ಮಡಿಕೇರಿ, ಸೆ. 13: ಐತಿಹಾಸಿಕ ನಾಡಹಬ್ಬ ಮಡಿಕೇರಿ ದಸರಾ ಉತ್ಸವಕ್ಕೆ ಸರ್ಕಾರದಿಂದ ರೂ. 60 ಲಕ್ಷ ಅನುದಾನ ಬಿಡುಗಡೆಗೊಳಿಸುವದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಭರವಸೆ ನೀಡಿದ್ದಾರೆ.

ಇತ್ತೀಚೆಗೆ ಮಡಿಕೇರಿ ದಸರಾ ಸಮಿತಿ ಹಾಗೂ ಗೋಣಿಕೊಪ್ಪಲು ದಸರಾ ಸಮಿತಿಗಳು ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ ಅನುದಾನಕ್ಕೆ ಬೇಡಿಕೆ ಸಲ್ಲಿಸಿದ್ದವು. ಮನವಿಯನ್ನು ಪರಿಶೀಲಿಸಿದ್ದ ಮುಖ್ಯಮಂತ್ರಿಗಳು ಗೋಣಿಕೊಪ್ಪಲು ದಸರಾ ಉತ್ಸವಕ್ಕೆ ರೂ. 25 ಲಕ್ಷ ಹಾಗೂ ಮಡಿಕೇರಿ ಉತ್ಸವಕ್ಕೆ ರೂ. 30 ಲಕ್ಷ ಅನುದಾನ ನೀಡುವದಾಗಿ ಹೇಳಿದ್ದರು. ಮಡಿಕೇರಿ ದಸರಾಗೆ ಕಡಿಮೆ ಅನುದಾನ ಘೋಷಣೆಯಾದ ಹಿನ್ನೆಲೆಯಲ್ಲಿ ದಸರಾ ಸಮಿತಿಯಲ್ಲ್ಲಿ ತಳಮಳ ಸೃಷ್ಟಿಯಾಗಿತ್ತು. ಆದರೆ ಇಂದು ಮತ್ತೊಮ್ಮೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಉಸ್ತುವಾರಿ ಸಚಿವ ಸೀತಾರಾಂ, ಶಾಸಕ ಅಪ್ಪಚ್ಚುರಂಜನ್, ಎಂಎಲ್‍ಸಿ ವೀಣಾ ಅಚ್ಚಯ್ಯ, ಉಸ್ತುವಾರಿ ಸಚಿವರ ಆಪ್ತ ಕಾರ್ಯದರ್ಶಿ ಕದ್ದಣಿಯಂಡ ಹರೀಶ್ ಬೋಪಣ್ಣ, ಕೊಡವ ಸಾಹಿತ್ಯ ಅಕಾಡೆಮಿ ಮಾಜಿ ಸದಸ್ಯ ಬಿ.ಎಸ್. ತಮ್ಮಯ್ಯ, ಮಾಜಿ ಸಚಿವೆ ಸುಮಾವಸಂತ್ ಮತ್ತಿತರರನ್ನು ಒಳಗೊಂಡ ನಿಯೋಗ ಭೇಟಿಯಾಗಿ ಹೆಚ್ಚುವರಿ ಅನುದಾನ ಬಿಡುಗಡೆಗೆ ಮನವಿ ಮಾಡಿದ ಹಿನ್ನೆಲೆಯಲ್ಲಿ ಸಿದ್ದರಾಮಯ್ಯ ಅವರು ರೂ. 60ಲಕ್ಷ ನೀಡುವದಾಗಿ ಆಶ್ವಾಸನೆಯಿತ್ತಿದ್ದಾರೆ.