ ಕಾಲೇಜು ಮೈದಾನದಲ್ಲಿ ಆಯೋಜನೆ ಗೊಂಡಿರುವ ಮಂಗಳೂರು, ಮೈಸೂರು ವಿಶ್ವವಿದ್ಯಾಲಯ ಮಟ್ಟದ 21 ವರ್ಷದೊಳಗಿನ ಬಾಲಕರ ಹಾಕಿ ಟೂರ್ನಿಯ ಮೊದಲ ಪಂದ್ಯದಲ್ಲಿ ಮಡಿಕೇರಿ ಫೀಲ್ಡ್ ಮಾರ್ಷಲ್ ಕೆ. ಎಂ. ಕಾರ್ಯಪ್ಪ ತಂಡವು ಮಂಗಳೂರು ಸೆಂಟ್ ಅಲೋಸಿಯೆಸ್ ತಂಡವನ್ನು 2-0 ಗೋಲುಗಳಿಂದ ಮಣಿಸಿತು. ಕಾರ್ಯಪ್ಪ ತಂಡದ ಪರ 11 ನೇ ನಿಮಿಷದಲ್ಲಿ ಕಾಳಿಮುತ್ತು, 34 ನೇ ನಿಮಿಷದಲ್ಲಿ ಜೀವನ್ 1 ಗೋಲು ಹೊಡೆದರು.

ವೀರಾಜಪೇಟೆ ಸೆಂಟ್ ಅನೀಸ್ ತಂಡವು ಗೋಣಿಕೊಪ್ಪ ಕಾವೇರಿ ಕಾಲೇಜು ಜೂನಿಯರ್ ವಿರುದ್ಧ 4-0 ಗೋಲುಗಳ ಗೆಲುವು ದಾಖಲಸಿತು. ಸೆಂಟ್ ಅನೀಸ್ ಪರ 15 ಹಾಗೂ 26 ರಲ್ಲಿ ಸುಗಂದ್ 2 ಗೋಲು, 32, 34 ನೇ ನಿಮಿಷಗಳಲ್ಲಿ ಚಂದನ್ 2 ಗೋಲು ಹೊಡೆದರು.

ಗೋಣಿಕೊಪ್ಪ ಕಾವೇರಿ ಕಾಲೇಜು ಸೀನಿಯರ್ ತಂಡವು ಸೆಂಟ್ ಜೋಸೆಫ್ ತಂಡದ ವಿರುದ್ಧ 3-0 ಗೋಲುಗಳ ಜಯ ಪಡೆಯಿತು. ಕಾವೇರಿ ಕಾಲೇಜು ಪರ 8ನೇ ನಿಮಿಷದಲ್ಲಿ ಸೋಮಣ್ಣ, 9 ಹಾಗೂ 35 ನೇ ನಿಮಿಷಗಳಲ್ಲಿ ಶಿರಾಗ್ 2 ಗೋಲು ಹೊಡೆದರು.

ಶನಿವಾರಸಂತೆ ಎಫ್‍ಜಿಸಿ ತಂಡವು ಪೊನ್ನಂಪೇಟೆ ಸಾಯಿ ಶಂಕರ್ ತಂಡವನ್ನು 1-0 ಗೋಲುಗಳಿಂದ ಸೋಲಿಸಿತು. ಶನಿವಾರಸಂತೆ ತಂಡ ಪರವಾಗಿ 8ನೇ ನಿಮಿಷದಲ್ಲಿ ಕವನ್ 1 ಗೋಲು ಹೊಡೆದು ಗೆಲುವು ತಂದು ಕೊಟ್ಟರು.

ಶ್ರೀ ವಿವೇಕಾನಂದ ತಂಡ ಗೈರು ಹಾಜರಿ ಆಗುವದರ ಮೂಲಕ ವಿದ್ಯಾ ವಿಕಾಸ ತಂಡ ಹಾಗೂ ವೀರಾಜಪೇಟೆ ಎಫ್‍ಜಿಸಿ ತಂಡ ಗೈರು ಹಾಜರಾಗುವ ಮೂಲಕ ಗೋಣಿಕೊಪ್ಪ ಲಯನ್ಸ್ ತಂಡ ಗೆಲುವು ಪಡೆಯಿತು.

