ಮಡಿಕೇರಿ ಸೆ.14 : ವಿಯೆಟ್ನಾಂ ನಿಂದ ಆಮದಾಗಿರುವ ಕಾಳುಮೆಣಸು ಕಲಬೆರಕೆಯಾಗಿದ್ದರೆ ಸೂಕ್ತ ತನಿಖೆ ನಡೆಸಿ ತಪ್ಪಿತಸ್ತರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿರುವ ಜಿಲ್ಲಾ ಬಿಜೆಪಿ, ಪ್ರಕರಣಕ್ಕೆ ಸಂಬಂಧಿಸಿದಂತೆ ಗೋಣಿಕೊಪ್ಪ ಎಪಿಎಂಸಿ ಆಡಳಿತ ಮಂಡಳಿ ವಿರುದ್ಧ ಕಾಂಗ್ರೆಸ್ ಮಾಡುತ್ತಿರುವ ಆರೋಪ ಖಂಡನೀಯವೆಂದು ತಿಳಿಸಿದೆ.ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಜಿಲ್ಲಾ ಬಿಜೆಪಿ ಅಧ್ಯಕ್ಷ ಬಿ.ಬಿ.ಭಾರತೀಶ್, ಎಪಿಎಂಸಿ ನಿಯಮ ಮತ್ತು ಆಮದು ನೀತಿಯ ಬಗ್ಗೆ ಮಾಹಿತಿ ಇಲ್ಲದ ಜಿಲ್ಲಾ ಕಾಂಗ್ರೆಸ್ಸಿಗರು ವಿನಾಕಾರಣ ಟೀಕೆಯಲ್ಲಿ ತೊಡಗಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಬಿಜೆಪಿ ರೈತರ ನಿಲುವುಗಳಿಗೆ ಬದ್ಧವಾಗಿದೆ, ಆದರೆ ಫಸಲಿನ ಕೊರತೆಯಿಂದಾಗಿ ವಿಯೆಟ್ನಾಂ ನಿಂದ ಕಾಳುಮೆಣಸು ಆಮದಾಗಿರಬಹುದು ಎಂದು ಅವರು ಸಮರ್ಥಿಸಿಕೊಂಡರು. ಕಾಳುಮೆಣಸು ಕೊಡಗಿಗೆ ಆಮದಾಗಲು ಈ ಹಿಂದೆ ಪ್ರಧಾನಮಂತ್ರಿಗಳಾಗಿದ್ದ ಪಿ.ವಿ.ನರಸಿಂಹರಾವ್ ಜಾರಿಗೆ ತಂದ ಗ್ಯಾಟ್ ಒಪ್ಪಂದವೇ

(ಮೊದಲ ಪುಟದಿಂದ) ಕಾರಣವೆಂದು ಆರೋಪಿಸಿದ ಭಾರತೀಶ್, ಕೊಡಗಿನ ರೈತರ ಹಿತ ಕಾಯುವ ಸಲುವಾಗಿ ಕೇಂದ್ರದ ಗಮನ ಸೆಳೆಯಲಾಗುವದೆಂದು ಭರವಸೆ ನೀಡಿದರು.

ಕಾಂಗ್ರೆಸ್ ನೈಜಾಂಶವನ್ನು ಅರಿಯದೆ ಸಂಸದರು ಹಾಗೂ ಎಪಿಎಂಸಿ ಆಡಳಿತ ಮಂಡಳಿ ವಿರುದ್ಧ ಆರೋಪಗಳನ್ನು ಮಾಡುತ್ತಿರುವದು ಖಂಡನೀಯ. ತನಿಖೆ ಈಗಾಗಲೇ ಆರಂಭಗೊಂಡಿದ್ದು, ಇದಕ್ಕೆಲ್ಲಾ ಯಾರು ಹೊಣೆ ಎನ್ನುವ ಉತ್ತರ ಸಧ್ಯದಲ್ಲಿಯೇ ಸಿಗಲಿದೆ. ಕಾಳುಮೆಣಸು ಕಲಬೆರಕೆಯಾಗಿರುವ ಬಗ್ಗೆ ಆಡಳಿತ ಮಂಡಳಿ ಗಮನಕ್ಕೆ ಬಂದಿರಲಿಲ್ಲವೆಂದು ಸ್ಪಷ್ಟಪಡಿಸಿದರು.

