ಮಡಿಕೇರಿ ಅ. 30 : ರಾಜ್ಯ ಕಾಂಗ್ರೆಸ್ ಸರಕಾರ ನುಡಿದಂತೆ ನಡೆದಿದ್ದು, ಸರಕಾರದ ಸಾಧನೆಗಳ ಬಗ್ಗೆ ರಾಜ್ಯದ ಜನರು ಮೆಚ್ಚುಗೆಯ ಮಾತುಗಳನ್ನಾಡುತ್ತಿದ್ದು, ಮುಂಬ ರುವ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಮತ್ತೆ ಅಧಿಕಾರಕ್ಕೆ ಬರಲಿದೆ ಎಂದು ಕಾಂಗ್ರೆಸ್ ಮುಖಂಡ ಹಾಗೂ ಹಿರಿಯ ವಕೀಲ ಹೆಚ್. ಎಸ್. ಚಂದ್ರಮೌಳಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ನಗರ ಕಾಂಗ್ರೆಸ್ ನೇತೃತ್ವದಲ್ಲಿ ನಗರದಲ್ಲಿ ನಡೆದ ಮನೆ ಮನೆ ಕಡೆಗೆ ಕಾಂಗ್ರೆಸ್ ನಡಿಗೆ ಅಭಿಯಾನದಲ್ಲಿ ವಿವಿಧ ಬಡಾವಣೆಗಳಿಗೆ ಭೇಟಿ ನೀಡಿದ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು. ಮನೆ ಮನೆ ಕಡೆಗೆ ಕಾಂಗ್ರೆಸ್ ನಡಿಗೆ ಒಂದು ವಿನೂತನವಾದ ಕಾರ್ಯಕ್ರಮ ವಾಗಿದೆ. ಪ್ರತಿಯೊಬ್ಬರ ಮನೆ ಬಾಗಿಲಿಗೆ ತೆರಳಿ ಅವರ ಸಮಸ್ಯೆ ಗಳನ್ನು ಆಲಿಸಿ ಆಗಬೇಕಾಗಿರುವ ಕಾರ್ಯಗಳ ಬಗ್ಗೆ ಚರ್ಚಿಸಲಾಗುತ್ತಿದೆ. ಸಾರ್ವಜನಿಕರಿಂದ ಅಭೂತಪೂರ್ವ ಸ್ವಾಗತ ದೊರೆಯುತ್ತಿದ್ದು, ರಾಜ್ಯದ ಕಾಂಗ್ರೆಸ್ ಸರ್ಕಾರ ನುಡಿದಂತೆ ನಡೆದು ಜನಪರ ಸರಕಾರ ಎನ್ನುವ ಹೆಗ್ಗಳಿಕೆಗೆ ಪಾತ್ರವಾಗಿದೆ. ಇದಕ್ಕೆ ಅಭಿಯಾನದಲ್ಲಿ ದೊರೆಯುತ್ತಿರುವ ಜನಬೆಂಬಲವೇ ಸಾಕ್ಷಿಯಾಗಿದೆ ಎಂದು ಚಂದ್ರಮೌಳಿ ಹರ್ಷ ವ್ಯಕ್ತಪಡಿಸಿದರು. ಮಡಿಕೇರಿ ನಗರದಲ್ಲಿ ಕಾಂಗ್ರೆಸ್ ಪಕ್ಷದ ಪರ ಜನರ ಅಭಿಮಾನ ಹೆಚ್ಚಾಗಿದ್ದು, ಇದಕ್ಕೆ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರ ಆಡಳಿತ ವೈಖರಿಯೇ ಕಾರಣವಾಗಿದೆ ಎಂದು ಅವರು ಅಭಿಪ್ರಾಯಪಟ್ಟರು.

