ಕುಶಾಲನಗರ, ಸೆ. 15: ಕುಶಾಲನಗರದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ 2016-17 ನೇ ಸಾಲಿನಲ್ಲಿ ರೂ. 84.57 ಲಕ್ಷ ನಿವ್ವಳ ಲಾಭಗಳಿಸಿದೆ ಎಂದು ಸಂಘದ ಅಧ್ಯಕ್ಷ ಟಿ.ಆರ್. ಶರವಣಕುಮಾರ್ ತಿಳಿಸಿದರು.

ಸಂಘದ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಂಘವು ಕಳೆದ 23 ವರ್ಷಗಳಿಂದಲೂ ಸತತವಾಗಿ ಲಾಭದಲ್ಲಿ ಮುನ್ನಡೆಯುತ್ತಿದ್ದು, ಸದಸ್ಯರಿಗೆ ಉತ್ತಮ ಸೇವೆ ಸಲ್ಲಿಸುತ್ತಾ ಬಂದಿದೆ. ಸ್ವಾತಂತ್ರ ಪೂರ್ವದಲ್ಲಿ ಆರಂಭವಾದ ಸಂಘವು ಶತಮಾನದ ಹೊಸ್ತಿಲಲ್ಲಿದ್ದು ಶೀಘ್ರದಲ್ಲೇ ಸಂಘದ ಕಚೇರಿಯನ್ನು ಸ್ವಂತ ಕಟ್ಟಡಕ್ಕೆ ಸ್ಥಳಾಂತರಿಸಲಾಗುವದು ಎಂದು ತಿಳಿಸಿದರು.

2940 ಸದಸ್ಯರನ್ನು ಒಳಗೊಂಡಿರುವ ಸಂಘವು 2016-17 ನೇ ಸಾಲಿನಲ್ಲಿ ರೂ. 224.48 ಕೋಟಿ ವ್ಯವಹಾರ ನಡೆಸಿದೆ. ರೂ. 144.47 ಲಕ್ಷ ಪಾಲು ಬಂಡವಾಳ, ರೂ. 148.37 ಲಕ್ಷ ಕ್ಷೇಮನಿಧಿ ಮತ್ತು ಇತರೆ ನಿಧಿಗಳಾಗಿ ರೂ. 174.24 ಲಕ್ಷ ಹೊಂದಿದೆ ಎಂದು ತಿಳಿಸಿದರು.

2016-17 ನೇ ಸಾಲಿನಲ್ಲಿ ಒಟ್ಟು ರೂ. 21.92 ಕೋಟಿ ಸಾಲ ವಿತರಿಸಲಾಗಿದ್ದು ಇದರಲ್ಲಿ ಕೆ.ಸಿ.ಸಿ ಸಾಲಕ್ಕೆ ಹೆಚ್ಚಿನ ಆದ್ಯತೆ ನೀಡಲಾಗಿದೆ. ಸಂಘದಲ್ಲಿ 99 ಸ್ವಸಹಾಯ ಗುಂಪುಗಳಿದ್ದು ಸಂಘದ ಸ್ವಂತ ಬಂಡವಾಳದಿಂದ ಸದರಿ ಸಾಲಿನಲ್ಲಿ ರೂ. 70.50 ಲಕ್ಷ ಸಾಲ ವಿತರಿಸಲಾಗಿದೆ. ರೂ. 14.16 ಕೋಟಿ ಆಭರಣ ಸಾಲ ನೀಡಲಾಗಿದೆ. ಸಂಘದಲ್ಲಿ ತೊಡಗಿಸುವ ನಿರಖು ಠೇವಣಿಗೆ ಹಾಗೂ ಹಿರಿಯ ನಾಗರಿಕರಿಗೆ ಹೆಚ್ಚಿನ ಬಡ್ಡಿ ದರ ಒದಗಿಸಲಾಗುತ್ತಿದ್ದು ಇದರ ಸದುಪಯೋಗಪಡೆದುಕೊಳ್ಳುವಂತೆ ಶರವಣಕುಮಾರ್ ತಿಳಿಸಿದರು.

ಕಳೆದ 6 ವರ್ಷಗಳಿಂದ ಸಂಘದ ಸದಸ್ಯರಿಗೆ ಶೇ. 25 ಡಿವಿಡೆಂಟ್ ನೀಡುತ್ತಾ ಬಂದಿದ್ದು, ಪಟ್ಟಣದ ಮಾರುಕಟ್ಟೆ ರಸ್ತೆಯಲ್ಲಿ ಅಂದಾಜು ರೂ. 2.30 ಕೋಟಿ ವೆಚ್ಚದಲ್ಲಿ ಸುಸಜ್ಜಿತವಾದ ನೂತನ ಕಟ್ಟಡ ನಿರ್ಮಾಣ ಕಾರ್ಯ ಕೈಗೊಂಡಿರುವ ಹಿನ್ನೆಲೆಯಲ್ಲಿ ಈ ಸಾಲಿನಲ್ಲಿ ಸದಸ್ಯರಿಗೆ ಕೇವಲ ಶೇ. 15 ಡಿವಿಡೆಂಡ್ ಮಾತ್ರ ನೀಡಲು ಸಂಘ ತೀರ್ಮಾನಿಸಿದ್ದು ಸದಸ್ಯರು ಸಹಕರಿಸಬೇಕೆಂದು ಅವರು ಕೋರಿದರು.

