ಮಡಿಕೇರಿ, ಸೆ. 13: ಕೊಡಗು ಜಿಲ್ಲಾ ಕೇಂದ್ರ ಮಡಿಕೇರಿಯ ಜನರಲ್ ಕೆ.ಎಸ್. ತಿಮ್ಮಯ್ಯ ವೃತ್ತದಿಂದ ಮೈಸೂರು ಹೊರವಲಯದ ಕೊಲಂಬಿಯಾ ಏಷ್ಯಾ ಆಸ್ಪತ್ರೆ ತನಕ 275ನೇ ರಾಷ್ಟ್ರೀಯ ಹೆದ್ದಾರಿ ಯೋಜನೆಯ ಸರ್ವೆ ಕಾರ್ಯ ನಿನ್ನೆಯಿಂದ ಆರಂಭಗೊಂಡಿದೆ. ಮೈಸೂರು - ಬಂಟ್ವಾಳ ರಾಷ್ಟ್ರೀಯ ಹೆದ್ದಾರಿ ಯೋಜನೆಯ ಈ ಸರ್ವೆ ಕಾರ್ಯವನ್ನು ಫೀಡ್‍ಬ್ಯಾಕ್ ಇಸ್ಫ್ರಾ ಸಮೂಹ ಸಂಸ್ಥೆ ಕೈಗೊಂಡಿದ್ದು, ಹೆದ್ದಾರಿ ನಿರ್ಮಾಣಕ್ಕೆ ಸಾಧ್ಯವಾಗಲಿರುವ ಎಲ್ಲಾ ವಿವರಗಳನ್ನು ಒಳಗೊಂಡಂತೆ ಸಮಗ್ರ ಮಾಹಿತಿ ಸಂಗ್ರಹಿಸಿ, ಕೇಂದ್ರ ಸರಕಾರದ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೆ ಸಲ್ಲಿಸಲಿದೆ.ಈ ನಿಟ್ಟಿನಲ್ಲಿ ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಪ್ರಾಧಿಕಾರ ಹಾಗೂ ರಾಷ್ಟ್ರೀಯ ಅಭಿವೃದ್ಧಿ ಬ್ಯಾಂಕ್ ಯೋಜನೆಗೆ ಸಂಬಂಧಿಸಿದಂತೆ ಸರ್ವೆ ಕೈಗೊಂಡಿರುವ ಸಂಸ್ಥೆಯು, ಕೊಡಗಿನ ಮುಖ್ಯ ಪಟ್ಟಣ ಮಡಿಕೇರಿ ಸೇರಿದಂತೆ ಸುಂಟಿಕೊಪ್ಪ, ಕುಶಾಲನಗರ ಹಾಗೂ ಅಲ್ಲಲ್ಲಿ ಬರಲಿರುವ ಗ್ರಾಮಗಳ ಸಹಿತ ಬೈಲುಕುಪ್ಪೆ, ಪಿರಿಯಾಪಟ್ಟಣ, ಕಂಪಲಾಪುರ, ಚಿಲ್ಕುಂದ, ಹುಣಸೂರು, ಬಿಳಿಕೆರೆ, ಇಲವಾಲ, ಮೈಸೂರು ಮುಖಾಂತರ ಹೆದ್ದಾರಿ ಹಾದುಹೋಗಲಿರುವ ಮಾರ್ಗದ ಸಮೀಕ್ಷೆಯಲ್ಲಿ ತೊಡಗಿದೆ.

ಮೇಲಿನ ಸಮೀಕ್ಷೆ ನಡೆಸುತ್ತಿರುವ ಸಂಸ್ಥೆಯ ಪ್ರಧಾನ ಸಲಹೆಗಾರ ಡಾ. ಜಿ. ಆನಂದ್ ಮತ್ತು ಕ್ಷೇತ್ರ ಅಧಿಕಾರಿ ಚಂದ್ರಶೇಖರ್ ಇವರುಗಳ ತಂಡ ನಗರದಿಂದ ಆರಂಭಿಸಿರುವ ಸರ್ವೆಯಲ್ಲಿ ಸಂಬಂಧಿಸಿದ ರಸ್ತೆಯ ಉಭಯ ಕಡೆಗಳಲ್ಲಿ ಇರುವ ಕಟ್ಟಡ, ಮನೆಗಳ ಹಾಗೂ ಇತರ ಸಾರ್ವಜನಿಕ ಆಸ್ತಿಪಾಸ್ತಿ ಮಾಹಿತಿ ಕಲೆ ಹಾಕತೊಡಗಿದ್ದಾರೆ.

ಈಗಾಗಲೇ ಮಡಿಕೇರಿಯ ಜ. ತಿಮ್ಮಯ್ಯ ವೃತ್ತದಿಂದ ಸರ್ವೆ ಆರಂಭಿಸಿರುವ ಈ ತಂಡದವರು ಇಂದು ಬೋಯಿಕೇರಿ ಮುಖಾಂತರ ಕೆದಕಲ್ ಮಾರ್ಗದ ಆಸುಪಾಸಿನಲ್ಲಿಯೂ ಮಾಹಿತಿ ಕಲೆಹಾಕುವದರೊಂದಿಗೆ ಹೆದ್ದಾರಿಯ ಮಧ್ಯಭಾಗದಿಂದ ಎಡ- ಬಲಗಳಲ್ಲಿ ಸರಾಸರಿ 30 ಮೀಟರ್‍ನಂತೆ ಒಟ್ಟು 60 ಮೀಟರ್ ಅಗಲದ ರಾಷ್ಟ್ರೀಯ ಹೆದ್ದಾರಿ ಯೋಜನೆ ಸಂಬಂಧ ಅಳತೆಯಲ್ಲಿ ತೊಡಗಿದ್ದಾರೆ.