ಚೆಟ್ಟಳ್ಳಿ ಗ್ರಾ.ಪಂ ಸದಸ್ಯ ಕಂಠಿಕಾರ್ಯಪ್ಪ ಅವರ ಭಾಷಣದ ಕೆಲವು ತುಣುಕುಗಳನ್ನು ಮಾತ್ರ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಮಾಡುವ ಮೂಲಕ ಕೋಮು ಭಾವನೆಯನ್ನು ಪ್ರಚೋದಿಸಲಾಗುತ್ತಿದೆ. ಭಾಷಣದ ಮುಂದುವರಿದ ಭಾಗವನ್ನು ಗಮನಿಸಿದ್ದರೆ ಎಲ್ಲರು ಒಗ್ಗಟ್ಟಾಗಿ ಬಾಳಬೇಕು ಎಂದು ಕಂಠಿ ನೀಡಿದ ಹೇಳಿಕೆ ಸ್ಪಷ್ಟವಾಗುತ್ತಿತ್ತು ಎಂದು ಭಾರತೀಶ್ ಅಭಿಪ್ರಾಯಪಟ್ಟರು.

ಕೊಲೆ ಪ್ರಕರಣದಲ್ಲಿ ಆರೋಪಿಯಾಗಿರುವ ವ್ಯಕ್ತಿ ಕೂಡ ಕಂಠಿ ಕಾರ್ಯಪ್ಪ ಅವರನ್ನು ಗಡಿಪಾರು ಮಾಡಬೇಕೆಂದು ಒತ್ತಾಯಿಸುತ್ತಿರುವದು ಹಾಸ್ಯಾಸ್ಪದವಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ ಅವರು, ಹಿಂದೂ ಸಮಾಜದ ಪರ ಮಾತನಾಡುವವರನ್ನು ದಮನ ಮಾಡಲು ಸಾಧ್ಯವಿಲ್ಲವೆಂದು ಹೇಳಿದರು.

24 ಗಂಟೆ ಗಡುವು

ಕಕ್ಕಬ್ಬೆಯ ಶ್ರೀ ಭಗವತಿ ದೇವಾಲಯವನ್ನು ಅಪವಿತ್ರಗೊಳಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳನ್ನು ಇನ್ನೂ ಕೂಡ ಬಂಧಿಸದೇ ಇರುವದು ಖಂಡನೀಯ. ಮುಂದಿನ 24 ಗಂಟೆಯೊಳಗೆ ತಪ್ಪಿತಸ್ತರನ್ನು ಬಂಧಿಸದಿದ್ದಲ್ಲಿ ಬಿಜೆಪಿ ವತಿಯಿಂದ ಹೋರಾಟವನ್ನು ತೀವ್ರಗೊಳಿಸುವದಾಗಿ ಭಾರತೀಶ್ ಎಚ್ಚರಿಕೆ ನೀಡಿದರು.

ನಾಳೆ ಪ್ರತಿಭಟನೆ

ಡಿವೈಎಸ್‍ಪಿ ಗಣಪತಿ ಅವರ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ ತನಿಖೆಗೆ ನ್ಯಾಯಾಲಯ ಆದೇಶಿಸಿರುವದರಿಂದ ಸಚಿವ ಕೆ.ಜೆ. ಜಾರ್ಜ್ ಅವರು ನೈತಿಕ ಹೊಣೆ ಹೊತ್ತು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕಾಗಿತ್ತು. ಆದರೆ ಅಧಿಕಾರದಲ್ಲಿ ಮುಂದುವರಿದಿರುವದರಿಂದ ರಾಜೀನಾಮೆಗಾಗಿ ಆಗ್ರಹಿಸಿ ಪಕ್ಷದ ವತಿಯಿಂದ ಸೆ.16 ರಂದು ಮಡಿಕೇರಿಯಲ್ಲಿ ಬೃಹತ್ ಪ್ರತಿಭಟನೆ ನಡೆಸುವದಾಗಿ ತಿಳಿಸಿದರು. ಜಾರ್ಜ್ ಅವರು ಅಧಿಕಾರ ತ್ಯಾಗ ಮಾಡುವವರೆಗೆ ರಾಜ್ಯವ್ಯಾಪಿ ಹೋರಾಟ ಮುಂದುವರಿಯಲಿದೆ ಎಂದು ಭಾರತೀಶ್ ಹೇಳಿದರು.

ಬಿಜೆಪಿಯಲ್ಲಿ ಎಲ್ಲರೂ ಒಗ್ಗಟ್ಟಿನಿಂದ ಇರುವದಾಗಿ ಇದೇ ಸಂದರ್ಭ ಸಮರ್ಥಿಸಿಕೊಂಡರು. ಗೋಷ್ಠಿಯಲ್ಲಿ ಬಿಜೆಪಿ ಪ್ರಧಾನ ಕಾರ್ಯದರ್ಶಿಗಳಾದ ರವಿಕುಶಾಲಪ್ಪ, ರಾಬಿನ್ ದೇವಯ್ಯ, ವಿ.ಕೆ. ಲೋಕೇಶ್, ಉಪಾಧ್ಯಕ್ಷ ರವಿ ಕಾಳಪ್ಪ, ವಕ್ತಾರ ಸುಬ್ರಮಣ್ಯ ಉಪಾಧ್ಯಾಯ ಹಾಜರಿದ್ದರು.