ಕೂಡಿಗೆ, ನ. 26: ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಡಿ. 12 ರಂದು ತೊರೆನೂರು ಗ್ರಾಮದಲ್ಲಿ ಆಯೋಜಿಸಿರುವ ಕೃಷಿ ಸಾಹಿತ್ಯ ಸಮಾವೇಶದ ಪೂರ್ವಭಾವಿ ಸಭೆ ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಬಿ.ಎಸ್. ಲೋಕೇಶ್ ಸಾಗರ್ ಅಧ್ಯಕ್ಷತೆಯಲ್ಲಿ ತೊರೆನೂರು ಗ್ರಾಮ ಪಂಚಾಯಿತಿ ಸಭಾಂಗಣದಲ್ಲಿ ನಡೆಯಿತು. ಈ ಹಿಂದೆ ಕೃಷಿ ಸಾಹಿತ್ಯ ಸಮಾವೇಶವನ್ನು ತಾ. 15 ರಂದು ನಡೆಸಲು ದಿನಾಂಕ ಗುರುತು ಪಡಿಸಲಾಗಿತ್ತು, ಕಾರಣಾಂತರಗಳಿಂದ ಮುಂದೂಡಲಾಗಿದ್ದು, ಸದರಿ ಕಾರ್ಯಕ್ರಮವನ್ನು ಡಿ. 12 ರಂದು ನಡೆಸಲು ತೀರ್ಮಾನಿಸಲಾಯಿತು. ಸಮಾವೇಶದ ಪೂರ್ವಭಾವಿ ಸಭೆಯಲ್ಲಿ ವಿವಿಧ ವಿಷಯಗಳ ಬಗ್ಗೆ ಹಾಗೂ ಕಾರ್ಯಕ್ರಮದ ರೂಪು ರೇಷೆಗಳ ಬಗ್ಗೆ ಚರ್ಚೆಗಳು ನಡೆದವು.

ನಂತರ ಆಹಾರ ಸಮಿತಿ, ಕ್ರೀಡಾ ಸಮಿತಿ, ಅಲಂಕಾರ ಸಮಿತಿ, ವಸ್ತು ಪ್ರದರ್ಶನ ಸಮಿತಿ ಸೇರಿದಂತೆ ವಿವಿಧ ಸಮಿತಿಗಳನ್ನು ರಚಿಸಿ ಸಮಿತಿ ಅಧ್ಯಕ್ಷರಿಗೆ ಜವಾಬ್ದಾರಿಯನ್ನು ವಹಿಸಲಾಯಿತು.

ಬಿ.ಎಸ್. ಲೋಕೇಶ್ ಸಾಗರ್ ಮಾತನಾಡಿ, ಪರಿಷತ್ತು ಕಲೆ, ಗ್ರಾಮೀಣ ಕ್ರೀಡೆ, ಆಧುನಿಕ ಕೃಷಿ ಪದ್ಧತಿ, ಹೈನುಗಾರಿಕೆ, ಕೃಷಿ ವಿಮೆಗೆ ಸಂಬಂಧಪಟ್ಟ ವಿಚಾರ ವಿನಿಮಯ ಸೇರಿದಂತೆ ವಿವಿಧ ಕಾರ್ಯ ಕ್ರಮವನ್ನು ನಡೆಸುತ್ತಾ ಬಂದಿದ್ದು, ಕಳೆದ ಬಾರಿ ಶಿರಂಗಾಲದಲ್ಲಿ ಮುಂಗಾರು ಸಂಪದ ಕಾರ್ಯ ಕ್ರಮವನ್ನು ನಡೆಸಲಾಗಿತ್ತು. ಅದರಂತೆ ಈ ಭಾರಿ ಅನ್ನದಾತರಿಗಾಗಿ ತೊರೆನೂರು ಗ್ರಾಮದಲ್ಲಿ ಒಂದು ದಿನದ ಕೃಷಿ ಸಾಹಿತ್ಯ ಸಮಾವೇಶ ಕಾರ್ಯಕ್ರಮವನ್ನು ಆಯೋಜಿಸಲು ತೀರ್ಮಾನಿಸಿದೆ ಎಂದರು.

