ಮಡಿಕೇರಿ, ಸೆ. 14: ಸುಮಾರು 5 ವರ್ಷಗಳ ಹಿಂದೆ ಮಕ್ಕಂದೂರು ಸಮೀಪ ನಡೆದಿದ್ದ, ಆಗಿನ ಭಜರಂಗದಳ ತಾಲೂಕು ಸಹ ಸಂಚಾಲಕ ಗಣೇಶ್ ಅಲಿಯಾಸ್ ನಂದಕುಮಾರ್ ಕೊಲೆ ಯತ್ನ ಪ್ರಕರಣಕ್ಕೆ ಸಂಬಂಧಿಸಿದಂತೆ 1ನೇ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಐವರು ಆರೋಪಿಗಳಿಗೆ ಇಂದು ಜೈಲು ಶಿಕ್ಷೆ ವಿಧಿಸಿದ್ದು, ಇಬ್ಬರು ಆರೋಪಿಗಳನ್ನು ಖುಲಾಸೆಗೊಳಿಸಿದೆ. ಮತ್ತೋರ್ವ ಆರೋಪಿ ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದಾನೆ. ಒಟ್ಟು ಎಂಟು ಮಂದಿ ಈ ಪ್ರಕರಣದಲ್ಲಿ ಆರೋಪಿಗಳಾಗಿದ್ದಾರೆ.2012ನೇ ಇಸವಿಯ ಮೇ 25ರಂದು ರಾತ್ರಿ ಸುಮಾರು 10 ಗಂಟೆ ವೇಳೆಗೆ ತನ್ನ ಮಾರುತಿ ಕಾರ್‍ನಲ್ಲಿ ಮಕ್ಕಂದೂರಿನ ಮನೆಗೆ ತೆರಳುತ್ತಿದ್ದ ಗಣೇಶ್ ಅವರನ್ನು ಮಕ್ಕಂದೂರಿನ ತಿರುವೊಂದರ ಬಳಿ ಅಡ್ಡಗಟ್ಟಿದ ಎರಡು ಬೈಕ್‍ಗಳಲ್ಲಿ ಆಗಮಿಸಿದ್ದ ಆರೋಪಿಗಳು ಗಣೇಶ್ ಮೇಲೆ ಕತ್ತಿಯಿಂದ ಮಾರಣಾಂತಿಕ ಹಲ್ಲೆ ನಡೆಸಿದ್ದರು. ಗಂಭೀರ ಸ್ವರೂಪದ ಗಾಯಗೊಂಡಿದ್ದ ಗಣೇಶ್ ಆಸ್ಪತ್ರೆಗೆ ದಾಖಲಾಗಿ ಹಲವು ದಿನಗಳ ಕಾಲ ಚಿಕಿತ್ಸೆಗೊಳಗಾಗಿದ್ದರು. ಬಳಿಕ ಚೇತರಿಸಿಕೊಂಡಿದ್ದರು. ಈ ಪ್ರಕರಣವನ್ನು ಖಂಡಿಸಿದ್ದ ಹಿಂದೂಪರ ಸಂಘಟನೆಗಳು ಜಿಲ್ಲೆಯಲ್ಲಿ ಆರೋಪಿಗಳ ಬಂಧನಕ್ಕೆ ಒತ್ತಾಯಿಸಿ ಪ್ರತಿಭಟನೆಗಳನ್ನು ನಡೆಸಿದ್ದವು.

ಪ್ರಕರಣ ದಾಖಲಿಸಿಕೊಂಡಿದ್ದ ಮಡಿಕೇರಿ ಗ್ರಾಮಾಂತರ ಠಾಣಾ ಪೊಲೀಸರು ಆರೋಪಿಗಳಾದ ಮಡಿಕೇರಿಯ ಕಲೀಲ್ ಬಾಷಾ, ಬಿ.ಕೆ. ಹಮೀದ್, ಮುಸ್ತಫ, ಜುನೈದ್, ರಿಜ್ವಾನ್, ತುಫೈಲ್ ಹಾಗೂ ಜುನೈದ್, ತಾಹಿರ್ ಪರ್ವೇಜ್ ಇವರುಗಳನ್ನು ಬಂಧಿಸಿ ನ್ಯಾಯಾಲಯಕ್ಕೆ ದೋಷಾ ರೋಪಣಾ ಪಟ್ಟಿ ಸಲ್ಲಿಸಿದ್ದರು.

