ವೀರಾಜಪೇಟೆ, ನ. 10: ಸಾಕು ಪ್ರಾಣಿಗಳಿಂದ ರೋಗಗಳು ಹರಡುತ್ತಿದ್ದು ಸಾರ್ವಜನಿಕರು ತಮ್ಮ ಸಾಕು ಪ್ರಾಣಿಗಳಿಗೆ ಉಚಿತವಾಗಿ ರೋಗ ನಿರೋಧಕ ಲಸಿಕೆಯನ್ನು ಹಾಕಿಸುವಂತಾಗಬೇಕು ಎಂದು ವೀರಾಜಪೇಟೆ ಪಶುವೈದ್ಯ ಆಸ್ಪತ್ರೆಯ ಸಹಾಯಕ ನಿರ್ದೇಶಕÀ ಡಾ. ತಮ್ಮಯ್ಯ ಹೇಳಿದರು.

ಪಶುಪಾಲನಾ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆ, ಪಟ್ಟಣ ಪಂಚಾಯಿತಿ ಸಹಯೋಗದಲ್ಲಿ ಪಶುವೈದ್ಯ ಆಸ್ಪತ್ರೆ ಆವರಣದಲ್ಲಿ ಆಯೋಜಿಸಲಾಗಿದ್ದ ಸಾಕು ಪ್ರಾಣಿಗಳಿಗೆ ಉಚಿತವಾಗಿ ‘ರೇಬಿಸ್ ರೋಗ ನಿರೋಧಕ ಲಸಿಕಾ ಶಿಬಿರ’ದಲ್ಲಿ ಮಾತನಾಡಿದ ಡಾ. ತಮ್ಮಯ್ಯ ಈಗಾಗಲೇ ರೇಬಿಸ್ ರೋಗದಿಂದ 3 ಸಾವಿರಕ್ಕು ಹೆಚ್ಚು ಜನರು ದೇಶದೆಲ್ಲೆಡೆ ಮೃತಪಟ್ಟಿದ್ದು ಸಾವಿರಾರು ಪ್ರಾಣಿಗಳು ಮೃತಪಟ್ಟಿರುವದರಿಂದ ಸಾರ್ವಜನಿಕರು ರೇಬಿಸ್ ರೋಗ ಮುಕ್ತ ಸಮಾಜಕ್ಕೆ ಸಹಕರಿಸಬೇಕಾಗಿದೆ ಎಂದು ತಿಳಿಸಿದರು.

ಶಿಬಿರದಲ್ಲಿ 121 ಶ್ವಾನಗಳು ಹಾಗೂ 4 ಬೆಕ್ಕುಗಳಿಗೆ ರೋಗ ನಿರೋಧಕ ಚುಚ್ಚುಮದ್ದನ್ನು ನೀಡಲಾಯಿತು. ಕಾರ್ಯಕ್ರಮದಲ್ಲಿ ಡಾ. ಟಿ.ಜೆ. ರಾಕೇಶ್, ಮತ್ತು ಶಿವಶಂಕರ್, ಸಿ.ಎಸ್. ಕುಶಲ್ ಇತರರು ಉಪಸ್ಥಿತರಿದ್ದರು.