ರಾಜ್ಯ ರೇಷ್ಮೆ ಮಾರುಕಟ್ಟೆ ಅಭಿವೃದ್ಧಿ ನಿಗಮದ ಅಧ್ಯಕ್ಷ ಟಿ. ಪಿ. ರಮೇಶ್ ಮಾತನಾಡಿ, ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು 4 ವರ್ಷ ಪೂರ್ಣಗೊಂಡಿದೆ. ಈ ಅವಧಿಯಲ್ಲಿ ಕರ್ನಾಟಕ ರಾಜ್ಯದ ಸಮಗ್ರ ಅಭಿವೃದ್ಧಿಗೆ ಸಿದ್ಧರಾಮಯ್ಯ ಅವರ ನೇತೃತ್ವದ ಸರ್ಕಾರ ಸಾಕಷ್ಟು ಯೋಜನೆಗಳನ್ನು ಅನುಷ್ಠಾನಗೊಳಿಸಿ ಸಮರ್ಥ ಸರಕಾರವೆನಿಸಿಕೊಂಡಿದೆ ಎಂದರು. ಸರಕಾರ ಪ್ರಗತಿಪರ ವಿಚಾರಧಾರೆಯಿಂದ ಎಲ್ಲಾ ವರ್ಗದ ಜನತೆಗೆ ನ್ಯಾಯ ನೀಡಿದೆ. ಈ ಸಾಧನೆಯ ಮಾಹಿತಿಗಳನ್ನು ಮನೆ-ಮನೆಗೆ ನೀಡುವ ಕಾರ್ಯಕ್ರಮ ಯಶಸ್ವಿಯಾಗಿದೆ ಎಂದು ರಮೇಶ್ ಹೆಮ್ಮೆ ವ್ಯಕ್ತಪಡಿಸಿದರು.

ಕಾಂಗ್ರೆಸ್ ನಗರಾಧ್ಯಕ್ಷ ಕೆ. ಯು. ಅಬ್ದುಲ್ ರಜಾóಕ್ ಮಾತನಾಡಿ, ನಗರದಲ್ಲಿ ಕಾಂಗ್ರೆಸ್ ಕಾರ್ಯಕರ್ತರ ಉತ್ಸಾಹ ಹೆಚ್ಚಾಗಿದ್ದು, ಪಕ್ಷದ ಚಟುವಟಿಕೆಗೆ ಅಭೂತಪೂರ್ವ ಬೆಂಬಲ ದೊರೆಯುತ್ತಿದೆ ಎಂದರು.

ಕೆಪಿಸಿಸಿ ಮುಖಂಡ ಮಿಟ್ಟು ಚಂಗಪ್ಪ, ಕಾಂಗ್ರೆಸ್ ಅಲ್ಪಸಂಖ್ಯಾತರ ಘಟಕದ ಜಿಲ್ಲಾಧ್ಯಕ್ಷ ಯಾಕುಬ್, ಮಹಿಳಾ ಕಾಂಗ್ರೆಸ್ ಜಿಲ್ಲಾಧ್ಯಕ್ಷೆ ಜಿ. ಆರ್. ಪುಷ್ಪಲತಾ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಚುಮ್ಮಿ ದೇವಯ್ಯ, ಮಾಜಿ ಅಧ್ಯಕ್ಷರಾದ ಸುರಯ್ಯಾ ಅಬ್ರಾರ್, ನಗರಸಭಾ ಸದಸ್ಯರುಗಳಾದ ಜುಲೆಕಾಬಿ, ಪ್ರಕಾಶ್ ಆಚಾರ್ಯ, ಹೆಚ್. ಎಂ. ನಂದಕುಮಾರ್, ವೆಂಕಟೇಶ್, ರೆಹಮತ್ತುಲ್ಲಾ, ನಗರ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಪಾರ್ವತಿ, ಕಾರ್ಯದರ್ಶಿ ಮುನೀರ್ ಮಾಚಾರ್, ಪ್ರಮುಖರಾದ ಉಸ್ಮಾನ್, ಜಫ್ರುಲ್ಲಾ, ಮಹಮ್ಮದ್, ಪ್ರಭುರೈ, ಯೂಸುಫ್, ಟಿ. ಎಂ. ಅಯ್ಯಪ್ಪ, ಮ್ಯಾಥ್ಯು, ಜಗ್ಗ, ಇಸ್ಮಾಯಿಲ್, ಇಬ್ರಾಹಿಂ, ರಾಧಾ, ಕುಸುಮ, ಶಶಿ, ಬಂಧಿಖಾನೆ ಸಮಿತಿ ಪ್ರಮುಖ ಹನೀಫ್, ಎಂ.ಎ.ಉಸ್ಮಾನ್ ಮತ್ತಿತರರು ಹಾಜರಿದ್ದರು.