ಮಡಿಕೇರಿ, ಸೆ. 14: ಎಂತಹುದೇ ಕಟ್ಟಡÀವಾದರೂ ಒಂದು ಅಥವಾ ಎರಡು ವರ್ಷಗಳಲ್ಲಿ ತಲೆ ಎತ್ತುತ್ತದೆ. ಆದರೆ ಮಡಿಕೇರಿ ನಗರ ವ್ಯಾಪ್ತಿಯಲ್ಲಿ ನಿರ್ಮಾಣವಾಗುತ್ತಿರುವ ಕಟ್ಟಡಗಳು ವರ್ಷಗಳುರುಳಿದರೂ ತಲೆ ಎತ್ತುವದು ಬಲು ಅಪರೂಪ ವೆನ್ನಬಹುದು. ಸುವರ್ಣ ಸಾಂಸ್ಕøತಿಕ ಭವನ, ಅಬಕಾರಿ ಭವನ, ಖಾಸಗಿ ಬಸ್ ನಿಲ್ದಾಣ, ಹೈಟೆಕ್ ಮಾರುಕಟ್ಟೆ ಹೀಗೆ ಪಟ್ಟಿ ಮಾಡುತ್ತಾ ಹೋದರೆ ಬೆಳೆಯುತ್ತಲೇ ಇರುತ್ತದೆ.

ಜಿಲ್ಲಾ ಕೇಂದ್ರವಾದ ಮಡಿಕೇರಿ ಯಲ್ಲಿದ್ದ ಹಳೆಯ ಮಾರುಕಟ್ಟೆ ಪ್ರಾಂಗಣವನ್ನು ಕೆಡವಿ ಅಲ್ಲಿಯೇ ಹೈಟೆಕ್ ಮಾರುಕಟ್ಟೆ ನಿರ್ಮಾಣ ಕಾಮಗಾರಿ ಆರಂಭಗೊಂಡು 4 ವರ್ಷ ಕಳೆದರೂ ಇನ್ನೂ ಕೂಡ ಒಂದು ಹಂತಕ್ಕೆ ಬಂದಿಲ್ಲ. ಆರಂಭ ದಿಂದಲೇ ಕುಂಟುತ್ತಾ ಸಾಗಿದ ಕಾಮಗಾರಿಗೆ ಕಳೆದ ವರ್ಷ ಒಂದಿಷ್ಟು ಚಾಲನೆ ದೊರೆತು ಆರ್‍ಸಿಸಿ ಹಾಕಲಾಗಿದೆಯಾದರೂ, ನಂತರ ಒಂದಿಷ್ಟು ಕೂಡ ಮುಂದುವರಿದಿಲ್ಲ.

ಪಿ.ಡಿ. ಪೊನ್ನಪ್ಪ ಅವರು ಅಧ್ಯಕ್ಷರಾಗಿದ್ದ ಸಂದರ್ಭ ಹೈಟೆಕ್ ಮಾರುಕಟ್ಟೆ ನಿರ್ಮಾಣ ಕಾರ್ಯಕ್ಕೆ ಚಾಲನೆ ನೀಡಲಾಯಿತು. ರೂ. 3 ಕೋಟಿ ಮೊತ್ತದಲ್ಲಿ ನಿರ್ಮಾಣ ಗೊಳ್ಳುತ್ತಿರುವ

(ಮೊದಲ ಪುಟದಿಂದ) ಮಾರುಕಟ್ಟೆ ಸಂಕೀರ್ಣದಲ್ಲಿ ವಾಹನ ನಿಲುಗಡೆಗೆ, ಶೌಚಾಲಯ, ಮಾರುಕಟ್ಟೆ ಪ್ರಾಂಗಣ, ಅಂಗಡಿ - ಮಳಿಗೆಗಳಿರುತ್ತವೆ. ಉದ್ದೇಶಿತ ಯೋಜನೆಯಂತೆ ನೆಲಮಾಳಿಗೆ, ಮೊದಲ ಹಾಗೂ ಎರಡನೇ ಅಂತಸ್ತು ಕಟ್ಟಡಗಳಿರುತ್ತವೆ. ಮೇಲ್ಛಾವಣಿಗೆ ಶೀಟು ಅಳವಡಿಸುವಂತೆ ನಕಾಶೆ ತಯಾರಿಸಿ ಕಾಮಗಾರಿಗೆ ಚಾಲನೆ ನೀಡಲಾಗಿತ್ತು. ಆದರೆ ಅನುದಾನ ಬಾರದ ಹಿನ್ನೆಲೆಯಲ್ಲಿ ಕುಂಟುತ್ತಾ ಸಾಗಿದ ಕಾಮಗಾರಿ ಅಡಿಪಾಯದಲ್ಲೇ ಬಾಕಿ ಉಳಿದಿತ್ತು.

