ಸೋಮವಾರಪೇಟೆ, ಅ. 9: ಕಾವೇರಿ ನೀರಾವರಿ ನಿಗಮದಿಂದ ಕೈಗೊಳ್ಳಲಾಗಿರುವ ಕೊಡಗು-ಹಾಸನ ಜಿಲ್ಲೆಗಳನ್ನು ಸಂಪರ್ಕಿಸುವ, ಹೇಮಾವತಿ ನದಿಗೆ ನಿರ್ಮಿಸಿರುವ ಸೇತುವೆ ಮತ್ತು ಕಾಂಕ್ರೀಟ್ ರಸ್ತೆ ಕಾಮಗಾರಿ ಸಂಪೂರ್ಣ ಕಳಪೆಯಾಗಿದ್ದು, ಸಂಬಂಧಿಸಿದ ಗುತ್ತಿಗೆದಾರರು ಮತ್ತು ಅಭಿಯಂತರರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕೆಂದು ಮಾಹಿತಿ ಹಕ್ಕು ಕಾರ್ಯಕರ್ತ ಹಾಗೂ ಶಾಂತಳ್ಳಿ ಗ್ರಾ.ಪಂ. ಅಧ್ಯಕ್ಷ ಬಗ್ಗನ ಅನಿಲ್ಕುಮಾರ್ ಅವರು ಮುಖ್ಯಮಂತ್ರಿ ಸೇರಿದಂತೆ ಇಲಾಖೆಯ ಇತರ ಅಧಿಕಾರಿಗಳಿಗೆ ದೂರು ನೀಡಿದ್ದಾರೆ.
ಕಳೆದ 2014-15 ಮತ್ತು 2015-16ನೇ ಸಾಲಿನಲ್ಲಿ ಕೋಟ್ಯಾಂತರ ರೂಪಾಯಿ ವ್ಯಯಿಸಿ ನಿರ್ಮಿಸಲಾಗಿರುವ ಸೇತುವೆ ಅವೈಜ್ಞಾನಿಕವಾಗಿ ನಿರ್ಮಾಣವಾಗಿದ್ದು, ಕಾಮಗಾರಿ ಸಂದರ್ಭ ಗುತ್ತಿಗೆದಾರರು ಹಾಗೂ ಸಂಬಂಧಿಸಿದ ಇಂಜಿನಿಯರ್ ನಿರ್ಲಕ್ಷ್ಯ ವಹಿಸಿದ್ದಾರೆ. ಸೇತುವೆಯು ಅಂಕು-ಡೊಂಕಾಗಿ ನಿರ್ಮಾಣವಾಗಿದೆಯಲ್ಲದೇ, ಗುಣಮಟ್ಟವನ್ನೂ ಕಾಯ್ದುಕೊಂಡಿಲ್ಲ ಎಂದು ದೂರಿನಲ್ಲಿ ಆರೋಪಿಸಲಾಗಿದೆ.
ಇದೇ ಯೋಜನೆಯಡಿ ನಿರ್ಮಿಸಲಾಗಿರುವ ಕಾಂಕ್ರೀಟ್ ರಸ್ತೆ ಕಾಮಗಾರಿಯೂ ಕಳಪೆಯಾಗಿದ್ದು, ನಿರ್ಮಾಣವಾದ ಒಂದೇ ವರ್ಷದಲ್ಲಿ ಗುಂಡಿಗಳು ನಿರ್ಮಾಣವಾಗಿ ರಸ್ತೆಯ ಮೇಲೆ ಕೆಸರಿನ ನೀರು ನಿಲ್ಲುತ್ತಿದೆ. ಮೇಲ್ನೋಟಕ್ಕೆ ಕಾಮಗಾರಿ ಕಳಪೆ ಎಂದು ಕಂಡುಬರುತ್ತಿದ್ದು ಈ ಬಗ್ಗೆ ತನಿಖೆಗೆ ಆದೇಶಿಸಬೇಕೆಂದು ಮುಖ್ಯಮಂತ್ರಿಯನ್ನು ಕೋರಲಾಗಿದೆ.
ಶೀತ ಪ್ರದೇಶ ಮತ್ತು ಹಿನ್ನೀರು ಪ್ರದೇಶದ ಗ್ರಾಮಗಳಾದ ನೀರುಗುಂದ, ಜನಾರ್ಧನಹಳ್ಳಿ, ಮಾವಿನಹಳ್ಳಿ, ಮಾಗಡಹಳ್ಳಿ ಗ್ರಾಮ ವ್ಯಾಪ್ತಿಯಲ್ಲಿ ನಿರ್ವಹಿಸಿರುವ ಈ ಕಾಮಗಾರಿ ಉದ್ದೇಶಿತ ಯೋಜನೆಯಂತೆ ನಿರ್ಮಾಣವಾಗಿಲ್ಲ. ಈ ಹಿನ್ನೆಲೆ ಅದೇ ಗುತ್ತಿಗೆದಾರನಿಂದ ಪುನರ್ ನಿರ್ಮಿಸಲು ಕ್ರಮ ವಹಿಸಬೇಕೆಂದು ಕಾವೇರಿ ನೀರಾವರಿ ನಿಗಮದ ವ್ಯವಸ್ಥಾಪಕ ನಿರ್ದೇಶಕರಿಗೂ ಮನವಿ ಸಲ್ಲಿಸಲಾಗಿದೆ.