ಕುಶಾಲನಗರ, ಸೆ. 18: ಕುಶಾಲನಗರದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ 2016-17ನೇ ಸಾಲಿನ ವಾರ್ಷಿಕ ಮಹಾಸಭೆ ಸಂಘದ ಅಧ್ಯಕ್ಷ ಟಿ.ಆರ್. ಶರವಣಕುಮಾರ್ ಅಧ್ಯಕ್ಷತೆಯಲ್ಲಿ ಸ್ಥಳೀಯ ಸರಕಾರಿ ಮಾದರಿ ಪ್ರಾಥಮಿಕ ಶಾಲಾ ಆವರಣದಲ್ಲಿ ನಡೆಯಿತು.

ಟಿ.ಆರ್. ಶರವಣಕುಮಾರ್ ಮಾತನಾಡಿ, ಇತ್ತೀಚಿನ ವರ್ಷಗಳಿಂದ ಸಂಘವು ಲಾಭದ ಹಾದಿಯಲ್ಲಿ ಸಾಗುತ್ತಿರುವದು ಉತ್ತಮ ಬೆಳವಣಿಗೆಯಾಗಿದ್ದು 2016-17 ನೇ ಸಾಲಿನಲ್ಲಿ ಸಂಘ 84.57 ಲಕ್ಷ ಲಾಭ ಗಳಿಸಿದೆ ಎಂದರು. ಸಕಾಲಕ್ಕೆ ಸಾಲ ಮರುಪಾವತಿಗೊಳಿಸುವದು ಸೇರಿದಂತೆ ಹೆಚ್ಚಿನ ಹೂಡಿಕೆಗಳು, ಠೇವಣಿಗಳ ಮೂಲಕ ಸಂಘವನ್ನು ಮತ್ತಷ್ಟು ಅಭಿವೃದ್ಧಿಗೊಳಿಸುವಲ್ಲಿ ಚಿಂತಿಸಬೇಕಿದೆ ಎಂದರು.

2021 ರಲ್ಲಿ ಸಂಘದ ಶತಮಾನೋತ್ಸವ ಕಾರ್ಯಕ್ರಮ ಕೈಗೊಳ್ಳುವ ನಿಟ್ಟಿನಲ್ಲಿ ಸಮಿತಿ ಚಿಂತನೆ ಹರಿಸಲಾಗಿದೆ. ಸಂಘದ ನೂತನ ಕಟ್ಟಡ ಕಾಮಗಾರಿ ಪ್ರಗತಿಯಲಿದ್ದು ಸಂಘದ ಸದಸ್ಯರಿಗೆ ಬೇಕಾದ ಅನುಕೂಲಕರ ವಾತಾವರಣ, ಆಧುನಿಕ ತಂತ್ರಜ್ಞಾನಗಳನ್ನು ಅಳವಡಿಸಲು ಸಿದ್ದತೆ ನಡೆಸಲಾಗಿದೆ ಎಂದರು. ಕಳೆದ 6 ವರ್ಷಗಳಿಂದ ಸಂಘದ ಸದಸ್ಯರಿಗೆ ಶೇ.25 ಡಿವಿಡೆಂಟ್ ನೀಡುತ್ತಾ ಬಂದಿದ್ದು, ಪಟ್ಟಣದ ಮಾರುಕಟ್ಟೆ ರಸ್ತೆಯಲ್ಲಿ ಅಂದಾಜು ರೂ 2.30 ಕೋಟಿ ವೆಚ್ಚದಲ್ಲಿ ನೂತನ ಕಟ್ಟಡ ನಿರ್ಮಾಣ ಕಾರ್ಯಕೈಗೊಂಡಿರುವ ಹಿನ್ನಲೆಯಲ್ಲಿ ಈ ಸಾಲಿನಲ್ಲಿ ಸದಸ್ಯರಿಗೆ ಶೇ.15 ಡಿವಿಡೆಂಟ್ ಮಾತ್ರ ನೀಡಲು ತೀರ್ಮಾನಿಸಿದ್ದು ಸದಸ್ಯರು ಸಹಕರಿಸಬೇಕಿದೆ ಎಂದರು.

ಸಭೆಯಲ್ಲಿ ಮೃತಪಟ್ಟ ಸದಸ್ಯರಿಗೆ ಸಂತಾಪ ಸೂಚಿಸಲಾಯಿತು. ಉತ್ತಮ ಅಂಕಗಳಿಸಿದ ಸಂಘದ ಸದಸ್ಯರ ಮಕ್ಕಳಿಗೆ ಪ್ರೋತ್ಸಾಹ ಬಹುಮಾನ ವಿತರಿಸಲಾಯಿತು.

ಸಭೆಯಲ್ಲಿ ಸಂಘದ ಉಪಾಧ್ಯಕ್ಷ ಪಿ.ಕಾರ್ತೀಶನ್, ನಿರ್ದೇಶಕರಾದ ಹೆಚ್.ಎನ್. ರಾಮಚಂದ್ರ, ಪಿ.ಬಿ.ಯತೀಶ್, ಕೆ.ಎನ್.ಅಶೋಕ್, ವಿ.ಎಸ್. ಆನಂದಕುಮಾರ್, ಎಂ.ಕೆ. ಗಣೇಶ್, ಬಿ.ಎ.ಅಬ್ದುಲ್ ಖಾದರ್, ಸಿ.ಎಂ.ಗಣಿಪ್ರಸಾದ್, ಕೆ.ವಿ.ನೇತ್ರಾವತಿ, ಪಿ.ಎಂ. ಕವಿತಾ, ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಲೋಕೇಶ್, ಲೆಕ್ಕ ಪರಿಶೋಧಕ ಚಂದ್ರಶೇಖರ್ ಇದ್ದರು.