ಐದು ವರ್ಷ ವಿಚಾರಣೆ

ಈ ಕೊಲೆಯತ್ನ ಪ್ರಕರಣದ ವಿಚಾರಣೆ

(ಮೊದಲ ಪುಟದಿಂದ) ನ್ಯಾಯಾಲಯದಲ್ಲಿ ಸುಮಾರು ಐದು ವರ್ಷಗಳ ಕಾಲ ನಡೆಯಿತು. ಈ ನಡುವೆ ಆರೋಪಿಗಳ ಪೈಕಿ ತಾಹಿರ್ ಪರ್ವೇಜ್ ನ್ಯಾಯಾಲಯಕ್ಕೆ ವಿಚಾರಣೆಗೆ ಹಾಜರಾಗದೆ ತಲೆಮರೆಸಿ ಕೊಂಡಿದ್ದಾನೆ. ಉಳಿದ 7 ಮಂದಿ ಆರೋಪಿಗಳ ವಿಚಾರಣೆ ನ್ಯಾಯಾಲಯದಲ್ಲಿ ನಡೆದು, ದೂರುದಾರ ಗಣೇಶ್ ಅವರೆÀ ಪ್ರಮುಖ ಸಾಕ್ಷಿಯಾಗಿದ್ದ ಪ್ರಕರಣದ ತೀರ್ಪನ್ನು ಇಂದು 1ನೇ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಡಿ. ಪವನೇಶ್ ಅವರು ಪ್ರಕಟಿಸಿದ್ದು, ಕಲೀಲ್ ಬಾಷಾ, ಬಿ.ಕೆ. ಹಮೀದ್, ಮುಸ್ತಫ, ಜುನೈದ್ ಹಾಗೂ ರಿಜ್ವಾನ್ ಇವರುಗಳ ಮೇಲಿನ ಆರೋಪ ಸಾಬೀತಾದ ಹಿನ್ನೆಲೆ ಐದು ವರ್ಷ ಜೈಲು ಶಿಕ್ಷೆ, 50 ಸಾವಿರ ರೂ. ದಂಡ, ಪಾವತಿಯಾಗುವ ದಂಡದಲ್ಲಿ ರೂ. 40 ಸಾವಿರವನ್ನು ದೂರುದಾರ ಗಣೇಶ್ ಅವರಿಗೆ ನೀಡಲು ಆದೇಶಿಸಿದ್ದಾರೆ. ಉಳಿದ ಇಬ್ಬರು ಆರೋಪಿಗಳಾದ ತುಫೈಲ್ ಹಾಗೂ ಜುನೈದ್ ಇವರುಗಳನ್ನು ಖುಲಾಸೆ ಗೊಳಿಸಿದ್ದಾರೆ. ಸರ್ಕಾರ ಪರ ಸರ್ಕಾರಿ ಅಭಿಯೋಜಕ ರಾದ ಕೃಷ್ಣವೇಣಿ ವಾದಿಸಿದರು.

ಪೊಲೀಸ್ ಕಾವಲು

ಗಣೇಶ್ ಕೊಲೆಯತ್ನ ಪ್ರಕರಣದ ತೀರ್ಪು ಇಂದು ಪ್ರಕಟಗೊಳ್ಳಲಿರುವ ಬಗ್ಗೆ ಮಾಹಿತಿ ಪಡೆದಿದ್ದ ಹಿಂದೂಪರ ಸಂಘಟನೆಗಳ ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ನ್ಯಾಯಾಲಯದ ಆವರಣದಲ್ಲಿ ಜಮಾಯಿಸಿದ್ದರು. ಆರೋಪಿಗಳ ಪರವಾಗಿಯು ಹಲವಾರು ಮಂದಿ ನೆರೆದಿದ್ದರು. ಈ ಹಿನ್ನೆಲೆಯಲ್ಲಿ ನ್ಯಾಯಾಲಯದ ಆವರಣದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು. ಮಧ್ಯಾಹ್ನ 3 ಗಂಟೆ ಸುಮಾರಿಗೆ ಐವರು ಆರೋಪಿಗಳನ್ನು ಅಪರಾಧಿಗಳು ಎಂದು ಘೋಷಿಸಿದ ನ್ಯಾಯಾಧೀಶರು, ಶಿಕ್ಷೆಯ ಪ್ರಮಾಣವನ್ನು ಸಂಜೆ 5 ಗಂಟೆಗೆ ಘೋಷಿಸುವದಾಗಿ ಪ್ರಕಟಿಸಿದ್ದರು. ಅದರಂತೆ ಸಂಜೆ 5.30ರ ಸುಮಾರಿಗೆ ಶಿಕ್ಷೆಯ ಪ್ರಮಾಣ ಪ್ರಕಟಿಸಿದರು.

ಭಜರಂಗದಳ ಸ್ವಾಗತ

ಪ್ರಕರಣಕ್ಕೆ ಸಂಬಂಧಿಸಿದಂತೆ ಐವರು ಆರೋಪಿಗಳಿಗೆ ನ್ಯಾಯಾಲಯ ಶಿಕ್ಷೆ ವಿಧಿಸಿರುವದನ್ನು ಭಜರಂದಗಳ ಸ್ವಾಗತಿಸುತ್ತದೆ ಎಂದು ಜಿಲ್ಲಾ ಸಂಚಾಲಕ ಅಜಿತ್ ಕುಮಾರ್ ಮಾಧ್ಯಮ ಗಳೊಂದಿಗೆ ಪ್ರತಿಕ್ರಿಯಿಸಿದರು.