ಸೋಮವಾರಪೇಟೆ, ಸೆ.13: ಬ್ಯಾಡಗೊಟ್ಟ ಗ್ರಾಮ ಪಂಚಾಯಿತಿಗೆ ತಾಲೂಕು ಪಂಚಾಯಿತಿ ಅಧ್ಯಕ್ಷರಾದ ನಂತರ ಎಷ್ಟು ಅನುದಾನ ನೀಡಿದ್ದೀರಿ? ಎಂದು ಗ್ರಾಮಸ್ಥರು, ತಾ.ಪಂ. ಅಧ್ಯಕ್ಷೆ ಪುಷ್ಪಾ ರಾಜೇಶ್ ಅವರನ್ನು ಕೇಳಿದ ಸಂದರ್ಭ ಮೈಕ್ ಹಿಡಿದು ಉತ್ತರಿಸಲು ಸಿದ್ಧರಾದ ಅಧ್ಯಕ್ಷೆಯ ಪತಿಯನ್ನು ಗ್ರಾಮಸ್ಥರು ತರಾಟೆಗೆ ತೆಗೆದುಕೊಂಡ ಘಟನೆ ನಡೆಯಿತು.ತಾಲೂಕಿನ ಬ್ಯಾಡಗೊಟ್ಟ ಗ್ರಾಮ ಪಂಚಾಯಿತಿಯ ಗ್ರಾಮ ಸಭೆ ಅಧ್ಯಕ್ಷೆ ನಿರ್ಮಲ ಸುಂದರ್ ಅಧ್ಯಕ್ಷತೆಯಲ್ಲಿ ಹ್ಯಾಂಡ್‍ಪೋಸ್ಟ್ ಸಮೀಪದ ನೂರ್ ಮಹಲ್ ಸಭಾಂಗಣದಲ್ಲಿ ನಡೆಯಿತು.ಸಭೆಯಲ್ಲಿ ಉಪಸ್ಥಿತರಿದ್ದ ತಾ.ಪಂ. ಅಧ್ಯಕ್ಷೆ ಪುಷ್ಪಾ ಅವರನ್ನು ಗ್ರಾಮಸ್ಥರು ಪ್ರಶ್ನಿಸಿ, ತಾವು ತಾ.ಪಂ. ಅಧ್ಯಕ್ಷೆಯಾಗಿ ಆಯ್ಕೆಗೊಂಡ ನಂತರ ಬ್ಯಾಡಗೊಟ್ಟ ಗ್ರಾಮಕ್ಕೆ ಎಷ್ಟು ಅನುದಾನ ನೀಡಿದ್ದೀರಿ? ಏನೆಲ್ಲಾ ಅಭಿವೃದ್ಧಿ ಕಾರ್ಯ ಮಾಡಿದ್ದೀರಿ? ಎಂದು ಮಾಹಿತಿ ಬಯಸಿದರು.

ಈ ಸಂದರ್ಭ ಮೈಕ್ ಬಳಿ ಬಂದ ಅಧ್ಯಕ್ಷೆಯ ಪತಿ ರಾಜೇಶ್ ಮಾತನಾಡಲು ಮುಂದಾದರು. ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಗ್ರಾಮಸ್ಥರಾದ ಶಿವಗಣೇಶ್, ಕೆ.ಎಂ. ಗಣೇಶ್, ಸೋಮೇಶ್,

(ಮೊದಲ ಪುಟದಿಂದ) ಪ್ರಕಾಶ್ ಸೇರಿದಂತೆ ಇತರರು, “ತಾವೇನು ಅಧ್ಯಕ್ಷರೋ? ಅಥವಾ ಈ ಗ್ರಾಮ ಪಂಚಾಯಿತಿಗೆ ಸಂಬಂಧಪಟ್ಟವರೋ? ನೀವ್ಯಾಕೆ ಮಧ್ಯೆ ಪ್ರವೇಶಿಸುತ್ತೀರಿ? ಅಧ್ಯಕ್ಷರು ಉತ್ತರಿಸಲಿ.., ನೀವು ಸುಮ್ಮನಿರಿ” ಎಂದು ತರಾಟೆಗೆ ತೆಗೆದುಕೊಂಡರು.

ತಾ.ಪಂ. ಅಧ್ಯಕ್ಷರ ಹೆಸರಿನ ಮುಂದೆ ನನ್ನ ಹೆಸರಿದೆ. ನನಗೂ ಅಧಿಕಾರವಿದೆ ಎಂದು ಸಬೂಬು ನೀಡಲು ಮುಂದಾಗುತ್ತಿದ್ದಂತೆ ಸಭೆಯಲ್ಲಿ ಭಾಗವಹಿಸಿದ್ದ ಅನೇಕ ಮಂದಿ ಮತ್ತೊಮ್ಮೆ ಆಕ್ಷೇಪಿಸಿದರು. ಪುಷ್ಪಾ ರಾಜೇಶ್ ಅವರು ಕೊಡ್ಲಿಪೇಟೆ ಕ್ಷೇತ್ರದಿಂದ ಪ್ರತಿನಿಧಿಸುತ್ತಿದ್ದು, ಬ್ಯಾಡಗೊಟ್ಟ ಗ್ರಾ.ಪಂ. ಸಹ ಇದೇ ತಾ.ಪಂ. ಕ್ಷೇತ್ರಕ್ಕೆ ಒಳಪಡುತ್ತದೆ. ಆದರೆ ಅಧ್ಯಕ್ಷರ ಪತಿ ರಾಜೇಶ್ ಅವರು ಕೊಡ್ಲಿಪೇಟೆ ಗ್ರಾಮ ಪಂಚಾಯಿತಿಗೆ ಒಳಪಟ್ಟವರಾಗಿದ್ದು, ಬ್ಯಾಡಗೊಟ್ಟ ಗ್ರಾ.ಪಂ.ಗೆ ಸಂಬಂಧವಿಲ್ಲ. ಈ ಹಿನ್ನೆಲೆ ಸಭೆಯಲ್ಲಿ ಕೆಲಕಾಲ ವಾಗ್ವಾದ ನಡೆಯಿತು.

