ಗೋಣಿಕೊಪ್ಪಲು, ಸೆ. 18: ಪೊನ್ನಂಪೇಟೆ ಸಾಮಥ್ರ್ಯ ಸೌಧದಲ್ಲಿ ನಡೆದ ಗೋಣಿಕೊಪ್ಪ ದಸರಾ ಪೂರ್ವಭಾವಿ ಸಭೆಯಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡಿಕೊಳ್ಳುವ ಮೂಲಕ ಗೋಣಿಕೊಪ್ಪ ದಸರಾ ಆಚರಿಸಲು ಎಲ್ಲರೂ ಕೈಜೋಡಿಸಬೇಕು ಎಂದು ಶಾಸಕ ಕೆ. ಜಿ. ಬೋಪಯ್ಯ ವಿವಿಧ ಇಲಾಖೆಗಳ ಅಧಿಕಾರಿಗಳಿಗೆ ಕರೆ ನೀಡಿದರು.

ಇಲಾಖೆಯ ಅಧಿಕಾರಿಗಳು ತಮ್ಮ ಕಾರ್ಯಕ್ಷೇತ್ರದಲ್ಲಿ ಬರುವ ಕೆಲಸಗಳನ್ನು ಸರಿಯಾಗಿ ನಿರ್ವಹಿಸುವ ಮೂಲಕ ದಸರಾ ಯಶಸ್ಸಿಗೆ ಕೈಜೋಡಿಸಬೇಕು. ಕಾನೂನು ಸುವ್ಯವಸ್ಥೆ ಕಾಪಾಡಲು ಹೆಚ್ಚಿನ ಮುತುವರ್ಜಿ ವಹಿಸಬೇಕು. ಈ ಬಗ್ಗೆ ಪೊಲೀಸ್ ಇಲಾಖೆ ಸೂಕ್ತ ಕ್ರಮಕ್ಕೆ ಮುಂದಾಗಬೇಕು. ಗೋಣಿಕೊಪ್ಪಲು ಪಟ್ಟಣದಲ್ಲಿ ಗುಂಡಿ ಬಿದ್ದಿರುವ ರಸ್ತೆಗಳನ್ನು ದುರಸ್ತಿ ಮಾಡುವ ಮೂಲಕ ದಸರಾ ಆಚರಣೆಗೆ ಅನುವು ಮಾಡಿಕೊಡುವಂತೆ ಸೂಚಿಸಿದರು. ಸರ್ಕಾರ ರೂ. 25 ಲಕ್ಷ ಅನುದಾನ ಗೋಣಿಕೊಪ್ಪ ದಸರಾ ಆಚರಣೆಗೆ ನೀಡಿರುವದಕ್ಕೆ ಹರ್ಷ ವ್ಯಕ್ತಪಡಿಸಿದರು.

ಬೈಪಾಸ್ ರಸ್ತೆಯಲ್ಲಿ ನೀರು ಹೆಚ್ಚು ನಿಂತಿರುವದರಿಂದ ಡಾಂಬರೀಕರಣ ಅಸಾಧ್ಯ. ಇದರಿಂದಾಗಿ ವೆಟ್‍ಮಿಕ್ಸ್ ಮೂಲಕ ವಾಹನ ಓಡಾಟಕ್ಕೆ ಅನುವು ಮಾಡಿಕೊಡಲಾಗುವದು ಎಂದು ಪಂಚಾಯತ್‍ರಾಜ್ ಇಲಾಖೆ ಅಧಿಕಾರಿ ಮಾಹಿತಿ ನೀಡಿದರು. ಪಟ್ಟಣದಲ್ಲಿ ಶೋಭಾಯಾತ್ರೆ ಸಂದರ್ಭ ಟ್ರಾಫಿಕ್ ನಿಯಂತ್ರಣಕ್ಕಾಗಿ ಪಟ್ಟಣಕ್ಕೆ ಬರುವ ವಾಹನಗಳಿಗೆ ಪಟ್ಟಣದಿಂದ ದೂರದಲ್ಲಿ ನಿಲುಗಡೆ ಮಾಡಲಾಗುತ್ತಿದೆ. ಜನರಿಗೆ ಇನ್ನಷ್ಟು ಸೌಲಭ್ಯ ಕಲ್ಪಿಸುವ ನಿಟ್ಟಿನಲ್ಲಿ ವಾಹನ ನಿಲುಗಡೆ ಜಾಗದಿಂದ ಪಟ್ಟಣಕ್ಕೆ ಕರೆ ತರಲು ಮಿನಿ ಬಸ್ ಸೌಲಭ್ಯ ಕಲ್ಪಿಸಲಾಗುವದು ಎಂದು ವೃತ್ತ ನಿರೀಕ್ಷಕ ರಾಜು ಹೇಳಿದರು.

