ವೀರಾಜಪೇಟೆ, ನ. 8: ರಾಜ್ಯ ಸರ್ಕಾರ ಕಂದಾಯ ಇಲಾಖೆಯಲ್ಲಿ 30 ವರ್ಷಗಳಿಂದ ಗ್ರಾಮ ಸಹಾಯಕರಾಗಿ ದುಡಿಯುತ್ತಿರುವ ನೌಕರರನ್ನು ಡಿ ದರ್ಜೆ ನೌಕರರನ್ನಾಗಿ ಖಾಯಂಗೊಳಿಸುವಂತೆ ಒತ್ತಾಯಿಸಿ ಗ್ರಾಮ ಸಹಾಯಕರು ತಹಶೀಲ್ದಾರ್ ಕಚೇರಿಯ ಶಿರಸ್ತೆದಾರ್ ಅವರಿಗೆ ಮನವಿ ಸಲ್ಲಿಸಿದರು. ರಾಜ್ಯದ ಎಲ್ಲಾ ಜಿಲ್ಲೆ ಮತ್ತು ತಾಲೂಕು ಕಚೇರಿಗಳಲ್ಲಿ ಮೂರು ದಶಕಗಳಿಂದ ಕಾರ್ಯ ನಿರ್ವಹಿಸುತ್ತಿರುವ ಗ್ರಾಮ ಸಹಾಯಕರನ್ನು ರಾಜ್ಯದ ಕಂದಾಯ ಸಚಿವರು ಡಿ ಗ್ರೂಪ್ ನೌಕರರಾಗಿ ಖಾಯಂ ಮಾಡುವದಾಗಿ 2016 ರ ಅಧಿವೇಶನದಲ್ಲಿ ಹೇಳಿದ್ದು, ಘೋಷಣೆ ಮಾಡಿರುವದಿಲ್ಲ ಹತ್ತು ಹಲವು ಬಾರಿ ಸರ್ಕಾರಕ್ಕೆ ಮನವಿ ಸಲ್ಲಿಸಿದರೂ ಮನವಿಯನ್ನು ಪರಿಗಣಿಸಿರುವದಿಲ್ಲ ಗ್ರಾಮ ಸಹಾಯಕರಿಗೆ ಸರ್ಕಾರ ರೂ. 10,000 ವೇತನವನ್ನು ನೀಡುತ್ತಿದೆ. ಇಂದಿನ ದುಬಾರಿ ವೆಚ್ಚದಲ್ಲಿ ಮಕ್ಕಳ ವಿದ್ಯಾಭ್ಯಾಸ, ಪೋಷಕರ ಆರೋಗ್ಯ ನಿರ್ವಹಣೆ ಮತ್ತು ಜೀವನ ನಿರ್ವಹಿಸುವದು ಕಷ್ಟಸಾಧ್ಯವಾಗಿ ಪರಿಣಮಿಸಿದೆ. ಹೀಗಾಗಿ ವೇತನ ಹೆಚ್ಚಳದೊಂದಿಗೆ ಪ್ರಮುಖ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಮನವಿ ಸಲ್ಲಿಸಿದ್ದಾರೆ. ಸರ್ಕಾರದ ಎಲ್ಲ ಕೆಲಸಗಳನ್ನು ಪೂರ್ಣಾವಧಿಯಲ್ಲಿ ಗ್ರಾಮ ಸಹಾಯಕರನ್ನು ಬಳಸಿಕೊಳ್ಳ ಲಾಗುತ್ತಿದೆ ಅಲ್ಲದೆ ಬೆಳೆ ಸಮೀಕ್ಷೆ ಕಾರ್ಯ ನಿರ್ವಹಿಸಲು ಗ್ರಾಮ ಸಹಾಯಕರನ್ನು ನೇರವಾಗಿ ನೇಮಕ ಮಾಡಿರುತ್ತಾರೆ. ಸಂಘದ ಪದಾಧಿ ಕಾರಿಗಳಾದ ಬಿ.ಕೆ. ದಿನೇಶ್, ವಿ.ವಿ. ಲಕ್ಷ್ಮಣ, ಗೋಪಾಲ ಕೃಷ್ಣ, ಬೆಳ್ಯಪ್ಪ ಕುರಿಯಕೊಸ್, ಪಿ.ಎಸ್. ಅಯ್ಯಪ್ಪ, ಬಿ.ಟಿ. ಶರಣು ಸುಬ್ರಮಣಿ, ಪಿ.ಜಿ. ಜನಾರ್ಧನ, ಅರಸು, ಹೆಚ್.ಎಂ. ಪ್ರಕಾಶ್ ಉಪಸ್ಥಿತರಿದ್ದರು.