ಚಾಲನೆ : ಹಿರಿಯ ಹಾಕಿ ಪಟು, ಬುಟ್ಟಿಯಂಡ ಕುಟುಂಬ ಪಟ್ಟೆದಾರ ಬುಟ್ಟಿಯಂಡ ಅಪ್ಪಾಜಿ ಅವರು ಕ್ರೀಡಾಕೂಟವನ್ನು ಉದ್ಘಾಟಿಸಿದರು. ಈ ಸಂದರ್ಭ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.

ಅತಿಥಿ ಲಯನ್ಸ್ ಗವರ್ನರ್ ರೊನಾಲ್ಡ್ ಗೋಮ್ಸ್ ಮಾತನಾಡಿ, ಕೊಡಗು, ಫೀಲ್ಡ್ ಮಾರ್ಷಲ್ ಕೆ. ಎಂ. ಕಾರ್ಯಪ್ಪ, ಜನರಲ್ ತಿಮ್ಮಯ್ಯ ಅವರಂತಹ ವೀರ ಸೇನಾನಿಗಳನ್ನು ದೇಶಕ್ಕೆ ನೀಡಿದೆ. ಸೇನೆ ಹಾಗೂ ಕ್ರೀಡೆಗೆ ನೀಡುತ್ತಿರುವ ಪ್ರೋತ್ಸಾಹ ಅನುಕರಣೀಯ. ಸಾಕಷ್ಟು ಹಾಕಿ ಪಟುಗಳನ್ನು ದೇಶಕ್ಕೆ ನೀಡಿದೆ. ಲಯನ್ಸ್ ಶಾಲೆಯಲ್ಲಿ ಶಿಕ್ಷಣ ಪಡೆದ ಒಲಂಪಿಯನ್‍ಗಳಾದ ವಿ. ಆರ್. ರಘುನಾಥ್ ಹಾಗೂ ಎಸ್. ಕೆ. ಉತ್ತಪ್ಪ ಅವರ ಕೊಡುಗೆ ಶಾಲೆಗೆ ಹೆಮ್ಮೆ ತರುವಂತೆ ಮಾಡಿದೆ ಎಂದರು.

ದಾನಿ ಮೂಕಳೇರ ಕುಶಾಲಪ್ಪ ಮಾತನಾಡಿ, ಕ್ರೀಡಾಕೂಟ ಬುಟ್ಟಿಯಂಡ ಜಿಮ್ಮಿ ಅಚ್ಚಪ್ಪ ಹಾಗೂ ಅಶ್ವಿನಿ ಅಚ್ಚಪ್ಪ ಅವರ ಜ್ಞಾಪಕಾರ್ಥ ನಡೆಯುತ್ತಿರುವದು ವಿಶೇಷವಾಗಿದೆ. ಹಾಕಿ ಆಟಕ್ಕೆ ಈ ದಂಪತಿಗಳು ನೀಡಿದ ಪ್ರೋತ್ಸಾಹ ಮೆಚ್ಚುವಂತಹದ್ದು, ಎಂದು ಅವರ ಪರಿಚಯವನ್ನು ಹಂಚಿಕೊಂಡರು.

ಲಯನ್ಸ್ ವಿದ್ಯಾರ್ಥಿಗಳ ಸ್ವಾಗತ ನೃತ್ಯ ಗಮನ ಸೆಳೆಯಿತು. ಈ ಸಂದರ್ಭ ಗೋಣಿಕೊಪ್ಪ ಲಯನ್ಸ್ ಕ್ಲಬ್ ಅಧ್ಯಕ್ಷ ಸೋಮೆಯಂಡ ಪೂಣಚ್ಚ, ಕಾರ್ಯದರ್ಶಿ ಸೋಮೆಯಂಡ ಪ್ರಣಿತಾ ಪೂಣಚ್ಚ, ಖಜಾಂಜಿ ಡಾ. ಅಮ್ಮಂಡ ಚಿಣ್ಣಪ್ಪ, ಲಯನ್ಸ್ ಕ್ಲಬ್ ಪ್ರಮುಖರುಗಳಾದ ಕೊಂಗಂಡ ಸುಬ್ಬಯ್ಯ, ಚೆಪ್ಪುಡೀರ ಅಪ್ಪಣ್ಣ, ಲಿಯೋ ಕ್ಲಬ್ ಅಧ್ಯಕ್ಷೆ ಕರಿನಾ, ದಾನಿ ಮೂಕಳೇರ ಶಾಂತಿ ಕುಶಾಲಪ್ಪ ಉಪಸ್ಥಿತರಿದ್ದರು. ಅನ್ವಿತ್ ಪ್ರಾರ್ಥಿಸಿದರು.