ನಾಪೋಕ್ಲು, ಸೆ. 15: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಶಿಶುಕಲ್ಯಾಣ ಯೋಜನಾಧಿಕಾರಿಗಳ ಕಚೇರಿ ಹಾಗೂ ಬಲ್ಲಮಾವಟಿ ಗ್ರಾಮಪಂಚಾಯಿತಿ ಕಾರ್ಯಾಲಯದ ವತಿಯಿಂದ ಮಹಿಳಾ ವಿಶೇಷ ಗ್ರಾಮಸಭೆಯನ್ನು ಬಲ್ಲಮಾವಟಿ ಗ್ರಾಮದ ಪಿಂಚಣಿದಾರರ ಸಂಘದ ಕಟ್ಟಡದಲ್ಲಿ ಏರ್ಪಡಿಸಲಾಗಿತ್ತು.

ಪೌಷ್ಟಿಕ ಆಹಾರ ಸಪ್ತಾಹ, ಮಾತೃಪೂರ್ಣ ಯೋಜನೆ ಬಗ್ಗೆ ಅರಿವು ಮೂಡಿಸುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದ್ದು ಬಲ್ಲಮಾವಟಿ ನೆಲಜಿ, ಪುಲಿಕೋಟು, ಪೇರೂರು, ಭಾಗಗಳ ಗರ್ಭಿಣಿಯರು ಬಾಣಂತಿಯರು ಸ್ತ್ರೀ ಶಕ್ತಿ ಸಂಘದ ಸದಸ್ಯರು ಪಾಲ್ಗೊಂಡಿದ್ದರು. ಕಾರ್ಯಕ್ರಮದಲ್ಲಿ ಮಾತೃಪೂರ್ಣ ಯೋಜನೆಯ ಬಗ್ಗೆ ಮಾಹಿತಿಯನ್ನು ಮೇಲ್ವಿಚಾರಕರು ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ದಮಯಂತಿ, ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಹೇಮಾವತಿ ಹಾಗೂ ಸ್ಥಳೀಯ ಆರ್ಯುವೇದ ವೈದ್ಯೆ ನೀಡಿದರು. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ದಮಯಂತಿ ಮಾತನಾಡಿ ಬಾಣಂತಿಯರು ಆರೋಗ್ಯದ ಕಡೆ ಗಮನ ಹರಿಸಬೇಕು ಮಕ್ಕಳ ಆರೋಗ್ಯ ಹಾಗೂ ಆಹಾರ ಪದ್ಧತಿಯ ಬಗ್ಗೆ ವಿಶೇಷ ಗಮನಹರಿಸಬೇಕು ಎಂದರು. ಮಾತೃಪೂರ್ಣ ಯೋಜನೆಯನ್ನು ಯಶಸ್ವಿಗೊಳಿಸಲು ಎಲ್ಲರೂ ಸಹಕರಿಸುವದರೊಂದಿಗೆ ಪೌಷ್ಟಿಕ ಆಹಾರ ಸ್ವಚ್ಛತೆ ಬಗ್ಗೆ ಗಮನಹರಿಸಬೇಕು ಪೌಷ್ಟಿಕ ಆಹಾರದ ಮಹತ್ವವನ್ನು ವಿವರಿಸಿದರು. ಆರ್ಯುವೇದ ವೈದ್ಯೆ ಡಾ. ಶುಭಾ ಮಾತನಾಡಿ ಮಹಿಳೆಯರು ಹಳ್ಳಿಯ ಜೀವನವನ್ನು ರೂಢಿಸಿಕೊಳ್ಳಬೇಕು ತಾವೇ ಬೆಳೆದ ಹಾಗೂ ಸ್ಥಳೀಯವಾಗಿ ಬೆಳೆದ ಆಹಾರ ವಸ್ತುಗಳನ್ನು ಬಳಸುವಂತೆ ಸಲಹೆ ನೀಡಿದರು. ಬಲ್ಲಮಾವಟಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಕರವಂಡ ಸರಸು ಪೆಮ್ಮಯ್ಯ ಅಧ್ಯಕ್ಷತೆ ವಹಿಸಿದರು. ಬಲ್ಲಮಾವಟಿ ಗ್ರಾಮ ಪಂಚಾಯಿತಿ ಸದಸ್ಯರಾದ ಬೈರುಡ ಮುತ್ತಪ್ಪ, ಬದ್ದಂಜೆಟ್ಟೀರ ದೇವಿ ದೇವಯ್ಯ, ಉಪಾಧ್ಯಕ್ಷೆ ದೇವಕಿ, ಸದಸ್ಯ ಚಂಗೇಟಿರ ಕುಮಾರ್‍ಸೋಮಣ್ಣ, ಪಿ.ಬಿ. ಧರಣಿ ಮತ್ತಿತರರು ಪಾಲ್ಗೊಂಡಿದ್ದರು. ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ವೀಣಾಕುಮಾರಿ ಸ್ವಾಗತಿಸಿ, ವಂದಿಸಿದರು.