ವೀರಾಜಪೇಟೆ, ಸೆ. 18: ಯಾವದೇ ಸಮುದಾಯದಲ್ಲಿ ಶ್ರದ್ಧಾ ಭಕ್ತಿಯಿಂದ ಆಧ್ಯಾತ್ಮಿಕತೆಯ ಚಿಂತನೆ ಇದ್ದರೆ ಸಮಾಜದಲ್ಲಿ ಪರಸ್ಪರ ಸಾಮರಸ್ಯದ ಜೀವನ ಸಾಧ್ಯ ಎಂದು ಅರಮೇರಿ ಕಳಂಚೇರಿ ಮಠಾಧೀಶ ರಾದ ಶಾಂತಮಲ್ಲಿ ಕಾರ್ಜುನ ಸ್ವಾಮೀಜಿ ಅಭಿಪ್ರಾಯಪಟ್ಟರು.ವೀರಾಜಪೇಟೆ ತಾಲೂಕು ವಿಶ್ವಕರ್ಮ ಸಮಾಜ ಸೇವಾ ಸಂಘದ ವತಿಯಿಂದ ಇಲ್ಲಿನ ತೆಲುಗರ ಬೀದಿಯ ಅಂಗಾಳಪರಮೇಶ್ವರಿ ದೇವಾಲಯ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ವಿಶ್ವಕರ್ಮ ಮಹಾ ಪೂಜಾ ಉತ್ಸವ ಹಾಗೂ ಮಹಾಸಭೆಯಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಅವರು ಸಮುದಾಯದ ಏಳಿಗೆ, ಬೆಳವಣಿಗೆ ಒಗ್ಗಟ್ಟಿನಿಂದ ಸಾಧ್ಯವಾಗಲಿದೆ ಎಂದರು. ಕರ ಕುಶಲತೆಯಲ್ಲಿ ದೇಶದಲ್ಲಿಯೇ ಮಾನ್ಯತೆಯನ್ನು ಪಡೆದಿರುವ ಸಮುದಾಯ ಎಲ್ಲ ರೀತಿಯಿಂದಲೂ ಪ್ರಗತಿಯನ್ನು ಸಾಧಿಸುವಂತಾಗಲಿ ಎಂದು ಶುಭ ಹಾರೈಸಿದರು.

ಅತಿಥಿಯಾಗಿ ಭಾಗವಹಿಸಿದ್ದ ಜಿಲ್ಲಾ ಚಿನ್ನ ಬೆಳ್ಳಿ ಕೆಲಸಗಾರರ ಮತ್ತು ವರ್ತಕರ ಸಂಘ ಹಾಗೂ ಕೈರಳಿ ಸಮಾಜದ ಅಧ್ಯಕ್ಷ ಕೆ.ಕೆ.ಶ್ರೀನಿವಾಸ್ ಮಾತನಾಡಿ, ಸಮಾಜ ಬಾಂಧವರು ಸಂಘಟನೆಯನ್ನು ಇನ್ನಷ್ಟು ಬಲಪಡಿಸಲು ಸಂಘದೊಂದಿಗೆ ಪರಸ್ಪರ ಕೈ ಜೋಡಿಸಬೇಕು. ಇದರಿಂದ ಸರಕಾರದ ಸೌಲಭ್ಯಗಳನ್ನು ಮುಕ್ತವಾಗಿ ಪಡೆಯಲು ಸಾಧ್ಯವಾಗ ಲಿದೆ ಎಂದು ಹೇಳಿದರು.

ಸೋಮವಾರಪೇಟೆ ವಿಶ್ವ ಕರ್ಮ ಸಮಾಜ ಸೇವಾ ಸಂಘದ ಮಂಜುನಾಥ ಆಚಾರ್ಯ ಮಾತನಾಡಿ ಸಮುದಾಯ ಬಾಂಧವರು ಒಗ್ಗಟ್ಟನ್ನು ಸಾಧಿಸಿದರೆ ಸಂಘಟನೆ ಪ್ರಗತಿಯತ್ತ ಸಾಗಲು ಕಾರಣವಾಗುತ್ತದೆ ಎಂದರು.

ಇದೇ ಸಮಾರಂಭದಲ್ಲಿ 2016-17ನೇ ಸಾಲಿನಲ್ಲಿ 7,10, 12ನೇ ತರಗತಿಯಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ಸಮುದಾಯ ಬಾಂಧವರ ಮಕ್ಕಳಿಗೆ ಬಹುಮಾನ ನೀಡಿ ಗೌರವಿಸಲಾಯಿತು.

ಸಂಘದ ಅಧ್ಯಕ್ಷ ಎ.ಪಿ.ಲೋಕೇಶ್ ಅವರು ಸಮಾರಂಭದ ಅಧ್ಯಕ್ಷತೆವಹಿಸಿ ಮಾತನಾಡಿ ವಿಶ್ವ ಕರ್ಮ ಸಮುದಾಯ ಬಾಂಧವರು ಶಿಕ್ಷಣಕ್ಕೂ ವಿಶೇಷ ಆಸಕ್ತಿ ವಹಿಸಬೇಕು. ಸಂಘದ ಬಲಿಷ್ಠ ಸಂಘಟನೆಗೂ ಸಹಕರಿಸಬೇಕು ಎಂದರು. ಸಭೆಯಲ್ಲಿ ತಾಲೂಕಿನಾದ್ಯಂತ ಸಮಾಜ ಬಾಂಧವರು ಪಾಲ್ಗೊಂಡಿದ್ದರು.

ಸಂಘದ ಗೌರವ ಅಧ್ಯಕ್ಷ ದಾಮೋದರ್ ಆಚಾರ್ಯ, ಉಪಾಧ್ಯಕ್ಷ ಕೆ.ಜಿ. ದಿವಾಕರ ಆಚಾರ್ಯ, ಪ್ರಧಾನ ಕಾರ್ಯದರ್ಶಿ ಎ.ಈಶ್ವರ ಆಚಾರ್ಯ, ಸಹ ಕಾರ್ಯದರ್ಶಿ ಕೆ.ಜೆ.ರವೀಂದ್ರ ಆಚಾರ್ಯ, ಖಜಾಂಚಿ ರಾಘವೇಂದ್ರ ಆಚಾರ್ಯ ಹಾಗೂ ನಿರ್ದೇಶಕರು ಗಳು ಹಾಜರಿದ್ದರು.

ಸಮಾರಂಭಕ್ಕೆ ಮುನ್ನ ಪುರೋಹಿತ ಸತೀಶ್ ಅವರ ಪೌರೋಹಿತ್ಯದಲ್ಲಿ ವಿಶ್ವ ಕರ್ಮ ಮಹಾ ಪೂಜೆಯನ್ನು ಏರ್ಪಡಿಸಲಾಗಿತ್ತು.