ನಂತರ ಅಧ್ಯಕ್ಷೆ ಪುಷ್ಪಾ ರಾಜೇಶ್ ಅವರು, ತಾ.ಪಂ.ನಿಂದ ಅಂಗನವಾಡಿ ದುರಸ್ತಿ ಸೇರಿದಂತೆ ಇನ್ನಿತರ ಕಾಮಗಾರಿ ನಡೆಸಲಾಗಿದೆ. ಮುಂದಿನ ದಿನಗಳಲ್ಲಿ ಜಿ.ಪಂ. ಅನುದಾನವನ್ನೂ ಸೇರಿಸಿಕೊಂಡು ಆದ್ಯತೆ ಮೇರೆಗೆ ಕಾಮಗಾರಿ ನಡೆಸಲಾಗುವದು ಎಂದು ತಿಳಿಸಿದರು.

ಬ್ಯಾಡಗೊಟ್ಟ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ನವಗ್ರಾಮ ಯೋಜನೆಯಡಿ 60 ನಿವೇಶನಗಳನ್ನು ಹಂಚಲು ಗುರುತಿಸಲಾಗಿದ್ದು, ಇದುವರೆಗೂ 110 ಮಂದಿ ಅರ್ಜಿ ಸಲ್ಲಿಸಿದ್ದಾರೆ ಎಂದು ತಿಳಿಸಿದ ಗ್ರಾ. ಪಂ. ಅಭಿವೃದ್ಧಿ ಅಧಿಕಾರಿ ಹರೀಶ್, 110 ಮಂದಿಯ ಹೆಸರನ್ನು ಸಭೆಯಲ್ಲಿ ಓದಿದರು. ಸ್ಥಳೀಯರಿಗೆ ಹೆಚ್ಚಿನ ಆದ್ಯತೆ ನೀಡಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದರು. ಈಗಿರುವ 110 ಮಂದಿಯಲ್ಲಿ ಅರ್ಹ ಫಲಾನುಭವಿಗಳನ್ನು ಗುರುತಿಸಿ ನಿವೇಶನ ನೀಡಲಾಗುವದು ಎಂದು ಸಭೆಯ ಅಧ್ಯಕ್ಷತೆ ವಹಿಸಿದ್ದ ನಿರ್ಮಲ ಸುಂದರ್ ತಿಳಿಸಿದರು.

ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಿಂದ ಮಾತೃಪೂರ್ಣ ಯೋಜನೆಯಡಿ ಗರ್ಭಿಣಿಯರಿಗೆ ಮತ್ತು ಬಾಣಂತಿಯರಿಗೆ ಪೌಷ್ಟಿಕಾಂಶಯುಕ್ತ ಆಹಾರವನ್ನು ನೀಡಲಾಗುತ್ತಿದ್ದು, ಫಲಾನುಭವಿಗಳು ಇದರ ಸದುಪಯೋಗ ಪಡಿಸಿಕೊಳ್ಳುವಂತೆ ಇಲಾಖೆಯ ಅಧಿಕಾರಿ ಶೀಲಾ ಮಾಹಿತಿ ನೀಡಿದರು.

ಗರ್ಭಿಣಿಯರು ಮತ್ತು ಬಾಣಂತಿಯರಿಗೆ ಅಂಗನವಾಡಿ ಕೇಂದ್ರಕ್ಕೆ ಆಗಮಿಸಲು ಕಷ್ಟಸಾಧ್ಯವಾಗಿದ್ದು, ಪೌಷ್ಟಿಕಾಂಶಯುಕ್ತ ಆಹಾರವನ್ನು ಮನೆಗೆ ತಲುಪಿಸುವ ವ್ಯವಸ್ಥೆ ಮಾಡಬೇಕೆಂದು ಗ್ರಾಮಸ್ಥರು ಒತ್ತಾಯಿಸಿದರು.

ಉಳಿದಂತೆ ಸಭೆಯಲ್ಲಿ ಭಾಗವಹಿಸಿದ್ದ ವಿವಿಧ ಇಲಾಖಾಧಿಕಾರಿಗಳು ತಮ್ಮ ಇಲಾಖಾ ಕಾರ್ಯಕ್ರಮಗಳ ಬಗ್ಗೆ ಮಾಹಿತಿ ನೀಡಿದರು. ಸಭೆಯಲ್ಲಿ ಗ್ರಾ.ಪಂ. ಉಪಾಧ್ಯಕ್ಷ ಅಹಮ್ಮದ್, ಸದಸ್ಯರುಗಳಾದ ದಿನೇಶ್, ರೇಣುಕಾ, ಹೇಮಾ, ಸಾವಿತ್ರಿ, ಕೇಶವ, ಷಣ್ಮುಖಯ್ಯ, ಗೌರಮ್ಮ ಭಾಗವಹಿಸಿದ್ದರು. ಗ್ರಾಮಸ್ಥರಾದ ವಾಸು, ಆಸೀಫ್, ಅಬ್ಬಾಸ್, ಪ್ರಕಾಶ್, ವಸಂತ ಸೇರಿದಂತೆ ಇತರರು ಸಭೆಯಲ್ಲಿ ಮಾತನಾಡಿದರು.