ಗೋಣಿಕೊಪ್ಪ ವರದಿ, ನ. 10: ಕೊಡಗಿನಲ್ಲಿ ಟಿಪ್ಪು ಜಯಂತಿ ವಿರೋಧಿಸಿ ಕೊಡಗು ಬಂದ್ ದಕ್ಷಿಣ ಕೊಡಗಿನಲ್ಲಿ ಸಂಪೂರ್ಣ ಯಶಸ್ವಿಯಾಯಿತು.

ಗೋಣಿಕೊಪ್ಪಲು, ಪಾಲಿಬೆಟ್ಟ, ತಿತಿಮತಿ, ಪೊನ್ನಂಪೇಟೆ, ಬಾಳೆಲೆ, ಶ್ರೀಮಂಗಲ, ಕುಟ್ಟಾ ಸೇರಿದಂತೆ ದಕ್ಷಿಣ ಕೊಡಗಿನ ಪ್ರಮುಖ ಪಟ್ಟಣಗಳಲ್ಲಿ ವರ್ತಕರು ಸ್ವಯಂಪ್ರೇರಿತವಾಗಿ ಬಂದ್‍ಗೆ ಬೆಂಬಲ ವ್ಯಕ್ತಪಡಿಸಿ ಅಂಗಡಿಗಳನ್ನು ಮುಚ್ಚಿ ವ್ಯಾಪಾರದಿಂದ ದೂರ ಉಳಿದರು.

ದಿನಪೂರ್ತಿ ಚಟುವಟಿಕೆಯಿಂದ ಕೂಡಿರುತ್ತಿದ್ದ ಗೋಣಿಕೊಪ್ಪಲು ಸ್ತಬ್ದವಾಗಿತ್ತು. ಕೆಎಸ್‍ಆರ್‍ಟಿಸಿ ಬಸು ಸಂಚಾರ ಕಡಿಮೆಯಿತ್ತು. ಖಾಸಗಿ ಬಸ್ಸುಗಳು ಸಂಚರಿಸದ ಕಾರಣ ಪ್ರಯಾಣಿಕರಿಗೆ ತೊಂದರೆಯಾಯಿತು. ಆಟೋಗಳ ಸೇವೆ ಸಿಗದೆ ಕೆಲವರು ಸ್ವಂತ ವಾಹನಗಳಲ್ಲಿ ತುರ್ತು ಕಾರ್ಯಗಳ ನಿಮಿತ್ತ ಪ್ರಯಾಣಿಸಿದರು. ಎಟಿಎಮ್, ಪೆಟ್ರೋಲ್ ಬಂಕ್ ಹಾಗೂ ಔಷಧಿ ಅಂಗಡಿಗಳು ಎಂದಿನಂತೆ ಕಾರ್ಯನಿರ್ವಹಿಸಿದರೂ ಬೆರಳಿಣಿಕೆ ಯಷ್ಟು ಜನರಿಗೆ ಮಾತ್ರ ಪ್ರಯೋಜನವಾಯಿತು. ರಾಷ್ಟ್ರೀಕೃತ ಬ್ಯಾಂಕ್‍ಗಳು ಗ್ರಾಹಕರಿಲ್ಲದೆ ಬೆ. 11 ಗಂಟೆಯ ನಂತರ ಕಾರ್ಯನಿರ್ವಹಿಸಲಿಲ್ಲ.

ಪ್ರಮುಖ ಸ್ಥಳಗಳಲ್ಲಿ ಪೊಲೀಸರು ಬಂದೋಬಸ್ತ್ ಕಾರ್ಯದಲ್ಲಿ ತೊಡಗಿಸಿಕೊಂಡರು. ನಿಷೇಧಾಜ್ಞೆ ಜಾರಿಯಲ್ಲಿದ್ದ ಕಾರಣ ಯಾವದೇ ಪ್ರತಿಭಟನೆ ಹಾಗೂ ಮೆರವಣಿಗೆ ನಡೆಯಲಿಲ್ಲ.

