ಸೋಮವಾರಪೇಟೆ, ಸೆ. 9: ಸೋಮವಾರಪೇಟೆ ಪಟ್ಟಣ ಪಂಚಾಯಿತಿ ವತಿಯಿಂದ ಒಂದು ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಿಸಲಾಗಿರುವ ಹೈಟೆಕ್ ಮಾರುಕಟ್ಟೆ ಜೂಜುಕೋರರ ಮೋಜಿನ ತಾಣವಾಗಿ ಮಾರ್ಪಟ್ಟಿದೆ. ಈ ಮಾರುಕಟ್ಟೆಯಲ್ಲಿ ಸೋಮವಾರ ಹೊರತುಪಡಿಸಿ ಉಳಿದ ದಿನಗಳಲ್ಲಿ ಎಗ್ಗಿಲ್ಲದೇ ಅಕ್ರಮ ಜೂಜು ನಡೆಯುತ್ತಿದೆ.

ಕೆಲಸವಿಲ್ಲದ ಕೆಲ ಜೂಜುಕೋರರು ಮಾರುಕಟ್ಟೆಯ ಒಳಗೆ ರಾಜಾರೋಷದಿಂದ ಅಕ್ರಮವಾಗಿ ಇಸ್ಪೀಟ್, ಕವಡೆಯಂತಹ ಜೂಜಿನಾಟದಲ್ಲಿ ತೊಡಗಿದ್ದರೂ ಪೊಲೀಸರು ಇತ್ತ ಕಣ್ಣು ಹಾಯಿಸದಿರುವದು ವಿಪರ್ಯಾಸವೇ ಸರಿ. ಮಾರುಕಟ್ಟೆಯ ಒಳಭಾಗದಲ್ಲಿ ಬಿಸಿಲು ಮಳೆಯಿಂದ ರಕ್ಷಣೆ ಪಡೆಯುತ್ತಿರುವ ಜೂಜುಕೋರರು ಬೆಳಗ್ಗಿನಿಂದ ಸಂಜೆಯವರೆಗೂ ಇಸ್ಪೀಟ್-ಕವಡೆ ಆಟದಲ್ಲಿ ತೊಡಗಿಕೊಂಡಿರುತ್ತಾರೆ. ಮಾಂಸ, ಮೀನು ಖರೀದಿಸಲು ಇದೇ ಮಾರುಕಟ್ಟೆ ಮೂಲಕ ತೆರಳುವವರಿಗೆ ಜೂಜುಕೋರರ ದರ್ಶನವಾಗುತ್ತಿದ್ದು, ಪೋಲೀಸರಿದ್ದರೂ ಸಹ ಕೊಂಚವೂ ಭಯವಿಲ್ಲದೇ ಜೂಜಿನಾಟದಲ್ಲಿ ತೊಡಗಿ ಕೊಂಡಿರುವವರ ಧೈರ್ಯಕ್ಕೆ ಮೆಚ್ಚುಗೆ ಸೂಚಿಸುತ್ತಿದ್ದಾರೆ!

ಸೋಮವಾರಪೇಟೆ ಪೊಲೀಸ್ ಠಾಣೆಯಲ್ಲಿ ಪೊಲೀಸರಿದ್ದಾರೆ ಎಂಬ ಭಯ ಈ ಜೂಜುಕೋರರಿಗೆ ಇದ್ದಂತೆ ಕಾಣುತ್ತಿಲ್ಲ. ಆ ಭಯ ಬಂದ ದಿನ ಜೂಜು ಅಡ್ಡೆಗೆ ಬ್ರೇಕ್ ಬೀಳಬಹುದೇನೋ...!