ಸೋಮವಾರಪೇಟೆ,ಸೆ.9: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮಕ್ಕೆ ಒಳಟ್ಟಿರುವ ಇಲ್ಲಿನ ಸರ್ಕಾರಿ ಬಸ್ ನಿಲ್ದಾಣಕ್ಕೆ ಸಿ.ಸಿ. ಕ್ಯಾಮೆರಾ ಅಳವಡಿಸುವದೂ ಸೇರಿದಂತೆ ಇನ್ನಿತರ ಸೌಕರ್ಯಗಳನ್ನು ಕಲ್ಪಿಸಬೇಕೆಂದು ಇಲಾಖೆಯ ಅಭಿಯಂತರರ ಗಮನ ಸೆಳೆಯಲಾಯಿತು.

ಬಸ್ ನಿಲ್ದಾಣ ವೀಕ್ಷಣೆಗೆ ಆಗಮಿಸಿದ್ದ ರಸ್ತೆ ಸಾರಿಗೆ ನಿಗಮದ ಪುತ್ತೂರು ವಿಭಾಗೀಯ ಇಂಜಿನಿಯರ್ ದಿವಾಕರ್ ಅವರಲ್ಲಿ ಈ ಬಗ್ಗೆ ಗಮನ ಸೆಳೆದ ದಲಿತ ಸಂಘಟನೆಗಳ ಒಕ್ಕೂಟದ ಜಿಲ್ಲಾ ಉಪಾಧ್ಯಕ್ಷ ಹೊನ್ನಪ್ಪ, ಅಬ್ದುಲ್ ಅಜೀಜ್ ಸೇರಿದಂತೆ ಇತರರು, ಬಸ್ ನಿಲ್ದಾಣಕ್ಕೆ ಸಿ.ಸಿ. ಕ್ಯಾಮೆರಾ, ಕುಳಿತುಕೊಳ್ಳಲು ಸುಸಜ್ಜಿತ ಆಸನ ವ್ಯವಸ್ಥೆ, ಬಸ್‍ಗಳು ನಿಲುಗಡೆಗೊಳ್ಳುವ ಸ್ಥಳದಲ್ಲಿ ಕಬ್ಬಿಣದ ಪಟ್ಟಿ ಅಳವಡಿಸುವಂತೆ ಮನವಿ ಮಾಡಿದರು.

ಇದರೊಂದಿಗೆ ಸೋಮವಾರ ಪೇಟೆಯಿಂದ ತೋಳೂರುಶೆಟ್ಟಳ್ಳಿ, ಕೂತಿ, ಸಕಲೇಶಪುರ, ಧರ್ಮಸ್ಥಳ ಮಾರ್ಗವಾಗಿ ನೂತನ ಬಸ್ ವ್ಯವಸ್ಥೆ ಕಲ್ಪಿಸುವಂತೆ ಅಭಿಯಂತರರಿಗೆ ಮನವಿ ಸಲ್ಲಿಸಿದರು. ಇದಕ್ಕೆ ಸಕಾರಾತ್ಮಕವಾಗಿ ಸ್ಪಂದಿಸಿದ ಇಂಜಿನಿಯರ್ ದಿವಾಕರ್ ಅವರು, ಆದಷ್ಟು ಶೀಘ್ರದಲ್ಲೇ ವ್ಯವಸ್ಥೆ ಕಲ್ಪಿಸುವದಾಗಿ ಭರವಸೆ ನೀಡಿದರು.

ಈ ಸಂದರ್ಭ ಸಾರಿಗೆ ನಿಯಂತ್ರಣಾಧಿಕಾರಿ ನಾಗರಾಜ್ ಶಿರಾಲಿ, ಸಂಚಲನಾಧಿಕಾರಿ ಮುರಳೀಧರ್ ಆಚಾರ್ಯ, ನಿಲ್ದಾಣಾಧಿಕಾರಿ ಶಿವಪ್ಪ ಅವರುಗಳು ಉಪಸ್ಥಿತರಿದ್ದರು.