ಸೋಮವಾರಪೇಟೆ, ಸೆ. 9: ಜಿಲ್ಲಾ ಪಂಚಾಯಿತಿ ಹಾಗೂ ತಾಲೂಕು ಪಂಚಾಯಿತಿಯ ಆಶ್ರಯದಲ್ಲಿರುವ ದೇವರಾಜ ಅರಸು ಮೆಟ್ರಿಕ್ ನಂತರದ ಬಾಲಕಿಯರ ವಿದ್ಯಾರ್ಥಿ ವಸತಿ ನಿಲಯಕ್ಕೆ ಭೇಟಿ ನೀಡಿದ ತಾಲೂಕು ಪಂಚಾಯಿತಿ ಪ್ರತಿನಿಧಿಗಳು, ಹಾಸ್ಟೆಲ್‍ನ ಕೆಲವೊಂದು ಅವ್ಯವಸ್ಥೆಗಳ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು.ಇಲ್ಲಿನ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ರಸ್ತೆಯಲ್ಲಿರುವ ವಸತಿ ನಿಲಯಕ್ಕೆ ದಿಢೀರ್ ಭೇಟಿ ನೀಡಿದ ತಾ.ಪಂ. ಅಧ್ಯಕ್ಷೆ ಪುಷ್ಪಾ ರಾಜೇಶ್, ಉಪಾಧ್ಯಕ್ಷ ಅಭಿಮನ್ಯುಕುಮಾರ್, ಸ್ಥಾಯಿ ಸಮಿತಿ ಅಧ್ಯಕ್ಷ ಧರ್ಮಪ್ಪ, ಸದಸ್ಯೆ ತಂಗಮ್ಮ, ಕಾರ್ಯ ನಿರ್ವಹಣಾಧಿಕಾರಿ ಚಂದ್ರಶೇಖರ್, ತಾ.ಪಂ. ವ್ಯವಸ್ಥಾಪಕ ರವೀಂದ್ರ ಅವರುಗಳು ವಸತಿ ನಿಲಯದ ವಿವಿಧ ಸೌಲಭ್ಯಗಳ ಬಗ್ಗೆ ಪರಿಶೀಲನೆ ನಡೆಸಿದರು.

ಹಾಸ್ಟೆಲ್‍ನಲ್ಲಿ ತಂಗುತ್ತಿರುವ ವಿದ್ಯಾರ್ಥಿನಿಯರೊಂದಿಗೆ ಮಾತುಕತೆ ನಡೆಸಿದ ಪ್ರಮುಖರು, ಅವರುಗಳಿಂದ ಸಮಸ್ಯೆ ಆಲಿಸಿದರು. ಸಂಜೆ ದಿಢೀರ್ ಭೇಟಿ ನೀಡಿದ ಜನಪ್ರತಿನಿಧಿಗಳು ವಿದ್ಯಾರ್ಥಿಗಳ ಹಾಜರಾತಿ ವಹಿಯನ್ನು ಪರಿಶೀಲಿಸಿ ಕೆಲವರು ಹಾಸ್ಟೆಲ್‍ಗೆ ಆಗಮಿಸಿ ನಂತರ ಹೊರ ತೆರಳಿರುವ ಬಗ್ಗೆ ವಾರ್ಡನ್ ಅವರನ್ನು ಪ್ರಶ್ನಿಸಿದರು.

ವಿದ್ಯಾರ್ಥಿಗಳಿಗೆ ಪೂರೈಕೆಯಾ ಗುತ್ತಿರುವ ಅಡುಗೆ ದಿನಸಿ ಪದಾರ್ಥ ಗಳನ್ನು ಪರಿಶೀಲಿಸಿದ ಸಂದರ್ಭ ಕೆಲವೊಂದು ದಿನಸಿ ವಸ್ತುಗಳು ಹಾಳಾಗಿರುವದು ಕಂಡುಬಂತು. ಮಕ್ಕಳಿಗೆ ಸೂಚಿಸಿರುವಂತೆಯೇ ಉಪಾಹಾರ ಹಾಗೂ ಊಟವನ್ನು ನೀಡಬೇಕು. ಶುಚಿ ರುಚಿಯಾದ ಭೋಜನ ನೀಡಬೇಕು ಎಂದು ತಾ.ಪಂ. ಉಪಾಧ್ಯಕ್ಷ ಅಭಿಮನ್ಯುಕುಮಾರ್ ವಾರ್ಡನ್ ರಮಾದೇವಿಗೆ ಸೂಚಿಸಿದರು.

