ಶ್ರೀಮಂಗಲ, ನ. 26: ಮುಖ್ಯಮಂತ್ರಿಗಳ ವಿಶೇಷ ಕೊಡಗು ಪ್ಯಾಕೇಜ್‍ನಡಿ ಬಿಡುಗಡೆಯಾದ ಅನುದಾನದಲ್ಲಿ ಕುಟ್ಟ ಮತ್ತು ಟಿ. ಶೆಟ್ಟಿಗೇರಿ ಗ್ರಾ.ಪಂ. ವ್ಯಾಪ್ತಿಯಲ್ಲಿ ರೂ. 57 ಲಕ್ಷ ಅನುದಾನದಲ್ಲಿ ವಿವಿಧ ರಸ್ತೆ ಕಾಮಗಾರಿಗಳಿಗೆ ಗ್ರಾಮದ ಹಿರಿಯರೊಂದಿಗೆ ಜಿ.ಪಂ. ಸದಸ್ಯ ಮುಕ್ಕಾಟಿರ ಶಿವು ಮಾದಪ್ಪ ಅವರು ಭೂಮಿಪೂಜೆ ಸಲ್ಲಿಸಿದರು.ಟಿ. ಶೆಟ್ಟಿಗೇರಿಯಿಂದ ನಾಲ್ಕೇರಿ ರಸ್ತೆ ಗೆ ರೂ. 5 ಲಕ್ಷದಲ್ಲಿ ರಸ್ತೆಗೆ ಡಾಂಬರು ಹಾಗೂ ಕುಟ್ಟ ಗ್ರಾ.ಪಂ. ವ್ಯಾಪ್ತಿಯ ಕುಟ್ಟ ಶ್ರೀ ಕರ್‍ಂಕಾಳಿ ದೇವಸ್ಥಾನ ರಸ್ತೆ, ಕುಟ್ಟದಿಂದ ಸಾರ್ವಜನಿಕ ಸ್ಮಶಾನ ರಸ್ತೆ. ಪೂಚೆಕಲ್ಲ್, ಮಂಚಳ್ಳಿ ಲಿಂಕ್ ರಸ್ತೆ, ಕುಟ್ಟ ಅಯ್ಯಪ್ಪ ದೇವಸ್ಥಾನ ರಸ್ತೆ, ಮತ್ತು ಕುಟ್ಟದಿಂದ ತಮಿಳು ಶಾಲೆ, ಬೇಗೂರು ರಸ್ತೆಗಳ ಅಭಿವೃದ್ಧಿಗೆ ರೂ. 52 ಲಕ್ಷದಲ್ಲಿ ಭೂಮಿಪೂಜೆ ಮಾಡಲಾಯಿತು.

ಟಿ. ಶೆಟ್ಟಿಗೇರಿ-ನಾಲ್ಕೇರಿ ರಸ್ತೆಯನ್ನು ಹಿರಿಯರಾದ ಮಚ್ಚಮಾಡ ಮಣಿ ಉತ್ತಯ್ಯ, ಕುಟ್ಟದಲ್ಲಿ ಮಂಜೂರಾದ ಅನುದಾನದ ರಸ್ತೆಗಳ ಭೂಮಿಪೂಜೆಯನ್ನು ಹಿರಿಯರಾದ ಮಾಚಿಮಾಡ ಮಾಣು ಅವರು ಜಿ.ಪಂ. ಸದಸ್ಯ ಶಿವು ಮಾದಪ್ಪ ಹಾಗೂ ಇತರ ಮುಖಂಡರೊಂದಿಗೆ ನೆರವೇರಿಸಿದರು.

ಈ ಸಂದರ್ಭ ಮಾತನಾಡಿದ ಪೊನ್ನಂಪೇಟೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ತೀತಿರ ಧರ್ಮಜ ಉತ್ತಪ್ಪ, ನಾಲ್ಕೇರಿ-ಟಿ. ಶೆಟ್ಟಿಗೇರಿ ರಸ್ತೆಗೆ ಟಿ. ಶೆಟ್ಟಿಗೇರಿ ಗ್ರಾ.ಪಂ. ವ್ಯಾಪ್ತಿಗೆ ಮುಖ್ಯಮಂತ್ರಿಗಳ ಅನುದಾನದಲ್ಲಿ ರೂ. 5 ಲಕ್ಷ ಹಾಗೂ ನಾಲ್ಕೇರಿ ಗ್ರಾ.ಪಂ. ವ್ಯಾಪ್ತಿಗೆ ನೀಡಿರುವ ಸಿ.ಎಂ. ಪ್ಯಾಕೇಜ್‍ನಲ್ಲಿ ರೂ. 5 ಲಕ್ಷ ಒಟ್ಟು ರೂ. 10 ಲಕ್ಷ ಒದಗಿಸಲಾಗಿದೆ. ಇದಲ್ಲದೆ, ಮೂರನೇ ಹಂತದ ಸಿಎಂ ಪ್ಯಾಕೇಜ್‍ನಲ್ಲಿ ಹೆಚ್ಚಿನ ಅನುದಾನಕ್ಕೆ ಸೇರಿಸಲಾಗುವದು ಎಂದು ಹೇಳಿದರು.

ಟಿ. ಶೆಟ್ಟಿಗೇರಿ ಗ್ರಾ.ಪಂ. ಅಧ್ಯಕ್ಷ ಮಚ್ಚಮಾಡ ಸುಮಂತ್ ಮಾತನಾಡಿ, ಟಿ. ಶೆಟ್ಟಿಗೇರಿ, ನಾಲ್ಕೇರಿ ಸಂಪರ್ಕ ರಸ್ತೆಯೂ ಹಲವು ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆಯಾಗಿದೆ. ಈ ರಸ್ತೆ ನಡುವೆ ಇರುವ ಸೇತುವೆ ಶಿಥಿಲ ವ್ಯವಸ್ಥೆಯಲ್ಲಿದ್ದು ಇದನ್ನು ಸರಿಪಡಿಸಲು ಮನವಿ ಮಾಡಿದರು.

ಉಸ್ತುವಾರಿ ಸಚಿವರ ಆಪ್ತ ಕಾರ್ಯದರ್ಶಿ ಕದ್ದಣಿಯಂಡ ಹರೀಶ್ ಮಾತನಾಡಿ, ಕಾಮಗಾರಿಯ ಉಸ್ತುವಾರಿಗಳನ್ನು ಸ್ಥಳೀಯರೇ ವಹಿಸಿಕೊಂಡು ಗುಣಮಟ್ಟದ ರಸ್ತೆ ನಿರ್ಮಿಸಲು ಸಹಕಾರ ನೀಡಬೇಕು. ರಸ್ತೆ ಕಾಮಗಾರಿಯಲ್ಲಿ ಲೋಪದೋಷ ಕಂಡುಬಂದರೆ ಅಧಿಕಾರಿ ಹಾಗೂ ಜನಪ್ರತಿನಿಧಿಗಳ ಗಮನಕ್ಕೆ ತರಬೇಕು. ಸಿಎಂ ಸಿದ್ದರಾಮಯ್ಯನವರ ಕೊಡಗು ವಿಶೇಷ ಪ್ಯಾಕೇಜ್ ಮೂಲಕ ಕೊಡಗಿನ ಗ್ರಾಮೀಣ ರಸ್ತೆಗಳ ಅಭಿವೃದ್ಧಿಗೆ ಹೆಚ್ಚಿನ ಅನುದಾನ ಬಿಡುಗಡೆಯಾಗಿದೆ ಎಂದು ಹೇಳಿದರು.