ಮಡಿಕೇರಿ, ಸೆ. 18: ಎಂಟು ದಿನಗಳ ಹಿಂದೆ ಮಾಲ್ದಾರೆ ರಕ್ಷಿತಾರಣ್ಯದೊಳಗೆ ಅಕ್ರಮ ಪ್ರವೇಶಿಸಿ ವನ್ಯಪ್ರಾಣಿಗಳ ಬೇಟಿಯಾಡಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಚಿಣ್ಣಪ್ಪ ಅವರು ನೇಮಕಗೊಂಡಿದ್ದು, ಇಲಾಖೆಯ ಹಂತದಲ್ಲಿ ಮಾಹಿತಿ ಸಂಗ್ರಹಿಸುತ್ತಿದ್ದಾರೆ ಎಂದು ಮೂಲಗಳಿಂದ ತಿಳಿದುಬಂದಿದೆ.ಕಳೆದ ತಾ. 9ರಂದು ಸಂಜೆಗತ್ತಲೆ ನಡುವೆ ಮಾರ್ಷಲ್ ಜೀಪೊಂದರಲ್ಲಿ 6 ಮಂದಿ ಬೇಟೆಗಾರರು ಎರಡು ಕೋವಿ ಸಹಿತ ಮಾರಕಾಸ್ತ್ರಗಳೊಂದಿಗೆ ಮಾಲ್ದಾರೆ ರಕ್ಷತಾರಣ್ಯದಲ್ಲಿ ಬೇಟೆಯಾಡುತ್ತಿದ್ದಾಗ ಅರಣ್ಯ ಸಿಬ್ಬಂದಿ ಧಾಳಿ ನಡೆಸಿದ ವೇಳೆ ಆರೋಪಿಗಳು ವಾಹನ ಹಾಗೂ ಕೋವಿಗಳನ್ನು ಸ್ಥಳದಲ್ಲೇ ಬಿಟ್ಟು ಪರಾರಿಯಾಗಿದ್ದರು.

ಈ ಸಂಬಂಧ ಈಗಾಗಲೇ ಹಾಲುಗುಂದ ಗ್ರಾ.ಪಂ. ಸದಸ್ಯರೊಬ್ಬರ ಸಹಿತ ಆರು ಮಂದಿ ವಿರುದ್ಧ ಸಿದ್ದಾಪುರ ಪೊಲೀಸ್ ಠಾಣೆಯಲ್ಲಿ ಅರಣ್ಯಾಧಿಕಾರಿಗಳು ಮೊಕದ್ದಮೆ ದಾಖಲಿಸಿದ್ದಾರೆ. ಅಲ್ಲದೆ ವಶಪಡಿಸಿಕೊಂಡಿರುವ ವಾಹನ ಹಾಗೂ ಕೋವಿಗಳ ಸಹಿತ ಮಾರಕಾಸ್ತ್ರಗಳನ್ನು ವೀರಾಜಪೇಟೆ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ಇದೀಗ ಇಡೀ ಪ್ರಕರಣದ ತನಿಖಾಧಿಕಾರಿಯಾಗಿ ನ್ಯಾಯಾಲಯದ ನಿರ್ದೇಶನದಂತೆ ಚಿಣ್ಣಪ್ಪ ನೇಮಕಗೊಂಡಿದ್ದು, ಮಾಹಿತಿ ಸಂಗ್ರಹಿಸತೊಡಿಗಿದ್ದಾರೆ.

ಈಗಾಗಲೇ ಘಟನೆಯ ಪ್ರತ್ಯಕ್ಷದರ್ಶಿಗಳು, ಅಲ್ಲಿನ ನಿವಾಸಿಗಳು, ಇಲಾಖೆಯ ಆ ರಾತ್ರಿಯ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದ ಅರಣ್ಯ ವಲಯಾಧಿಕಾರಿಗಳು ಹಾಗೂ ಸಿಬ್ಬಂದಿಯ ಹೇಳಿಕೆ ಪಡೆದುಕೊಂಡಿದ್ದಾಗಿ ಮೂಲಗಳಿಂದ ತಿಳಿದುಬಂದಿದೆ. ಗ್ರಾ.ಪಂ. ಸದಸ್ಯ ಸಹಿತ ಶಂಕಿತ ಆರು ಮಂದಿ ಬೇಟೆಗಾರರು ತಲೆಮರೆಸಿಕೊಂಡಿದ್ದಾರೆ.