2017-18 ನೇ ಸಾಲಿಗೆ 1715 ಸದಸ್ಯರನ್ನು ಯಶಸ್ವಿನಿ ಆರೋಗ್ಯ ವಿಮೆಗೆ ನೋಂದಾಯಿಸಲಾಗಿದೆ. ಸಂಘದಿಂದ ಸದಸ್ಯರಿಗೆ ತಲಾ 75 ರೂ.ಗಳ ಸಹಾಯಧನ ವಿತರಿಸಲಾಗುತ್ತಿದೆ. ಕಳೆದ 5 ವರ್ಷಗಳಿಂದಲೂ ಪರಿಶಿಷ್ಟ ಜಾತಿ, ಪಂಗಡದ ಸದಸ್ಯರಿಗೆ ಉಚಿತವಾಗಿ ಯಶಸ್ವಿನಿ ನೋಂದಣಿಯನ್ನು ಮಾಡಿಕೊಂಡು ಬರಲಾಗುತ್ತಿದೆ ಎಂದು ಅವರು ಮಾಹಿತಿ ಒದಗಿಸಿದರು.

ಕಳೆದ 8 ವರ್ಷಗಳಿಂದಲೂ ಪ್ರತಿ ವಾರ್ಷಿಕ ಮಹಾಸಭೆಯಲ್ಲಿ ಸದಸ್ಯರ ಮಕ್ಕಳ ಪೈಕಿ 7, 10, ದ್ವಿತೀಯ ಪಿಯುಸಿ, ಪದವಿ, ಡಿಪ್ಲೋಮ, ಇಂಜಿನಿಯರಿಂಗ್, ವೈದ್ಯಕೀಯ ಪರೀಕ್ಷೆ ಸಾಧಕರಿಗೆ ಸೇರಿದಂತೆ ರಾಷ್ಟ್ರಮಟ್ಟದಲ್ಲಿ ಸ್ವರ್ಧಿಸಿರುವ ಕ್ರೀಡಾ ಸ್ಪರ್ಧಿಗಳಿಗೆ ಪ್ರೋತ್ಸಾಹಕ ಬಹುಮಾನವನ್ನು ವಿತರಿಸಲಾಗುತ್ತಿದೆ ಎಂದರು.

ನಾಳೆ ಮಹಾಸಭೆ

ಸಂಘದ ವಾರ್ಷಿಕ ಮಹಾಸಭೆ ತಾ. 17 ರಂದು ಸ್ಥಳೀಯ ಸರಕಾರಿ ಮಾದರಿ ಪ್ರಾಥಮಿಕ ಶಾಲೆ ಸಭಾಂಗಣದಲ್ಲಿ ಬೆಳಿಗ್ಗೆ 10.30 ಗಂಟೆಗೆ ಹಮ್ಮಿಕೊಳ್ಳಲಾಗಿದ್ದು ಸರ್ವ ಸದಸ್ಯರು ಹಾಜರಾಗಿ ತಮ್ಮ ಸಲಹೆ ಸೂಚನೆಗಳನ್ನು ನೀಡಬೇಕೆಂದು ಶರವಣಕುಮಾರ್ ತಿಳಿಸಿದ್ದಾರೆ.

ಗೋಷ್ಠಿಯಲ್ಲಿ ಸಂಘದ ಉಪಾಧ್ಯಕ್ಷ ಪಿ. ಕಾರ್ತೀಶನ್, ನಿರ್ದೇಶಕರುಗಳಾಗಿ ಹೆಚ್.ಎನ್. ರಾಮಚಂದ್ರ, ಪಿ.ಬಿ. ಯತೀಶ್, ಕೆ.ಎನ್. ಅಶೋಕ್, ವಿ.ಎಸ್. ಆನಂದಕುಮಾರ್, ಎಂ.ಕೆ. ಗಣೇಶ್, ಬಿ.ಎ. ಅಬ್ದುಲ್ ಖಾದರ್, ಸಿ.ಎಂ. ಗಣಿಪ್ರಸಾದ್, ಕೆ.ವಿ. ನೇತ್ರಾವತಿ, ಪಿ.ಎಂ. ಕವಿತಾ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಲೋಕೇಶ್ ಇದ್ದರು.