ಪಾಲಿಬೆಟ್ಟದಲ್ಲಿ ಬಂದ್‍ಗೆ ವರ್ತಕರು ಸಂಪೂರ್ಣ ಬೆಂಬಲ ವ್ಯಕ್ತಪಡಿಸಿದರು. ಗ್ರಾಮದಲ್ಲಿ ಜನರ ಓಡಾಟ ಕಡಿಮೆ ಇದ್ದ ಕಾರಣ ಯಾವದೇ ವ್ಯಾಪಾರ ಇರಲಿಲ್ಲ. ಆದರೂ ಕೆಲವು ವರ್ತಕರು ಅಂಗಡಿಗಳನ್ನು ತೆರೆದು ವ್ಯಾಪಾರದಲ್ಲಿ ತೊಡಗಿಸಿಕೊಂಡರು. ಮೇಲ್ನೊಟಕ್ಕೆ ಪ್ರಚೋದನಾಕಾರಿಯಾಗಿ ಕಂಡುಬಂದರೂ ಹಿಂದೂಪರ ಸಂಘಟನೆಯ ಕಾರ್ಯಕರ್ತರು ಶಾಂತಿಯಿಂದ ವರ್ತಿಸಿ ಯಾವದೇ ಗೊಂದಲಗಳಿಗೆ ಆಸ್ಪದ ನೀಡಲಿಲ್ಲ.

ಮುಸಲ್ಮಾನರ ಶುಕ್ರವಾರದ ಪಾರ್ಥನೆ ಮೇಲೆ ತೊಂದರೆ ಇಲ್ಲದೆ ನಡೆಯಿತು. ಡಿವೈಎಸ್‍ಪಿ ದಿವಾಕರ್ ನೇತೃತ್ವದಲ್ಲಿ ಆಯೋಜಿಸಿದ್ದ ಶಾಂತಿ ಸಭೆಯಲ್ಲಿ ಶುಕ್ರವಾರದ ಪ್ರಾರ್ಥನೆಗೆ ಬಂದೋಬಸ್ತ್ ಒದಗಿಸುವಂತೆ ಮುಸ್ಲಿಂ ಮುಖಂಡರು ಮಾಡಿದ್ದ ಮನವಿಗೆ ಸ್ಪಂದಿಸಿ ಭದ್ರತೆ ಒದಗಿಸಲಾಗಿತ್ತು.

ವೀರಾಜಪೇಟೆ

ಟಿಪ್ಪು ಜಯಂತಿ ವಿರೋಧಿಸಿ ಟಿಪ್ಪು ಜಯಂತಿ ವಿರೋಧಿ ಹೋರಾಟ ಸಮಿತಿ ಕರೆ ನೀಡಿದ ಬಂದ್ ಹಿನ್ನೆಲೆ ವೀರಾಜಪೇಟೆಯಲ್ಲಿ ಇಂದು ಶಾಂತಿಯುತವಾಗಿ ಬಂದ್ ಆಚರಿಸಲಾಯಿತು.

