ಭಾರತದ ಪ್ರಥಮ ಸ್ವಾತಂತ್ರ್ಯ ಸಂಗ್ರಾಮವೆಂದೇ ಹೇಳಲಾಗುವ 1834ರ ದಶಕದಲ್ಲಿ ಕೊಡಗಿನಲ್ಲಿ ನಡೆದ ಅಮರ ಸುಳ್ಯ ಕಾಟಕಾಯಿ ದಂಗೆಯಲ್ಲಿ ಸ್ವಾತಂತ್ರ್ಯಕ್ಕಾಗಿ ಬ್ರಿಟೀಷರ ವಿರುದ್ಧ ಹೋರಾಡಿ ಗಲ್ಲಿಗೇರಿಸಲ್ಪಟ್ಟು ಹುತಾತ್ಮರಾದ ಸುಬೇದಾರ್ ಗುಡ್ಡೆಮನೆ ಅಪ್ಪಯ್ಯ ಗೌಡರು ಪ್ರಥಮ ಸ್ವಾತಂತ್ರ್ಯ ಹೋರಾಟಗಾರರೆಂದೇ ಹೇಳಲಾಗುತ್ತಿದ್ದು, ಹುತಾತ್ಮರಾದ ಗೌಡರನ್ನು ಇಂದು ಸ್ಮರಿಸಿ ಕೊಳ್ಳಲಾಗುತ್ತದೆ.

ಕೊಡಗನ್ನು ಬ್ರಿಟೀಷರು ವಶಪಡಿಸಿಕೊಂಡ ಸಂದರ್ಭ ಕ್ಯಾಪ್ಟನ್ ಲಿಹಾರ್ಡಿ ಕೊಡಗಿನ ಅರಸ ಚಿಕ್ಕವೀರರಾಜೇಂದ್ರನನ್ನು ಗಡೀಪಾರು ಮಾಡಿದ್ದಲ್ಲದೆ, ಜನತೆಯ ಮೇಲೆ ತೆರಿಗೆ ವಿಧಿಸಿ ಆದೇಶ ಹೊರಡಿಸಿದ್ದನು. ಇದನ್ನು ವಿರೋಧಿಸಿದ ಕೆಲವರು ಬ್ರಿಟೀಷರ ಸಿಡಿದೆದ್ದು, ಗುಪ್ತವಾಗಿ ಸೇನೆ ಕಟ್ಟಿದರು. ಸುಳ್ಯದ ಕೆದಂಬಾಡಿ ರಾಮಗೌಡರು, ಶನಿವಾರಸಂತೆಯ ಪುಟ್ಟಬಸಪ್ಪ, ಸುಳ್ಯದ ಕುಡೆಕಲ್ಲು, ಕುಟ್ಟ ಸೇರಿದಂತೆ ಇತರರು ಬಲಮುರಿ ಗ್ರಾಮದ ಗುಡ್ಡೆಮನೆ ಅಪ್ಪಯ್ಯಗೌಡರ ನೇತೃತ್ವದಲ್ಲಿ ಸೇನೆ ರಚಿಸಿ ಮಂಗಳೂರಿನಲ್ಲಿ ಗುಪ್ತ ಸಭೆಗಳ ಮೂಲಕ ಬ್ರಿಟೀಷರ ವಿರುದ್ಧ ದಂಗೆಯೇಳಲು ಸಂಚು ರೂಪಿಸಿದರು. ಆದರೆ, ಬ್ರಿಟೀಷರೊಂದಿಗೆ ಆಪ್ತರಾಗಿದ್ದವರು ಗೌಡರ ಸೇನೆಯ ಬಗ್ಗೆ ಬ್ರಿಟೀಷರಿಗೆ ಮಾಹಿತಿ ನೀಡಿದ್ದಲ್ಲದೆ, ಸೇನೆಯನ್ನು ಸೆರೆ ಹಿಡಿಯುವಲ್ಲಿ ಪ್ರಮುಖ ಪಾತ್ರ ವಹಿಸಿದರು.

ಸುಬೇದಾರರಾಗಿದ್ದ ಅಪ್ಪಯ್ಯ ಗೌಡರು ತಮ್ಮ ಹುದ್ದೆಗೆ ರಾಜೀನಾಮೆ ನೀಡಿ ಬ್ರಿಟೀಷರ ವಿರುದ್ಧ ದಂಗೆಯೆದ್ದು ಮಡಿಕೇರಿ ಕೋಟೆ ಕಡೆಗೆ ತಮ್ಮ ಸೇನೆಯೊಂದಿಗೆ ಬರುತ್ತಿದ್ದ ಸಂದರ್ಭ ಲಿಹಾರ್ಡಿ ಕಳುಹಿಸಿದ ಸೇನೆ ಅಪ್ಪಯ್ಯ ಗೌಡರ ಸೇನೆಯನ್ನು ಸದೆಬಡಿದು ಅಪ್ಪಯ್ಯಗೌಡ ಸೇರಿದಂತೆ, ರಾಮೇಗೌಡ, ಪುಟ್ಟ ಬಸಪ್ಪ ಇನ್ನಿತರರನ್ನು ಸೆರೆ ಹಿಡಿಯಲಾಯಿತು.

