ಸೋಮವಾರಪೇಟೆ, ಸೆ.9: ತುಳುವೆರ ಜನಪದ ಕೂಟದ ಜಿಲ್ಲಾ ಮತ್ತು ತಾಲೂಕು ಸಮಿತಿಗಳ ಸಭೆ ತಾ. 11ರಂದು ಇಲ್ಲಿನ ಸಫಾಲಿ ಸಭಾಂಗಣದಲ್ಲಿ ನಡೆಯಲಿದೆ ಎಂದು ಕೂಟದ ತಾಲೂಕು ಅಧ್ಯಕ್ಷ ಕೆ.ಪಿ. ದಿನೇಶ್ ತಿಳಿಸಿದ್ದಾರೆ.
ನಗರದ ಪತ್ರಿಕಾಭವನದಲ್ಲಿ ಆಯೋಜಿಸಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ ಅವರು, ತಾ. 11ರಂದು ಪೂರ್ವಾಹ್ನ 10.30ಕ್ಕೆ ಸಭೆ ನಡೆಯಲಿದ್ದು, ಸಭೆಯಲ್ಲಿ ಜಿಲ್ಲೆ, ತಾಲೂಕು ಕೂಟದ ಸದಸ್ಯರುಗಳು ಭಾಗವಹಿಸಲಿದ್ದಾರೆ ಎಂದರು.
ದಕ್ಷಿಣ ಕನ್ನಡ ಮೂಲದ ವಿವಿಧ ಜನಾಂಗದವರು ಕೊಡಗಿನಲ್ಲಿ ತಲೆತಲಾಂತರದಿಂದ ನೆಲೆಸಿದ್ದು, ತುಳು ಭಾಷಿಕರ ಭಾಷೆ, ಸಂಸ್ಕøತಿ, ಆಚಾರ, ವಿಚಾರ, ಪದ್ಧತಿ ಪರಂಪರೆಗಳನ್ನು ಬದಲಾಗುತ್ತಿರುವ ಯುಗದಲ್ಲಿ ಮರೆಯಲಾಗುತ್ತಿದೆ. ಇವುಗಳನ್ನು ಜೀವಂತವಾಗಿಟ್ಟು ಮುಂದಿನ ಜನಾಂಗಕ್ಕೂ ಹಸ್ತಾಂತರಿಸುವ ಕಾರ್ಯವನ್ನು ತುಳುವೆರ ಜನಪದ ಕೂಟ ಮಾಡುತ್ತಿದೆ ಎಂದರು.
ಈಗಾಗಲೇ ಜಿಲ್ಲೆ ಹಾಗೂ ತಾಲೂಕು ಮಟ್ಟದಲ್ಲಿ ಸಂಘಟನೆಯನ್ನು ಸ್ಥಾಪಿಸಲಾಗಿದ್ದು, ಅ ಮೂಲಕ ತುಳು ಭಾಷಿಕರನ್ನು ಸಂಘಟಿಸಲಾಗುತ್ತಿದೆ. ತುಳು ಭಾಷಿಕರೆಲ್ಲರೂ ಒಂದೇ ಎಂಬ ಭಾವನೆಯೊಂದಿಗೆ ಜಾತಿ, ಮತ, ಮೇಲು, ಕೀಳು ಎಂಬ ಭೇದ ಭಾವವನ್ನು ಹೋಗಲಾಡಿಸಿ ಒಟ್ಟಿಗೆ ಬೆರೆತು ಸಂಸ್ಕøತಿಯನ್ನು ಉಳಿಸುವ ಜವಾಬ್ದಾರಿಯನ್ನು ಹೊಂದಲಾಗಿದೆ. ಆರ್ಥಿಕವಾಗಿ ಹಿಂದುಳಿದವರಿಗೆ ಸರ್ಕಾರದ ಸವಲತ್ತು ದೊರೆಯುವಂತೆ ಮಾಡುವದು. ತುಳು ಅಕಾಡೆಮಿಯಲ್ಲಿ ಕೊಡಗಿನ ಪ್ರಾತಿನಿಧ್ಯ ಪಡೆಯುವದು, ವಿದ್ಯಾರ್ಥಿಗಳಿಗೆ ಉತ್ತೇಜನ ನೀಡುವದು, ತುಳು ಭಾಷೆಯನ್ನು ಸಂವಿಧಾನದ 8ನೇ ಪರಿಚ್ಚೇದಕ್ಕೆ ಒಳಪಡಿಸಲು ಹೋರಾಡುವ ತತ್ವಗಳೊಂದಿಗೆ ಸಂಘಟನೆ ಕೆಲಸ ಮಾಡುತ್ತಿದೆ ಎಂದು ದಿನೇಶ್ ವಿವರಿಸಿದರು.
ಗೋಷ್ಠಿಯಲ್ಲಿ ಜನಪದ ಕೂಟದ ತಾಲೂಕು ಉಪಾಧ್ಯಕ್ಷ ಬಿ.ಎಂ. ದಾಮೋಧರ್, ಪ್ರಧಾನ ಕಾರ್ಯದರ್ಶಿ ಸಂತೋಷ್ ರೈ, ಜಂಟಿ ಕಾರ್ಯದರ್ಶಿ ಬಿ.ಜಿ. ಪ್ರಶಾಂತ್, ಗೌರವಾಧ್ಯಕ್ಷ ಮಂಜುನಾಥ್ ಚೌಟ, ಸದಸ್ಯ ಕಿಬ್ಬೆಟ್ಟ ಆನಂದ್, ಪ್ರೇಮ್‍ಕುಮಾರ್ ಅವರುಗಳು ಉಪಸ್ಥಿತರಿದ್ದರು.