ಶಾಲಾ ಕಾಲೇಜುಗಳು, ಅಂಗಡಿ ಮುಂಗಟ್ಟುಗಳು, ಹೊಟೇಲು ಸಂಘ ಸಂಸ್ಥೆಗಳು ಸ್ವಯಂ ಪ್ರೇರಿತವಾಗಿ ಮುಚ್ಚಿ ಬಂದ್‍ಗೆ ಬೆಂಬಲ ಸೂಚಿಸಿದವು. ಪಟ್ಟಣದಲ್ಲಿ ಖಾಸಗಿ ಬಸ್ಸುಗಳು, ಆಟೋ ರಿಕ್ಷಾಗಳು, ಟ್ಯಾಕ್ಷಿಗಳು ಸಂಚರಿಸಲಿಲ್ಲ. ಸಾರಿಗೆ ಸಂಸ್ಥೆ ಬಸ್ಸು ನಿಲ್ದಾಣದಲ್ಲಿ ತಂಗಿದ್ದ ಬಸ್ಸುಗಳು ಬೆಳಿಗ್ಗೆ 8ರವರೆಗೆ ಸಂಚರಿಸಿದ ನಂತರ ಸಂಚಾರ ಪೂರ್ಣವಾಗಿ ಸ್ಥಗಿತಗೊಂಡಿತು. ಕೊಡಗು ಕೇರಳ ಸಂಪರ್ಕದ ಕೇರಳ ಸಾರಿಗೆ ಸಂಸ್ಥೆಯ ಮೂರು ಬಸ್ಸುಗಳು ಹೊರತು ಪಡಿಸಿದರೆ ಇತರ ಯಾವದೇ ಬಸ್ಸುಗಳು ಬೆಳಗಿನಿಂದಲೇ ಸಂಚರಿಸಲಿಲ್ಲ. ಸಮುಚ್ಚಯ ನ್ಯಾಯಾಲಯಗಳು ತೆರೆದಿದ್ದರೂ ಕಕ್ಷಿದಾರರಿರಲಿಲ್ಲ. ಸಾರ್ವಜನಿಕ ಆಸ್ಪತ್ರೆಯಲ್ಲಿ ರೋಗಿಗಳ ಸಂಖ್ಯೆ ವಿರಳವಾಗಿತ್ತು.

144ನೇ ವಿಧಿ ಜಾರಿಯಲ್ಲಿದ್ದುದರಿಂದ ಪಟ್ಟಣದಲ್ಲಿ ಯಾವದೇ ಪ್ರತಿಭಟನೆಗಳು ನಡೆದಿಲ್ಲ. ಪಟ್ಟಣದ ಮುಖ್ಯ ರಸ್ತೆಯಲ್ಲಿ ಅಲ್ಲಲ್ಲಿ ಗುಂಪು ಕೂಡುತ್ತಿದ್ದವರನ್ನು ಪೊಲೀಸರು ಚದುರಿಸುತ್ತಿದ್ದರು.

ವೀರಾಜಪೇಟೆಯ ಪಟ್ಟಣದಾದ್ಯಂತ ಡಿ.ವೈಎಸ್‍ಪಿ ನಾಗಪ್ಪ ಹಾಗೂ ಸರ್ಕಲ್ ಇನ್ಸ್‍ಪೆಕ್ಟರ್ ಎನ್. ಕುಮಾರ್ ಆರಾಧ್ಯ ಬಂದೋಬಸ್ತ್ ಉಸ್ತುವಾರಿ ವಹಿಸಿದ್ದರು.

ಸಿದ್ದಾಪುರ

ಟಿಪ್ಪು ಜಯಂತಿ ಆಚರಣೆ ಖಂಡಿಸಿ ಬಿ.ಜೆ.ಪಿ ಹಾಗೂ ಹಿಂದೂ ಪರ ಸಂಘಟನೆಗಳು ಬಂದ್ ಕರೆ ನೀಡಿದ್ದ ಹಿನೆÀ್ನಲೆಯಲ್ಲಿ ಸಿದ್ದಾಪುರದಲ್ಲಿ ಭಾಗಶಃ ಬಂದ್ ನಡೆಯಿತು. ಸಿದ್ದಾಪುರ ನಗರದಲ್ಲಿ ಖಾಸಗಿ ಬಸ್ ಸಂಚಾರ ಇಲ್ಲದೆ ತೆರೆಯಲ್ಪಟ್ಟಿದ್ದ ಕೆಲ ಅಂಗಡಿಗಳಿಗೆ ಗ್ರಾಹಕರಿಲ್ಲದೆ ಬಿಕೋ ಎನ್ನುತ್ತಿತ್ತು. ಸಿದ್ದಾಪುರ ಬಸ್ ನಿಲ್ದಾಣ ಹಾಗೂ ಪ್ರಮುಖ ಬೀದಿಗಳಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಕಲ್ಪಿಸಲಾಗಿತ್ತು.