ಸೋಮವಾರಪೇಟೆ, ನ.10: ಹಿಂದೂಪರ ಸಂಘಟನೆಗಳ ವ್ಯಾಪಕ ವಿರೋಧದ ನಡುವೆಯೂ ಸರ್ಕಾರ ಆಚರಣೆಗೆ ಮುಂದಾದ ಟಿಪ್ಪು ಜಯಂತಿಗೆ ಸಂಘಟಿತ ಪ್ರತಿಭಟನೆಯ ಮೂಲಕ ತಡೆಯೊಡ್ಡುವ ಯತ್ನ ಸೋಮವಾರಪೇಟೆಯಲ್ಲಿ ನಡೆಯಿತು.

ಇಲ್ಲಿನ ಚನ್ನಬಸಪ್ಪ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮಕ್ಕೆ ತಡೆಯೊಡ್ಡುವ ಪ್ರಯತ್ನಕ್ಕೆ ಮುಂದಾದ 100ಕ್ಕೂ ಅಧಿಕ ಮಂದಿ ಹಿಂದೂಪರ ಸಂಘಟನೆಯ ಕಾರ್ಯಕರ್ತರನ್ನು ಬಂಧಿಸಿ, ತಾತ್ಕಾಲಿಕ ಬಂದೀಖಾನೆ ಮಾಡಿದ್ದ ಇಲ್ಲಿನ ಬಿಟಿಸಿಜಿ ಕಾಲೇಜಿಗೆ ಕರೆದೊಯ್ದು ಮಧ್ಯಾಹ್ನದ ನಂತರ ಬಿಡುಗಡೆಗೊಳಿಸಿದರು.

ಬೆಳಿಗ್ಗೆ 10.15ಕ್ಕೆ ಇಲ್ಲಿನ ಕರ್ಕಳ್ಳಿ ರಸ್ತೆಯಲ್ಲಿರುವ ಕಟ್ಟೆ ಬಸವೇಶ್ವರ ದೇವಾಲಯದಿಂದ ಪ್ರತಿಭಟನಾ ಮೆರವಣಿಗೆ ನಡೆಸಿದ ಹಿಂದೂಪರ ಸಂಘಟನೆಗಳ ಕಾರ್ಯಕರ್ತರು, ಕಪ್ಪು ಪಟ್ಟಿ ಧರಿಸಿ ರಾಜ್ಯ ಸರ್ಕಾರದ ವಿರುದ್ಧ ಧಿಕ್ಕಾರದ ಘೋಷಣೆಗಳನ್ನು ಕೂಗಿದರು. ಅಂಬೇಡ್ಕರ್ ವೃತ್ತದ ಮೂಲಕ ಬಸವೇಶ್ವರ ದೇವಾಲಯದ ಮುಂಭಾಗಕ್ಕೆ ಪ್ರತಿಭಟನಾಕಾರರು ಆಗಮಿಸುತ್ತಿದ್ದಂತೆ ಠಾಣಾಧಿಕಾರಿ ಎಂ. ಶಿವಣ್ಣ ಅವರ ನೇತೃತ್ವದಲ್ಲಿ ತಡೆಯೊಡ್ಡಲಾಯಿತು.

ರಸ್ತೆಗೆ ಅಡ್ಡಲಾಗಿ ಹಾಕಿದ್ದ ಬ್ಯಾರಿಕೇಡ್‍ಗಳನ್ನು ತಳ್ಳಿಕೊಂಡು ಮುನ್ನುಗ್ಗಲು ಯತ್ನಿಸಿದ ಕಾರ್ಯಕರ್ತರನ್ನು ಪೊಲೀಸರು ತಮ್ಮೆಲ್ಲಾ ಶಕ್ತಿ ಬಳಸಿ ತಡೆದರು. ಈ ಸಂದರ್ಭ ಪೊಲೀಸರು ಹಾಗೂ ಪ್ರತಿಭಟನಾಕಾರರ ನಡುವೆ ಮಾತಿನ ಚಕಮಕಿಯೊಂದಿಗೆ ತಳ್ಳಾಟ ನೂಕಾಟ ನಡೆಯಿತು.

ಟಿಪ್ಪು ಜಯಂತಿ ವಿರೋಧಿ ಹೋರಾಟ ಸಮಿತಿ ತಾಲೂಕು ಅಧ್ಯಕ್ಷ ಟಿ.ಕೆ. ರಮೇಶ್, ಹಿಂದೂ ಜಾಗರಣಾ ವೇದಿಕೆ ಜಿಲ್ಲಾ ಪ್ರಮುಖ ಸುಭಾಷ್ ತಿಮ್ಮಯ್ಯ, ಕಾರ್ಯಕರ್ತರಾದ ಮಸಗೋಡು ಸುರೇಶ್, ಸತೀಶ್, ಬಿ.ಶಿವಪ್ಪ, ಹರಗ ಉದಯ, ಕರ್ಕಳ್ಳಿ ರವಿ, ಮೋಹನ್‍ದಾಸ್, ಹುಲ್ಲೂರಿಕೊಪ್ಪ ಮಾದಪ್ಪ, ಬನ್ನಳ್ಳಿ ಗೋಪಾಲ್, ರೂಪಾ ಸತೀಶ್, ಜಿ.ಪಂ. ಸದಸ್ಯ ಬಿ.ಜೆ. ದೀಪಕ್, ಅರೆಯೂರು ಜಯಣ್ಣ, ರಾಘವ, ವೆಂಕಪ್ಪ ದೇಶ್‍ರಾಜ್ ಸೇರಿದಂತೆ 40ಕ್ಕೂ ಅಧಿಕ ಮಂದಿಯನ್ನು ವಶಕ್ಕೆ ಪಡೆಯಲಾಯಿತು.