ಹೋರಾಟ : ನೆನೆಗುದಿಗೆ ಬಿದ್ದಿರುವ ಮಾರುಕಟ್ಟೆ ಕಾಮಗಾರಿ ಯನ್ನು ಪೂರ್ಣಗೊಳಿಸುವಂತೆ ಈಗಿನ ವಾರ್ಡ್ ಸದಸ್ಯ ಕೆ.ಜೆ. ಪೀಟರ್, ತಜಸ್ಸುಂ ಇನ್ನಿತರರು ಸಾಮಾನ್ಯ ಸಭೆಗಳಲ್ಲಿ ಆಗ್ರಹಿಸಿದ್ದಲ್ಲದೆ ಪೀಟರ್ ಧರಣಿ ಕೂಡ ನಡೆಸಿದರು. ಈ ಹಿನ್ನೆಲೆಯಲ್ಲಿ ಆಸಕ್ತಿ ವಹಿಸಿದ ಅಧ್ಯಕ್ಷೆ ಕಾವೇರಮ್ಮ ಸೋಮಣ್ಣ ಗುತ್ತಿಗೆದಾರರನ್ನು ಕರೆಸಿ ಕಾಮಗಾರಿ ಮುಂದುವರಿಸುವಂತೆ ಕೋರಿದ ಮೇರೆ ಕಾಮಗಾರಿ ಆರಂಭಗೊಂಡು ಪಿಲ್ಲರ್ ಅಳವಡಿಸಿ, ಮೊದಲ ಅಂತಸ್ತಿನ ತಾರಸಿ ಹಾಕುವಲ್ಲಿವರೆಗೆ ಬಂದು ನಿಂತಿದೆ. ಒಟ್ಟು ರೂ. 2.63 ಕೋಟಿ ಮೊತ್ತ ಗುತ್ತಿಗೆದಾರರಿಗೆ ಪಾವತಿ ಯಾಗಿದ್ದು, ಇನ್ನೂ ರೂ. 37 ಲಕ್ಷ ಉಳಿಕೆಯಾಗಿದೆ.

ನಕ್ಷೆ ಬದಲು : ಈ ನಡುವೆ ಮೇಲ್ಛಾವಣಿಯ ಶೀಟುಗಳ ಬದಲಿಗೆ ತಾರಸಿ ನಿರ್ಮಾಣ ಮಾಡಿ ಸಭಾಂಗಣ ನಿರ್ಮಾಣ ಮಾಡುವ ಉದ್ದೇಶದೊಂದಿಗೆ ನಕಾಶೆ ಬದಲಾವಣೆ ಮಾಡಲಾಯಿತು. ಅಂದಾಜು ಪಟ್ಟಿ ಪ್ರಕಾರ ಇದಕ್ಕೆ ರೂ. 84 ಲಕ್ಷ ಅಧಿಕ ಹಣದ ಅಗತ್ಯತೆ ಕಂಡುಬಂದು ಈ ಸಂಬಂಧ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಆದರೆ ಸರಕಾರದಿಂದ ಇದಕ್ಕೆ ಇನ್ನೂ ಕೂಡ ಅನುಮೋದನೆ ದೊರಕದ ಹಿನ್ನೆಲೆಯಲ್ಲಿ ಗುತ್ತಿಗೆ ಪಡೆದುಕೊಂಡಿರುವ ಗುತ್ತಿಗೆದಾರರಾದ ಕಿಶೋರ್ ಎಂಬವರು ಕಾಮಗಾರಿ ಮುಂದುವರಿಸಲು ಹಿಂದೇಟು ಹಾಕುತ್ತಿದ್ದಾರೆಂದು ತಿಳಿದುಬಂದಿದೆ. ಹಣ ಬಿಡುಗಡೆಯಾಗದಿದ್ದಲ್ಲಿ ನಷ್ಟ ಅನುಭವಿಸಬೇಕಾಗುತ್ತದೆ ಎಂಬ ಭಯದಿಂದ ಹಿಂದೇಟು ಹಾಕುತ್ತಿದ್ದಾರೆನ್ನಲಾಗಿದೆ. ಇತ್ತ ಹಣ ಬಿಡುಗಡೆಗೂ ನಗರಸಭಾ ಆಡಳಿತ ಪ್ರಯತ್ನಿಸದೇ ಇರುವದರಿಂದ ಮಹತ್ವದ ಯೋಜನೆಯೊಂದು ಮೂಲೆಗುಂಪಾಗಿದೆ. ತಾರಸಿಗೆ ಬಳಸಲಾಗಿರುವ ಸೆಂಟ್ರಿಂಗ್ ಮರಗಳನ್ನು ನಾಲ್ಕು ತಿಂಗಳು ಕಳೆದರೂ ತೆಗೆಯುವ ಗೋಜಿಗೆ ಕೂಡ ಗುತ್ತಿಗೆದಾರ ಮುಂದಾಗಿಲ್ಲ. ಇದನ್ನು ಗಮನಿಸಿದರೆ ಗುತ್ತಿಗೆದಾರ ಇತ್ತ ಸುಳಿಯುವದು ಸಂಶಯವೆನಿಸಿದೆ. ನ್ಯಾಯಾಲಯ ಹಾಗೂ ಜಿ.ಪಂ. ಕಟ್ಟಡದ ಗುತ್ತಿಗೆ ಕೂಡ ಇದೇ ಗುತ್ತಿಗೆದಾರ ಪಡೆದುಕೊಂಡಿದ್ದು, ಎರಡು ಕಾಮಗಾರಿ ಭರದಿಂದ ಸಾಗುತ್ತಿದೆ.