ಅಧಿಕಾರಿ ಸುಳಿವು: ಹೆದ್ದಾರಿ ಸರ್ವೆ ಸಂಸ್ಥೆಯ ಅಧಿಕಾರಿ ಡಾ. ಆನಂದ್ ಅವರನ್ನು ‘ಶಕ್ತಿ' ಸಂದರ್ಶಿಸಿದಾಗ, ಈ ಯೋಜನೆಯಿಂದ ಸಾರ್ವಜನಿಕರಿಗೆ ಮತ್ತು ಜಾಗ ಮಾಲೀಕರಿಗೆ ತೊಂದರೆ ಆಗದಿರುವಂತೆ ಸರಕಾರ ಕಾಳಜಿ ವಹಿಸಲಿದ್ದು, ಹೆದ್ದಾರಿ ಕ್ರಮಿಸುವ ಜಾಗ ಅಥವಾ ಕಟ್ಟಡ ಮಾಲೀಕರಿಗೆ ಪರಿಹಾರ ನೀಡಲಿದೆ ಎಂದು ತಿಳಿಸಿದರು.

(ಮೊದಲ ಪುಟದಿಂದ) ಆಯಾ ಪ್ರದೇಶದ ಭೂಮೌಲ್ಯ ಆಧರಿಸಿ ಕೇಂದ್ರ ಸರಕಾರವು 4 ಹಂತದಲ್ಲಿ ಪರಿಹಾರಕ್ಕೆ ಶಿಫಾರಸು ಮಾಡಲಿದ್ದು, ಈ ದಿಸೆಯಲ್ಲಿ ರಾಜ್ಯ ಸರಕಾರ ಎಷ್ಟು ಕಂತಿನಲ್ಲಿ ಅರ್ಹರಿಗೆ ಬಿಡುಗಡೆಗೊಳಿಸಲಿದೆ ಎಂಬದು ಆಯಾ ರಾಜ್ಯಗಳ ವಿವೇಚನೆಗೆ ಬಿಟ್ಟಿದ್ದೆಂದು ಸುಳಿವು ನೀಡಿದರು.

ಈಗಾಗಲೇ ಕೇಂದ್ರ ಸರಕಾರದಿಂದ ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಪ್ರಾಧಿಕಾರ ಹಾಗೂ ರಾಷ್ಟ್ರೀಯ ಅಭಿವೃದ್ಧಿ ಬ್ಯಾಂಕ್ ತಮ್ಮ ಸಂಸ್ಥೆಗೆ ವಹಿಸಿರುವ ಕೆಲಸದಂತೆ, ಮಡಿಕೇರಿ - ಮೈಸೂರು ನಡುವೆ 124.360 ಕಿ.ಮೀ. ಸರ್ವೆಯೊಂದಿಗೆ 275ನೇ ಹೆದ್ದಾರಿ ಯೋಜನೆಗೆ ಪೂರಕವಾಗಿ ಒಟ್ಟು 160 ಪುಟಗಳ ನೀಲಿ ನಕಾಶೆ (ಡಿಸೈನ್ ಮ್ಯಾಪ್) ಸಿದ್ಧಗೊಳಿಸಲಾಗಿದೆ.

ಸಾರ್ವಜನಿಕರಿಗೆ ಮಾಹಿತಿ: ರಾಷ್ಟ್ರೀಯ ಹೆದ್ದಾರಿ ಹಾದು ಹೋಗಲಿರುವ ಪ್ರಮುಖ ಪಟ್ಟಣಗಳು ಹಾಗೂ ನಗರ ಪ್ರದೇಶ ಸಹಿತ ಈಗಾಗಲೇ ಗುರುತಿಸಿರುವ 50ಕ್ಕೂ ಅಧಿಕ ಹಳ್ಳಿಗಳಲ್ಲಿ ಕೂಡ ರಸ್ತೆ ಮಧ್ಯದಿಂದ ಉಭಯಕಡೆ 30 ಮೀಟರ್‍ನಂತೆ ಸರ್ವೆ ನಡೆ ಯುತ್ತಿದ್ದು, ಸಾರ್ವಜನಿಕರ ಮಾಹಿತಿಯನ್ನು ಒಳಗೊಂಡಂತೆ ಸರಕಾರಕ್ಕೆ ವರದಿ ಸಲ್ಲಿಸುವದಾಗಿ ಡಾ. ಆನಂದ್ ತಿಳಿಸಿದ್ದಾರೆ.

ಜಿಲ್ಲಾ ಕೇಂದ್ರ ಮಡಿಕೇರಿಯ ತಿಮ್ಮಯ್ಯ ವೃತ್ತದಿಂದ ಮುಂದಕ್ಕೆ ರಸ್ತೆ ಇಕ್ಕಡೆಗಳಲ್ಲಿ ಜಿಲ್ಲಾ ಸರಕಾರಿ ಆಸ್ಪತ್ರೆಯಿದ್ದು, ಸುರಂಗ ಮಾರ್ಗವು ಇರುವ ಹಿನ್ನೆಲೆ, ಹೆದ್ದಾರಿಯ ಸಾಧಕ- ಬಾಧಕಗಳನ್ನು ಪರಿಶೀಲನೆಗೆ ಕೋರುವದಾಗಿಯೂ ಅವರು ‘ಶಕ್ತಿ’ಯೊಂದಿಗೆ ಖಚಿತಪಡಿಸಿದ್ದಾರೆ.