ಇದೇ ಸಮಯದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿದ್ದ ಚನ್ನಬಸಪ್ಪ ಸಭಾಂಗಣದ ಹಿಂದಿನ ರಸ್ತೆಯಲ್ಲಿ ಪ್ರತಿಭಟನಾ ಮೆರವಣಿಗೆ ಮೂಲಕ ಮುನ್ನುಗ್ಗಲು ಯತ್ನಿಸಿದ 50ಕ್ಕೂ ಅಧಿಕ ಮಂದಿಗೆ ಚೌಡ್ಲು ಗ್ರಾಮ ಪಂಚಾಯಿತಿ ಕಚೇರಿ ಎದುರು ತಡೆಯೊಡ್ಡಲಾಯಿತು. ಬ್ಯಾರಿಕೇಡ್‍ಗಳನ್ನು ತಳ್ಳಿಕೊಂಡೇ ಮುನ್ನುಗ್ಗಲು ಯತ್ನಿಸಿದವರನ್ನು ವಶಕ್ಕೆ ಪಡೆಯಲಾಯಿತು.

ವಿಧಾನ ಪರಿಷತ್ ಮಾಜೀ ಸದಸ್ಯ ಎಸ್.ಜಿ. ಮೇದಪ್ಪ, ಬಿಜೆಪಿ ಯುವ ಮೋರ್ಚಾ ತಾಲೂಕು ಅಧ್ಯಕ್ಷ ಮಹೇಶ್ ತಿಮ್ಮಯ್ಯ, ಪ್ರಮುಖರಾದ ದರ್ಶನ್ ಜೋಯಪ್ಪ, ಯಡೂರು ದರ್ಶನ್, ತಾಕೇರಿ ಪೊನ್ನಪ್ಪ, ಶುಂಠಿ ಸುರೇಶ್, ನಳಿ&divound; ಗಣೇಶ್ ಸೇರಿದಂತೆ 50ಕ್ಕೂ ಅಧಿಕ ಮಂದಿಯನ್ನು ವಶಕ್ಕೆ ಪಡೆದುಕೊಂಡ ಪೊಲೀಸರು ಬಸ್‍ನಲ್ಲಿ ತುಂಬಿಸಿಕೊಂಡು ಬಿಟಿಸಿಜಿ ಕಾಲೇಜಿಗೆ ಕರೆದೊಯ್ದರು.

ಇಲ್ಲಿನ ಆನೆಕೆರೆ ಬಳಿ ಅಳವಡಿಸಿದ್ದ ಪೊಲೀಸ್ ಬಂದೋಬಸ್ತ್ ಭೇದಿಸಿ ಮುನ್ನುಗಲು ಯತ್ನಿಸಿದ ಬಿಜೆಪಿ ತಾಲೂಕು ಪ್ರಧಾನ ಕಾರ್ಯದರ್ಶಿ ಮನುಕುಮಾರ್ ರೈ, ನಗರಾಧ್ಯಕ್ಷ ಎಸ್.ಆರ್. ಸೋಮೇಶ್, ಯುವ ಮೋರ್ಚಾ ಅಧ್ಯಕ್ಷ ಶರತ್‍ಚಂದ್ರ, ಪ್ರಮುಖರಾದ ನೆಹರು, ಪಿ. ಮಧು, ಕಿಬ್ಬೆಟ್ಟ ಮಧು, ರವಿಚಂದ್ರ, ಜಗದೀಶ್, ಶ್ರೀಕಾಂತ್, ಮುರುಳಿ ಅವರುಗಳಿಗೆ ಪೊಲೀಸರು ತಡೆಯೊಡ್ಡಿದರು. ಈ ಸಂದರ್ಭ ರಸ್ತೆಯಲ್ಲೇ ಕುಳಿತ ಪ್ರತಿಭಟನಾಕಾರರು ಸರ್ಕಾರದ ವಿರುದ್ಧ ಘೋಷಣೆ ಕೂಗಿದರು.

ಪ್ರತಿಭಟನಾಕಾರರನ್ನು ಇಲ್ಲಿನ ಬಿಟಿಸಿಜಿ ಕಾಲೇಜಿಗೆ ಕರೆದೊಯ್ದ ಡಿವೈಎಸ್‍ಪಿ ಸಂಪತ್‍ಕುಮಾರ್, ಪೊಲೀಸ್ ವೃತ್ತ &divound;ರೀಕ್ಷಕ ನಂಜುಂಡೇಗೌಡ, ಠಾಣಾಧಿಕಾರಿ ಶಿವಣ್ಣ ಸೇರಿದಂತೆ ಅಧಿಕಾರಿಗಳು ಕರ್ನಾಟಕ ಪೊಲೀಸ್ ಪ್ರಿವೆಂಟ್ ಆಕ್ಟ್-71 ಅನ್ವಯ ಕ್ರಮ ಜರುಗಿಸಿ ಮಧ್ಯಾಹ್ನದ ನಂತರ ಬಿಡುಗಡೆಗೊಳಿಸಿದರು.