ಪ್ರತೀ ಮಂಟಪ ಸಮಿತಿಗೆ 1.5 ಲಕ್ಷ ಅನುದಾನ ನೀಡಬೇಕು. ಕಳೆದ ಬಾರಿ ಸರ್ಕಾರದ ಅನುದಾನ ಸಮಿತಿಗಳಿಗೆ ಬಂದಿಲ್ಲ. ಇದರಿಂದ ನಷ್ಟದ ಹಾದಿಯಲ್ಲಿ ಸಮಿತಿಗಳಿವೆ. ನಷ್ಟ ಸರಿಹೊಂದಿಸಲು ಹೆಚ್ಚು ಅನುದಾನ ನೀಡಬೇಕು ಎಂದು ಸಮಿತಿ ಪ್ರಮುಖ ರಾಜೇಶ್ ಒತ್ತಾಯಿಸಿದರು. ಈ ಬಾರಿ 70 ಸಾವಿರ ಹಣ ಪ್ರತೀ ಸಮಿತಿಗೆ ನೀಡಲಾಗುವದು. ಹೆಚ್ಚಿನ ಅನುದಾನ ಬಂದರೆ ಇನ್ನಷ್ಟು ನೀಡಲು ಪ್ರಯತ್ನಿಸಲಾಗವುದು ಎಂದು ಶಾಸಕ ಬೋಪಯ್ಯ ಹಾಗೂ ಕಾವೇರಿ ದಸರಾ ಸಮಿತಿ ಅಧ್ಯಕ್ಷ ಕುಲ್ಲಚಂಡ ಪ್ರಮೋದ್ ಗಣಪತಿ ಹೇಳಿದರು.

ಅಧ್ಯಕ್ಷ ಪ್ರಮೋದ್ ಗಣಪತಿ ಮಾತನಾಡಿ, ಶಾಸಕರ ಪ್ರಯತ್ನದಿಂದ ಅನುದಾನ ಸರ್ಕಾರದಿಂದ ದೊರೆತಿದೆ. ಇದನ್ನು ಬಳಸಿಕೊಂಡು ದಸರಾ ಆಚರಿಸಲಾಗುವದು. ಇಲಾಖೆ ಹಾಗೂ ಉಪ ಸಮಿತಿಗಳ ಬೆಂಬಲ ಮುಖ್ಯ ಎಂದರು.

ತೋಟಗಾರಿಕಾ ಇಲಾಖೆಯಿಂದ ಹೂವಿನ ಅಲಂಕಾರ, ವಿವಿಧ ಇಲಾಖೆಗಳ ಮೂಲಕ ಮಳಿಗೆಗಳಲ್ಲಿ ವಸ್ತು ಪ್ರದರ್ಶನ ಮಾಡುವಂತೆ ನಿರ್ಧರಿಸಲಾಯಿತು. ಮಕ್ಕಳ ದಸರಾಕ್ಕೆ ಪಾಲ್ಗೊಳ್ಳಲು ಎಲ್ಲಾ ಶಾಲೆಗಳಿಗೂ ಸುತ್ತೋಲೆ ಕಳುಹಿಸಲಾಗಿದೆ ಎಂದು ಕ್ಷೇತ್ರ ಶಿಕ್ಷಣ ಅಧಿಕಾರಿ ಮಾಹಿತಿ ನೀಡಿದರು. ತಹಶೀಲ್ದಾರ್ ಗೋವಿಂದರಾಜ್ ಹಾಗೂ ತಾ ಪಂ ಉಪಾಧ್ಯಕ್ಷ ನೆಲ್ಲೀರ ಚಲನ್ ಉಪಸ್ಥಿತರಿದ್ದರು.