ಸೋಮವಾರಪೇಟೆ, ನ. 10: ಇಲ್ಲಿನ ಚನ್ನಬಸಪ್ಪ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಟಿಪ್ಪು ಜಯಂತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ತಾಲೂಕು ಪಂಚಾಯಿತಿ ಉಪಾಧ್ಯಕ್ಷರೂ ಆಗಿರುವ ಟಿಪ್ಪು ಜಯಂತಿ ವಿರೋಧಿ ಹೋರಾಟ ಸಮಿತಿಯ ಅಧ್ಯಕ್ಷರಾಗಿರುವ ಅಭಿಮನ್ಯುಕುಮಾರ್ ಅವರು ಪೊಲೀಸರೊಂದಿಗೆ ನಡೆದ ಜಟಾಪಟಿಯಿಂದ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದ ಘಟನೆ ನಡೆಯಿತು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಕಾರ್ಯಕ್ರಮಕ್ಕೆ ವಿರೋಧವಾಗಿ ಮಾತನಾಡುತ್ತಿದ್ದ ಅಭಿಮನ್ಯುಕುಮಾರ್ ಅವರನ್ನು ಪೊಲೀಸರು ಎಳೆದಾಡಿ ದ್ದರಿಂದ ಅವರ ಬಲಗೈ ಹಾಗೂ ದೇಹದ ಇತರ ಭಾಗಗಳಿಗೆ ನೋವುಂಟಾಗಿ, ಅಸ್ವಸ್ಥರಾದಂತೆ ಕಂಡುಬಂದರು. ಆಸ್ಪತ್ರೆಗೆ ಸಾಗಿಸುವ ಬದಲು ಬಿಟಿಸಿಜಿ ಕಾಲೇಜಿಗೆ ಕರೆದೊಯ್ದ ಪೊಲೀಸರ ಕ್ರಮಕ್ಕೆ ನೂರಾರು ಸಂಖ್ಯೆಯಲ್ಲಿದ್ದ ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದ ಹಿನ್ನೆಲೆ, ಮಧ್ಯಾಹ್ನ ಅಭಿಮನ್ಯುಕುಮಾರ್ ಅವರನ್ನು ಸೋಮವಾರಪೇಟೆ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಯಿತು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದ ಸಂದರ್ಭ ಕಾಂಗ್ರೆಸ್‍ನ ಕೆಲವರು ಅಡ್ಡಿಪಡಿಸಿದರು. ಈ ಸಂದರ್ಭ ಅವರನ್ನು ಸುಮ್ಮನಿರಿಸದ ಪೊಲೀಸರು ತನ್ನ ಮೇಲೆಯೇ ದೌರ್ಜನ್ಯ ನಡೆಸಿದರು. ಸಭಾಧ್ಯಕ್ಷರಿಗೆ ಅಗೌರವ ತೋರಿದ್ದೂ ಅಲ್ಲದೇ ಮನಸೋಯಿಚ್ಛೆ ಎಳೆದಾಡಿದರು. ಇವರುಗಳ ವಿರುದ್ಧ ಖಾಸಗಿ ಮೊಕದ್ದಮೆ ದಾಖಲಿ¸ Àಲಾಗುವದು. ಕಾರ್ಯಕ್ರಮಕ್ಕೆ ಅಡ್ಡಿಪಡಿಸಿದ ಕಾಂಗ್ರೆಸ್‍ನ ಮೂವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಅಭಿಮನ್ಯುಕುಮಾರ್ ಒತ್ತಾಯಿಸಿದರು.

ಆಸ್ಪತ್ರೆಗೆ ಭೇಟಿ ನೀಡಿದ ಶಾಸಕ ಅಪ್ಪಚ್ಚು ರಂಜನ್ ಮಾತನಾಡಿ, ಅಭಿಮನ್ಯುಕುಮಾರ್ ವಿರುದ್ಧ ನಡೆಸಿದ ದೌರ್ಜನ್ಯವನ್ನು ಖಂಡಿಸುತ್ತೇವೆ. ಮುಂದಿನ ಕ್ರಮದ ಬಗ್ಗೆ ಯೋಚಿಸಲಾಗುವದು. ಅತಿಥಿಗಳೇ ಕಾರ್ಯಕ್ರಮ ಬಹಿಷ್ಕರಿಸಿ ಬಂದಿದ್ದರೂ, ಆಹ್ವಾನ ಪತ್ರಿಕೆಯಲ್ಲಿ ಹೆಸರಿಲ್ಲದವರನ್ನು ಕರೆದು ವೇದಿಕೆಗೆ ಕೂರಿಸಿ ಕಾರ್ಯಕ್ರಮ ಮಾಡಿದ್ದಾರೆ. ಈ ಬಗ್ಗೆ ತಹಸೀಲ್ದಾರ್ ವಿರುದ್ಧವೂ ಕ್ರಮ ಕೈಗೊಳ್ಳುವ ಬಗ್ಗೆ ಚಿಂತಿಸಲಾಗುವದು. ಇದು ಕೊನೆಯ ಟಿಪ್ಪು ಜಯಂತಿ ಆಗಲಿದ್ದು, ಮುಂದೆ ಬಿಜೆಪಿ ಸರ್ಕಾರ ಬಂದು ಟಿಪ್ಪು ಜಯಂತಿಯನ್ನು ರದ್ದುಪಡಿಸುತ್ತೇವೆ ಎಂದರು.