ವ್ಯಾಪಾರಿಗಳ ಬವಣೆ : ಇತ್ತ ಮಾರುಕಟ್ಟೆ ಇಲ್ಲದೆ ಶುಕ್ರವಾರದ ಸಂತೆಯಂದು ವ್ಯಾಪಾರಿಗಳು ಬವಣೆ ಪಡುವಂತಾಗಿದೆ. ಮಾರುಕಟ್ಟೆ ಪ್ರದೇಶದ ಬಳಿಯ ತ್ಯಾಜ್ಯಗಳನ್ನು ಸುರಿಯುವ ಮೈದಾನದಂತಹ ಪ್ರದೇಶದಲ್ಲಿ, ಶೌಚಾಲಯದ ಬಳಿ, ರಸ್ತೆ ಬದಿ ವಾಸನೆಯ ನಡುವೆ ಮೂಗು ಮುಚ್ಚಿಕೊಂಡು ವ್ಯಾಪಾರ ಮಾಡುವಂತಹ ಪರಿಸ್ಥಿತಿ ನಿರ್ಮಾಣಗೊಂಡಿದೆ. ಮಾರುಕಟ್ಟೆ ಬಳಿಯಿಂದ ಹಿಡಿದು ಹಿಲ್ ರಸ್ತೆಯ ಕೊನೆಯವರೆಗೂ ಕಿರಿದಾದ ರಸ್ತೆ ಬದಿ ವ್ಯಾಪಾರಿಗಳು ಕುಳಿತು ಬಿಸಿಲು-ಮಳೆಗೆ ಮೈಯ್ಯೊಡ್ಡಿ ವ್ಯಾಪಾರ ಮಾಡುತ್ತಿರುವ ಸನ್ನಿವೇಶ ಸಾಮಾನ್ಯವಾಗಿದೆ.

ಇಚ್ಛಾಶಕ್ತಿ ಕೊರತೆ : ಮಾರುಕಟ್ಟೆ ಸೇರಿದಂತೆ ಇತರ ಎಲ್ಲ ಯೋಜನೆಗಳನ್ನು ಕಾರ್ಯಗತ ಗೊಳಿಸುವಲ್ಲಿ ಜನಪ್ರತಿನಿಧಿಗಳ ನಗರಸಭೆ ಆಡಳಿತ ಮಂಡಳಿಯವರ ಇಚ್ಛಾಶಕ್ತಿಯ ಕೊರತೆ ಎದ್ದು ಕಾಣುತ್ತಿದೆ. ನಾಲ್ವರು ಶಾಸಕರು ಓರ್ವ ಸಂಸದರಿದ್ದರೂ ಯಾರೂ ಕೂಡ ಇತ್ತ ಗಮನ ಹರಿಸುತ್ತಿಲ್ಲ.

ನಮ್ಮ ಕಷ್ಟ ಕೇಳುವವರಿಲ್ಲ : ಚುನಾವಣೆ ಸಂದರ್ಭ ಮಾತ್ರ ಮಳೆ, ಕೆಸರು ತುಂಬಿದ್ದರೂ ಮತ ಕೇಳಲು ಬರುತ್ತಾರೆ. ಆದರೆ ಸಮಸ್ಯೆ ಕೇಳಲು ಯಾರೂ ಬರುವದಿಲ್ಲವೆಂದು ವ್ಯಾಪಾರಿಗಳು ಅವಲತ್ತುಕೊಳ್ಳುತ್ತಾರೆ. ಜಿಲ್ಲಾಡಳಿತವಾದರೂ ಗಮನ ಹರಿಸಿ ಮಾರುಕಟ್ಟೆ ನಿರ್ಮಿಸಿಕೊಡುವತ್ತ ಮನಸು ಮಾಡಲೆಂದು ಕೋರಿಕೊಂಡಿದ್ದಾರೆ.