ಸೋಮವಾರಪೇಟೆ, ಸೆ.18: ಭಾರತೀಯ ಜನತಾ ಪಾರ್ಟಿಯ ಜಿಲ್ಲಾ ವೈದ್ಯಕೀಯ ಪ್ರಕೋಷ್ಠ, ನಗರ ಬಿಜೆಪಿ, ಮಹಿಳಾ ಮೋರ್ಚಾ ಮತ್ತು ಯುವ ಮೋರ್ಚಾ ಆಶ್ರಯದಲ್ಲಿ ಇಲ್ಲಿನ ಪಟ್ಟಣ ಪಂಚಾಯತ್ ಸಭಾಂಗಣದಲ್ಲಿ ಪ್ರಧಾನಿ ಮೋದಿ ಹುಟ್ಟುಹಬ್ಬ ಅಂಗವಾಗಿ ಆಯೋಜಿಸಲಾಗಿದ್ದ ಕಾರ್ಣಿಯ ಅಂಧತ್ವ ಮುಕ್ತ ಅಭಿಯಾನ ಮತ್ತು ಹೆಪಟೈಟಿಸ್ ಬಿ ಚುಚ್ಚುಮದ್ದು ಕಾರ್ಯಕ್ರಮ ನಡೆಯಿತು.

ಪಂಚಾಯಿತಿ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಸುಮಾರು 80 ಮಂದಿ ತಮ್ಮ ನೇತ್ರಗಳನ್ನು ದಾನ ಮಾಡಲು ಒಪ್ಪಿ ಗುರುತಿನ ಚೀಟಿಗಳನ್ನು ಪಡೆದರು. ಪೌರಕಾರ್ಮಿಕ ಕುಟುಂಬದವರಿಗೆ ಆಯೋಜಿಸ ಲಾಗಿದ್ದ ಹೆಪಟೈಟಿಸ್ ಬಿ ಚುಚ್ಚುಮದ್ದು ಕಾರ್ಯಕ್ರಮದಲ್ಲಿ ಪೌರಕಾರ್ಮಿಕರೂ ಸೇರಿದಂತೆ ಕುಟುಂಬದ 65 ಮಂದಿ ಸದಸ್ಯರು ಚುಚ್ಚುಮದ್ದು ಹಾಕಿಸಿಕೊಂಡರು.

ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಶಾಸಕ ಎಂ.ಪಿ. ಅಪ್ಪಚ್ಚು ರಂಜನ್, ಪಟ್ಟಣದ ಶುಚಿತ್ವವನ್ನು ಮಾಡುವ ಪೌರಕಾರ್ಮಿಕರು ತಮ್ಮ ಆರೋಗ್ಯದತ್ತಲೂ ಗಮನ ಹರಿಸಬೇಕು ಎಂದು ಕಿವಿಮಾತು ಹೇಳಿದರು.

ಸಾರ್ವಜನಿಕರು ತಮ್ಮ ನೇತ್ರಗಳನ್ನು ದಾನ ಮಾಡಲು ಮುಂದೆ ಬರಬೇಕು. ವ್ಯಕ್ತಿಯ ಮರಣಾನಂತರ ಮಣ್ಣಲ್ಲಿ ಮಣ್ಣಾಗುವ ಕಣ್ಣುಗಳನ್ನು ಇತರರಿಗೆ ದಾನ ಮಾಡಿದರೆ ಅವರಿಗೆ ದೃಷ್ಟಿ ನೀಡಿದ ಪುಣ್ಯ ಸಿಗುತ್ತದೆ. ತಾನೂ ಸಹ ತನ್ನ ಕಣ್ಣುಗಳನ್ನು ದಾನ ಮಾಡಿದ್ದು, ಈ ಅಭಿಯಾನದ ಬಗ್ಗೆ ಇನ್ನಷ್ಟು ಜಾಗೃತಿ ಮೂಡಿಸಬೇಕಿದೆ ಎಂದರು.

ಪ್ರ್ರಾಸ್ತಾವಿಕವಾಗಿ ಮಾತನಾಡಿದ ಬಿಜೆಪಿ ಜಿಲ್ಲಾ ವೈದ್ಯಕೀಯ ಪ್ರಕೋಷ್ಠದ ಸಂಚಾಲಕ ಡಾ. ನವೀನ್, ನರೇಂದ್ರ ಮೋದಿ ಅವರ ಹುಟ್ಟುಹಬ್ಬದ ಅಂಗವಾಗಿ ಪೌರಕಾರ್ಮಿಕರ ಕುಟುಂಬ ಸದಸ್ಯರಿಗೆ ಉಚಿತವಾಗಿ ಹೆಪಟೈಟಿಸ್ ಬಿ ಚುಚ್ಚುಮದ್ದು ನೀಡಲಾಗುತ್ತಿದೆ ಎಂದರು. ದೇಶದಲ್ಲಿ 2 ಲಕ್ಷಕ್ಕೂ ಅಧಿಕ ಅಂಧರಿದ್ದು, ಎಲ್ಲರಿಗೂ ದೃಷ್ಟಿಯಾಗುವ ಹಿನ್ನೆಲೆ ಬಿಜೆಪಿಯಿಂದ ಕಾರ್ಣಿಯ ಅಂಧÀತ್ವ ಮುಕ್ತ ಅಭಿಯಾನ ಜಾರಿಗೆ ತರಲಾಗಿದೆ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪ.ಪಂ. ಅಧ್ಯಕ್ಷೆ ವಿಜಯಲಕ್ಷ್ಮೀ ಸುರೇಶ್ ವಹಿಸಿದ್ದರು. ಪ.ಪಂ. ಸದಸ್ಯರುಗಳಾದ ಸುಷ್ಮಾ, ಲೀಲಾ ನಿರ್ವಾಣಿ, ಮಾಜೀ ಅಧ್ಯಕ್ಷರಾದ ಸುಮಾ ಸುದೀಪ್, ನಳಿನಿಗಣೇಶ್, ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ಅಧ್ಯಕ್ಷ ಬಿ.ಡಿ.ಮಂಜುನಾಥ್, ನಗರ ಬಿಜೆಪಿ ಅಧ್ಯಕ್ಷ ಸೋಮೇಶ್, ಯುವಮೋರ್ಚಾ ಅಧ್ಯಕ್ಷ ಶರತ್‍ಚಂದ್ರ, ಜಿಲ್ಲಾ ಯುವ ಮೋರ್ಚಾ ಕಾರ್ಯದರ್ಶಿ ಕಿಬ್ಬೆಟ್ಟ ಮಧು, ಭಗತ್‍ಸಿಂಗ್ ಸೇನೆಯ ಅಧ್ಯಕ್ಷ ಪಿ. ಮಧು ಉಪಸ್ಥಿತರಿದ್ದರು.

ತಮ್ಮ ನೇತ್ರಗಳನ್ನು ದಾನ ಮಾಡಿದ ಸಾರ್ವಜನಿಕರಿಗೆ ಶಾಸಕ ರಂಜನ್ ಸೇರಿದಂತೆ ಇತರ ಗಣ್ಯರು ಗುರುತಿನ ಚೀಟಿಗಳನ್ನು ವಿತರಿಸಿದರು. ಇದೇ ಸಂದರ್ಭ ಕಾರ್ಯಕ್ರಮ ಆಯೋಜಕ ಡಾ. ನವೀನ್ ಅವರನ್ನು ಬಿಜೆಪಿ ಕಾರ್ಯಕರ್ತರು ಸನ್ಮಾನಿಸಿದರು.