ಕೂಡಿಗೆ, ನ. 10: ವಾಲ್ನೂರು-ತ್ಯಾಗತ್ತೂರಿನ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕನ್ನಡ ರಾಜ್ಯೋತ್ಸವ ಹಾಗೂ ಸ್ಮಾರ್ಟ್ ಕ್ಲಾಸ್ ಉದ್ಘಾಟನೆ ಕಾರ್ಯಕ್ರಮ ನಡೆಯಿತು.
ಸ್ಮಾರ್ಟ್ ಕ್ಲಾಸ್ ಪ್ರಾರಂಭವಾಗಲು ಕಾರಣ ಕರ್ತರಾದ ಶಂಕುನ್ನಿ ಫೌಂಡೇಷನ್ ಸಂಸ್ಥಾಪಕ ಜಯಪ್ರಕಾಶ್ ಕಾರ್ಯಕ್ರಮ ಉದ್ಘಾಟಿಸಿ, ಮಾತನಾಡಿ, ಗ್ರಾಮಾಂತರ ಪ್ರದೇಶಗಳ ಸರ್ಕಾರಿ ಶಾಲೆಗಳಲ್ಲಿ ವಿದ್ಯಾಭ್ಯಾಸ ಮಾಡುವ ವಿದ್ಯಾರ್ಥಿಗಳಲ್ಲಿ ನವಚೈತನ್ಯ ತುಂಬುವ ನಿಟ್ಟಿನಲ್ಲಿ ಸ್ಮಾರ್ಟ್ ಕ್ಲಾಸ್ಅನ್ನು ಪ್ರಾರಂಭಿಸಲಾಗಿದೆ ಎಂದರು.
ಸ್ಮಾರ್ಟ್ಕ್ಲಾಸ್ಗೆ ಸೌಲಭ್ಯ ಒದಗಿಸಿದ ಚಂದ್ರಶೇಖರ್ ಮಾತನಾಡಿ, ಶಾಲೆಯ ಪರಿಸರ ಮತ್ತು ವಿದ್ಯಾರ್ಥಿಗಳ ಶಿಸ್ತು ಯಾವದೇ ಶಾಲೆಗಿಂತ ಕಡಿಮೆಯಿಲ್ಲ. ವಿದ್ಯಾರ್ಥಿಗಳಲ್ಲಿ ಶಿಸ್ತು ಮತ್ತು ಕಲಿಕಾ ಶ್ರದ್ಧೆ ಹೆಚ್ಚಲು ಶಿಕ್ಷಕರು ವಿಶೇಷವಾಗಿ ಶ್ರಮಿಸುತ್ತಿರುವ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿದರು.
ಸನ್ ಇನ್ಫೋಟೆಕ್ ಎಂಬ ಕಂಪ್ಯೂಟರ್ ಸಂಸ್ಥೆ ರಾಜ್ಯದ ಹಲವಾರು ಖಾಸಗಿ ಶಾಲೆಗಳಿಗೆ ಸ್ಮಾರ್ಟ್ ಕ್ಲಾಸ್ಗೆ ಬೇಕಾಗುವ ಅಗತ್ಯ ಕಲಿಕಾ ಸಂಪನ್ಮೂಲಗಳನ್ನು ಒದಗಿಸಿದೆ. ಮಕ್ಕಳ ಹಿತದೃಷ್ಟಿಯಿಂದ ಸರ್ಕಾರಿ ಶಾಲೆಗಳಲ್ಲಿ ಕಲಿಯುತ್ತಿರುವ ಬಡ ವಿದ್ಯಾರ್ಥಿಗಳಿಗೆ ಇದು ಉಪಯೋಗವಾಗುತ್ತದೆ ಎಂದರು.
ಶಾಲಾ ಮುಖ್ಯಶಿಕ್ಷಕ ಹೆಚ್.ಕೆ. ಕುಮಾರ್ ಪ್ರಸ್ತಾವಿಕವಾಗಿ ಮಾತನಾಡಿದರು. ಶಿಕ್ಷಕ ಚೇತನ್ ಕುಮಾರ್ ಕನ್ನಡ ಭಾಷೆ, ನೆಲ, ಜಲ ಹಾಗೂ ಇತಿಹಾಸ ಮತ್ತು ಕನ್ನಡ ರಾಜ್ಯೋತ್ಸವದ ಮಹತ್ವದ ಬಗ್ಗೆ ಮಾತನಾಡಿದರು. ಗ್ರಾಮ ಪಂಚಾಯಿತಿ ಸದಸ್ಯ ಭುವನೇಂದ್ರ ಅವರು ಕನ್ನಡ ಭಾಷೆಯ ಸ್ಥಿತಿಗತಿಗಳ ಬಗ್ಗೆ ಮಾತನಾಡಿದರು.
ವಾಲ್ನೂರು-ತ್ಯಾಗತ್ತೂರು ಗ್ರಾ.ಪಂ. ಅಧ್ಯಕ್ಷೆ ಲಕ್ಷ್ಮಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಜಯಪ್ರಕಾಶ್ ದಂಪತಿಗಳನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷೆ ಲಕ್ಷ್ಮಿ, ಗ್ರಾ.ಪಂ. ಸದಸ್ಯೆ ಕವಿತ, ಕಮಲಮ್ಮ, ಶಾಲೆಯ ಪೋಷಕ ವೃಂದ, ಶಿಕ್ಷಕರು ಇದ್ದರು.