ಕುಶಾಲನಗರ, ನ. 10: ಟಿಪ್ಪು ಜಯಂತಿ ಆಚರಣೆಗೆ ಕರೆ ನೀಡಿದ ರಾಜ್ಯ ಸರಕಾರದ ವಿರುದ್ಧ ಪ್ರತಿಭಟನೆ ನಡೆಸಿ ಹುತಾತ್ಮ ಕುಟ್ಟಪ್ಪ ಜಯಂತಿ ಆಚರಿಸಿದ ಟಿಪ್ಪು ಜಯಂತಿ ವಿರೋಧಿ ಸಮಿತಿ ಕಾರ್ಯಕರ್ತರನ್ನು ಕುಶಾಲನಗರದಲ್ಲಿ ಪೊಲೀಸರು ಬಂಧಿಸಿ ಬಿಡುಗಡೆಗೊಳಿಸಿದ ಘಟನೆ ನಡೆಯಿತು.

ಕುಶಾಲನಗರ ಗಣಪತಿ ದೇವಾಲಯದಲ್ಲಿ ಬೆಳಿಗ್ಗೆ 10 ಗಂಟೆಯಿಂದ ಭಜನೆಯಲ್ಲಿ ತೊಡಗಿದ್ದ ಹಿಂದೂಪರ ಸಂಘಟನೆಗಳ ಪ್ರಮುಖರು ಕುಟ್ಟಪ್ಪ ಅವರ ಆತ್ಮಕ್ಕೆ ಶಾಂತಿ ಕೋರಿ ಪೂಜೆ ಸಲ್ಲಿಸಿದರು. ನಂತರ ದೇವಾಲಯ ಮುಂಭಾಗ ಜಮಾಯಿಸಿದ ನೂರಾರು ಕಾರ್ಯಕರ್ತರು ಕುಟ್ಟಪ್ಪ ಅಮರ್‍ರಹೆ ಎಂಬ ಘೋಷಣೆಗಳೊಂದಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಸರಕಾರದ ವಿರುದ್ಧ ಧಿಕ್ಕಾರ ಕೂಗಿದರು. ದೇವಾಲಯದ ಮುಂಭಾಗ ಧರಣಿ ಕುಳಿತ ಪ್ರತಿಭಟನಾಕಾರರನ್ನು ಪೊಲೀಸರು ಬಂಧಿಸಿ ಬಸ್‍ನಲ್ಲಿ ಕುಶಾಲನಗರ ಗ್ರಾಮಾಂತರ ಠಾಣೆಗೆ ಕರೆದೊಯ್ದರು.

60 ಕ್ಕೂ ಅಧಿಕ ಮಂದಿ ಪ್ರತಿಭಟನಾಕಾರರನ್ನು ಸಾರಿಗೆ ಬಸ್ ಮೂಲಕ ಗ್ರಾಮಾಂತರ ಠಾಣೆಗೆ ಕರೆದೊಯ್ಯಲಾಯಿತು. ಮಧ್ಯಾಹ್ನದ ವೇಳೆಗೆ ಕಾರ್ಯಕರ್ತರನ್ನು ಬಿಡುಗಡೆಗೊಳಿಸಲಾಯಿತು.

ಪ್ರತಿಭಟನೆಯಲ್ಲಿ ಟಿಪ್ಪು ಜಯಂತಿ ವಿರೋಧಿ ಹೋರಾಟ ಸಮಿತಿ ಅಧ್ಯಕ್ಷ ಕೆ.ಜಿ. ಮನು, ಸಂಚಾಲಕ ಭಾಸ್ಕರ್ ನಾಯಕ್, ಕುಶಾಲನಗರ ಪಟ್ಟಣ ಪಂಚಾಯಿತಿ ಅಧ್ಯಕ್ಷೆ ರೇಣುಕಾ, ಎಂ.ಎಂ. ಚರಣ್, ಡಾಟಿ, ಜ್ಯೋತಿ ಪ್ರಮೀಳ, ಸಾವಿತ್ರಿ, ಇಂದಿರಾ ರಮೇಶ್, ಸದಸ್ಯರುಗಳಾದ ಹೆಚ್.ಎಂ. ಮಧುಸೂದನ್, ಜಿಲ್ಲಾ ಪಂಚಾಯಿತಿ ಸದಸ್ಯೆ ಮಂಜುಳಾ, ತಾಲೂಕು ಪಂಚಾಯಿತಿ ಸದಸ್ಯರಾದ ಡಿ.ಎಸ್. ಗಣೇಶ್, ಪುಷ್ಪಾ ಜನಾದರ್Àನ, ಬಿಜೆಪಿ ಪ್ರಮುಖರಾದ ಗಣಿಪ್ರಸಾದ್, ಎಂ.ಡಿ. ಕೃಷ್ಣಪ್ಪ, ನಿಡ್ಯಮಲೆ ದಿನೇಶ್, ಶಿವಾಜಿ ರಾವ್, ಹಿಂದೂಪರ ಸಂಘಟನೆಗಳ ಪ್ರಮುಖರಾದ ಜಿ.ಎಲ್. ನಾಗರಾಜ್, ಎಂ.ವಿ. ನಾರಾಯಣ, ಭರತ್ ಮಾಚಯ್ಯ, ಲಕ್ಷ್ಮಿನಾರಾಯಣ, ಮಂಜುನಾಥ್, ಅನೀಶ್, ಸಿ.ಎಸ್.ಮಧು ಮತ್ತಿತರರು ಇದ್ದರು.