ಸೆರೆವಾಸದಲ್ಲಿದ್ದ ರಾಮೇಗೌಡ, ಪುಟ್ಟಬಸಪ್ಪ ಇನ್ನಿತರರನ್ನು ಮಂಗಳೂರಿನಲ್ಲಿ ಗಲ್ಲಿಗೇರಿಸಿದರೆ, ಅಪ್ಪಯ್ಯ ಗೌಡರನ್ನು 1837ನೇ ಅಕ್ಟೋಬರ್ 31 ರಂದು ಮಡಿಕೇರಿಯ ಕೋಟೆ ಆವರಣದಲ್ಲಿ ಬಹಿರಂಗವಾಗಿ ಗಲ್ಲಿಗೇರಿಸಲಾಯಿತೆಂದು ಉಲ್ಲೇಖವಿದೆ. ಬ್ರಿಟೀಷರ ವಿರುದ್ಧ ಧಂಗೆ ಏಳುವವರಿಗೆ ಎಚ್ಚರಿಕೆ ನೀಡುವ ಸಲುವಾಗಿ ಗೌಡರನ್ನು ಗಲ್ಲಿಗೇರಿಸುವ ಸಂದರ್ಭ ಸಾರ್ವಜನಿಕರನ್ನು ಅಪ್ಪಯ್ಯಗೌಡ ಪತ್ನಿ ಸೇರಿದಂತೆ ಕುಟುಂಬಸ್ಥರನ್ನು ಕರೆಸಿ, ಎಲ್ಲರ ಸಮ್ಮುಖದಲ್ಲೇ ಗಲ್ಲಿಗೇರಿಸಲಾಯಿತು.

ಇದಾದ ಬಳಿಕ ಸ್ವಾತಂತ್ರ್ಯ ಹೋರಾಟ ಮತ್ತೆ ಮುಂದುವರಿಯಿತು. ಬ್ರಿಟೀಷರ ವಿರುದ್ಧ ಹೋರಾಡಿದ ಅಪ್ಪಯ್ಯಗೌಡರ ಅನುಯಾಯಿ ಗಳಾಗಿದ್ದವರು. 1979ರಲ್ಲಿ ಹಿರಿಯ ಸಾಹಿತಿ ಬಿ.ಡಿ. ಗಣಪತಿ ಅವರ ನೇತೃತ್ವದಲ್ಲಿ ಸಂತಾಪ ಸಭೆ ನಡೆಸಿ ಗೌರವ ಸೂಚಿಸಿದ್ದರು.

ತದನಂತರದಲ್ಲಿ ಇದೀಗ ಗೌಡ ಜನಾಂಗದ ಪ್ರಮುಖರು, ಸಾರ್ವಜನಿಕರು ಸೇರಿ ಸಮಿತಿ ರಚನೆ ಮಾಡಿ ನಿರಂತರ ಪ್ರಯತ್ನ ಮಾಡಿದ ಪರಿಣಾಮ ಮಡಿಕೇರಿಯ ಸುದರ್ಶನ ವೃತ್ತದ ಬಳಿ ಸರಕಾರದ ಮುಖೇನ ಅಪ್ಪಯ್ಯ ಗೌಡರ ಪ್ರತಿಮೆ ನಿರ್ಮಾಣ ಮಾಡುವ ಮೂಲಕ ಅಪ್ಪಯ್ಯ ಗೌಡರ ಇತಿಹಾಸವನ್ನು ನಾಡಿಗೆ ಪರಿಚಯಿಸುವ ಕೆಲಸವಾಗಿದೆ. ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕøತಿ ಇಲಾಖೆ, ಅರೆಭಾಷೆ ಅಕಾಡೆಮಿ, ಅಪ್ಪಯ್ಯ ಗೌಡರ ಸ್ಮಾರಕ ಉಸ್ತುವಾರಿ ಸಮಿತಿಯವರ ಮೂಲಕ ಗೌಡರ ಸಂಸ್ಮರಣೆ ಕಾರ್ಯ ಮಾಡಲಾಗುತ್ತಿರುವದು ಸ್ವಾತಂತ್ರ್ಯ ಸೇನಾನಿಗೆ ಸಲ್ಲಿಸುತ್ತಿರುವ ಗೌರವವಾಗಿದೆ.

-ಕುಡೆಕಲ್ ಸಂತೋಷ್