ಹಾಸ್ಟೆಲ್‍ನ ನಾಲ್ಕೈದು ವಿದ್ಯಾರ್ಥಿಗಳು ರಜೆ ಅರ್ಜಿ ನೀಡಿ ತೆರಳಿದ್ದರಿಂದ ಅವರುಗಳ ರಜೆ ಅರ್ಜಿಯ ಸತ್ಯಾಸತ್ಯತೆ ಪರಿಶೀಲಿಸಲು ಅವುಗಳನ್ನು ಬಿಸಿಎಂ ವಿಸ್ತರಣಾಧಿಕಾರಿ ಸ್ವಾಮಿ ಅವರಿಗೆ ನೀಡಲಾಯಿತು. ವಿದ್ಯಾರ್ಥಿಗಳು ರಜೆ ಹಾಕಿ ತೆರಳುವ ಸಂದರ್ಭ ಅವರುಗಳ ಪೋಷಕರಿಗೆ ಮಾಹಿತಿ ನೀಡಿ ನಂತರ ರಜೆ ಮಂಜೂರು ಮಾಡಬೇಕು ಎಂದು ರಮಾದೇವಿ ಅವರಿಗೆ ನಿರ್ದೇಶನ ನೀಡಲಾಯಿತು. ವಸತಿ ನಿಲಯದಲ್ಲಿ ರುವ ಗೀಸರ್ ದುರಸ್ತಿ ಬಗ್ಗೆ ಕಳೆದ ಪೋಷಕರ ಸಭೆಯಲ್ಲಿ ಚರ್ಚಿಸ ಲಾಗಿದ್ದರೂ ಇನ್ನೂ ದುರಸ್ತಿಪಡಿಸದ ಬಗ್ಗೆ ತಾ.ಪಂ. ಪ್ರಮುಖರು ಅಸಮಾಧಾನ ವ್ಯಕ್ತಪಡಿಸಿ ತಕ್ಷಣ ಕ್ರಮ ಕೈಗೊಳ್ಳಬೇಕೆಂದು ಇಲಾಖಾಧಿಕಾರಿ ಸ್ವಾಮಿ ಅವರಿಗೆ ಸೂಚಿಸಿದರು.

ಇದರೊಂದಿಗೆ ಕೆಲ ಕೊಠಡಿಗಳಲ್ಲಿ ಫ್ಯಾನ್ ಇಲ್ಲದಿರುವ ಬಗ್ಗೆ ವಿದ್ಯಾರ್ಥಿ ಗಳು ಗಮನ ಸೆಳೆದರು. ವಿದ್ಯಾರ್ಥಿ ಗಳನ್ನು ಪ್ರತ್ಯೇಕವಾಗಿ ಕೊಠಡಿಗಳಲ್ಲಿ ಮಾತನಾಡಿಸಿ ಅವರ ಬೇಕು ಬೇಡಿಕೆಗಳ ಪಟ್ಟಿ ತಯಾರಿ ಸಲಾಯಿತು. ದೂರು ಪೆಟ್ಟಿಗೆಯನ್ನು ಹಾಸ್ಟೆಲ್‍ನಲ್ಲಿ ಅಳವಡಿಸುವಂತೆ ವಾರ್ಡನ್‍ಗೆ ಸೂಚಿಸಲಾಯಿತು.

ನಂತರ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದ ಅಭಿಮನ್ಯುಕುಮಾರ್, ಗ್ರಾಮೀಣ ಭಾಗದ ಬಡ ವಿದ್ಯಾರ್ಥಿಗಳ ವಿದ್ಯಾಭ್ಯಾಸದ ಅನುಕೂಲಕ್ಕಾಗಿ ಸರ್ಕಾರ ಲಕ್ಷಾಂತರ ರೂಪಾಯಿ ವ್ಯಯಿಸಿ ಹಾಸ್ಟೆಲ್‍ಗಳನ್ನು ನಿರ್ವಹಿಸು ತ್ತಿದ್ದು, ಇದರ ಮಹತ್ವ ಅರಿತು ವಿದ್ಯಾರ್ಥಿಗಳು ಶೈಕ್ಷಣಿಕವಾಗಿ ಮುಂದೆ ಬರಬೇಕು. ಉತ್ತಮ ಶಿಕ್ಷಣವನ್ನು ಪಡೆದು ಭವಿಷ್ಯದಲ್ಲಿ ಉತ್ತಮ ಪ್ರಜೆಗಳಾಗಿ ರೂಪುಗೊಳ್ಳ ಬೇಕು. ವೈಯಕ್ತಿಕ ಆರೋಗ್ಯ ಮತ್ತು ಸ್ವಚ್ಛತೆಯ ಕಡೆಗೂ ಗಮನ ಹರಿಸಬೇಕು. ಹಾಸ್ಟೆಲ್‍ನಲ್ಲಿ ಅವ್ಯವಸ್ಥೆ ಗಳು ಕಂಡುಬಂದರೆ ಜನಪ್ರತಿನಿಧಿಗಳ ಗಮನಕ್ಕೆ ತರಬೇಕು ಎಂದರು.