ಜಿಲ್ಲೆಯ ಸಾಹಿತಿಗಳು ರೈತರ ಕೃಷಿ ಚಟುವಟಿಕೆಗಳು ಹಾಗೂ ಗ್ರಾಮೀಣ ಭಾಗದ ಸಂಸ್ಕøತಿಯನ್ನು ನೇರವಾಗಿ ಅಧ್ಯಯನ ನಡೆಸಿ ಸಾಹಿತ್ಯ ರಚಿಸಲು ಅನುಕೂಲವಾಗುವಂತೆ ಮತ್ತು ನಶಿಸಿಹೋಗುತ್ತಿರುವ ಗ್ರಾಮೀಣ ಕ್ರೀಡೆಗಳಿಗೆ ಮರುಜೀವ ನೀಡುವ ನಿಟ್ಟಿನಲ್ಲಿ ಕೃಷಿ ಸಾಹಿತ್ಯ ಸಮಾವೇಶದಲ್ಲಿ ಗ್ರಾಮೀಣ ಕ್ರೀಡೆಗಳನ್ನು ಸಹ ಆಯೋಜಿಸಿದೆ. ಅಲ್ಲದೆ, ರೈತರು ಎದುರಿಸುತ್ತಿರುವ ಹಲವಾರು ಸಂಕಷ್ಟಗಳಿಗೆ ಕೃಷಿ ತಜ್ಞರಿಂದ ಉಪನ್ಯಾಸ ಕಾರ್ಯ ಕ್ರಮಗಳನ್ನು ಏರ್ಪಡಿಸಲಾಗುವದು ಎಂದು ಹೇಳಿದರು.

ಸಭೆಯಲ್ಲಿ ತೊರೆನೂರು ಗ್ರಾ.ಪಂ. ಅಧ್ಯಕ್ಷ ದೇವರಾಜ್, ಸದಸ್ಯ ರಾದ ಮಹೇಶ್, ಕಿಶೋರ್ ಕುಮಾರ್, ರೂಪ, ಮಂಗಳ, ನಬಾರ್ಡ್ ಅಧಿಕಾರಿ ಆರ್ಮುಗಂ, ಗ್ರಾ.ಪಂ. ಅಭಿವೃದ್ಧಿ ಅಧಿಕಾರಿ ಸಂತೋಷ್, ತೊರೆನೂರು ಸಹಕಾರ ಸಂಘದ ನಿರ್ದೇಶಕರಾದ ಕೃಷ್ಣೇಗೌಡ, ಹೆಚ್.ಬಿ.ಚಂದ್ರಪ್ಪ, ಜಗದೀಶ್, ಬಸವೇಶ್ವರ ದೇವಾಲಯ ಸಮಿತಿಯ ಅಧ್ಯಕ್ಷ ಟಿ.ಕೆ. ಪಾಂಡುರಂಗ, ಜಲಾನಯನ ಪ್ರದೇಶದ ಅಧ್ಯಕ್ಷ ಚನ್ನಬಸಪ್ಪ, ಪ್ರೌಢಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷ ರವಿಕುಮಾರ್, ನೀರು ಬಳಕೆದಾರರ ಸಂಘದ ಅಧ್ಯಕ್ಷ ವೆಂಕಟಾಚಲ, ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ಚಿಕ್ಕಯ್ಯ, ಗ್ರಾಮದ ಪ್ರಮುಖರಾದ ಟಿ.ಕೆ. ದೇವರಾಜ್, ಟಿ.ಆರ್. ಮಂಜೇಶ್, ಶಿವಾನಂದ, ಟಿ.ಡಿ. ಪ್ರಕಾಶ್, ಕ.ಸಾ.ಪ ಜಿಲ್ಲಾ ನಿರ್ದೇಶಕ ಕೆ.ಕೆ. ನಾಗರಾಜ್ ಶೆಟ್ಟಿ ಸೇರಿದಂತೆ ತೊರೆನೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗ್ರಾಮಗಳ ವಿವಿಧ ಸಂಘಟನೆಗಳ ಪ್ರಮುಖರು ಇದ್ದರು.