ಮಡಿಕೇರಿ, ಸೆ. 9: ಹೈಟೆಕ್ ಮಾರುಕಟ್ಟೆ ಕಾಮಗಾರಿಯು ಪ್ರಾರಂಭಗೊಂಡು ಸುಮಾರು 4 ವರ್ಷಗಳು ಕಳೆದಿದ್ದು, ಇದೀಗ ಸ್ಥಗಿತಗೊಂಡು ಸುಮಾರು 3 ತಿಂಗಳು ಕಳೆದಿದೆ. ಪ್ರತಿಬಾರಿಯು ಕಾಟಚಾರಕ್ಕೆ ಎಂಬಂತೆ ಕೆಲವು ದಿನಗಳು ತೋರ್ಪಡಿಕೆಗೆ ಕೆಲಸ ನಿರ್ವಹಿಸಿ ನಂತರದ ದಿನಗಳಲ್ಲಿ ಸ್ಥಗಿತಗೊಳಿಸುತ್ತಿ ರುವದು ಮಾಮೂಲಿಯಾಗಿದೆ. ಸದರಿ ಮಾರುಕಟ್ಟೆ ಪ್ರದೇಶವು ಕೆಸರಿನ ಕೊಂಪೆಂತಾಗಿದ್ದು, ಗ್ರಾಹಕರಿಗೂ ಮತ್ತು ವ್ಯಾಪಾರಸ್ಥರಿಗೂ ಇದರಿಂದ ತುಂಬಾ ತೊಂದರೆಯಾಗುತ್ತಿದೆ. ಜನಪ್ರತಿನಿಧಿಗಳಾದ ಜನತೆಯು ನಮ್ಮನ್ನೆ ತಪ್ಪಿತಸ್ಥರಂತೆ ನೋಡುವಂತಾ ಗಿದೆ ಎಂದು ನಗರಸಭಾ ಸದಸ್ಯ ಹಾಗೂ ಎಸ್‍ಡಿಪಿಐ ನಗರ ಅಧ್ಯಕ್ಷ ಕೆ.ಜೆÉ. ಪೀಟರ್ ಪ್ರತಿಕ್ರಿಯಿಸಿದ್ದಾರೆ.

ಅಲ್ಲದೇ ಖಾಸಗಿ ಬಸ್ ನಿಲ್ದಾಣದ ಕಾಮಗಾರಿಯು ಸ್ಥಗಿತಗೊಂಡಿದ್ದು, ಅದನ್ನು ಸಹ ಪುನರಾರಂಭಗೊಳಿಸುವಂತೆ ಹಾಗೂ ಮಡಿಕೇರಿ ನಗರದ ಎಲ್ಲಾ ರಸ್ತೆಗಳ ಗುಂಡಿ ಮುಚ್ಚಿ ಡಾಂಬರೀಕರಣಗೊಳಿ ಸುವಂತೆ ಅವರು ಒತ್ತಾಯಿಸಿದ್ದಾರೆ. ಪ್ರತಿಯೊಂದು ಸಭೆಯಲ್ಲಿಯೂ ಕಾಮಗಾರಿ ವಿಳಂಬದ ಬಗ್ಗೆ ಪ್ರಸ್ತಾಪಿಸಿದ್ದು, ಕವಡೆ ಕಾಸಿನ ಕಿಮ್ಮತ್ತಿಲ್ಲದಂತಾಗಿದೆ ಎಂದು ಅವರು ಪತ್ರಿಕಾ ಹೇಳಿಕೆಯಲ್ಲಿ ಟೀಕಿಸಿದ್ದಾರೆ.

ನಗರದ ಜನತೆ ತೀರ್ಮಾನಕ್ಕೆ ಜನಪ್ರತಿನಿಧಿಗಳಾದ ನಾವುಗಳು ಜವಾಬ್ದಾರರಾಗಿದ್ದು, ಮುಂದಿನ ದಿನಗಳಲ್ಲಿ ಹೋರಾಟದ ಹಾದಿ ಹಿಡಿಯುವದು ಅನಿವಾರ್ಯವಾಗಿದೆ. ಈ ಕುರಿತಂತೆ ತಮಗೆ ಎಸ್‍ಡಿಪಿಐ ಪಕ್ಷವು 1 ವಾರದ ಗಡುವು ನೀಡುತ್ತಿದ್ದು, ಈ ಗಡುವಿಗೆ ತಪ್ಪಿದ್ದಲ್ಲಿ ತಾ. 15 ರಂದು ಮಾರುಕಟ್ಟೆ ಆವರಣದಲ್ಲೇ ಪ್ರತಿಭಟನೆಯನ್ನು ನಡೆಸುವದಾಗಿಯೂ ಎಚ್ಚರಿಕೆ ನೀಡಿದ್ದಾರೆ. ಅಲ್ಲದೆ ಕಾಮಗಾರಿ ನಿರ್ವಹಿಸದ ಸಂಬಂಧಿಸಿದ ಗುತ್ತಿಗೆದಾರರನ್ನು ಕಪ್ಪುಪಟ್ಟಿಯಲ್ಲಿ ಸೇರಿಸುವಂತೆಯೂ ಆಗ್ರಹಿಸಿದ ಪೀಟರ್, ನಗರಸಭೆ ಅಧ್ಯಕ್ಷರು ಹಾಗೂ ಆಯುಕ್ತರಿಗೆ ಲಿಖಿತವಾಗಿ ಗಮನ ಸೆಳೆದಿದ್ದಾರೆ.