ಗೋಣಿಕೊಪ್ಪಲು, ಸೆ. 9: ಕಾಳು ಮೆಣಸು ಆಮದು ಜಾಲದ ಮೂಲಕ ಸ್ಥಳೀಯ ರೈತರ ಅಭಿವೃದ್ಧಿಗೆ ವಿರುದ್ಧವಾಗಿ ತೊಡಗಿಕೊಂಡಿರುವ ಗೋಣಿಕೊಪ್ಪ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯನ್ನು ವಿಸರ್ಜಿಸಿ ತನಿಖೆ ನಡೆಸಬೇಕು ಎಂದು ಜೆಡಿಎಸ್ ಆಗ್ರಹಿಸಿದೆ.

ಸ್ಥಳೀಯವಾಗಿ ಕಾಳುಮೆಣಸು ಪೂರೈಕೆ ಇದ್ದರೂ ಆಮದು ಮೂಲಕ ಸ್ಥಳೀಯ ಕೃಷಿಕರಿಗೆ ಅನ್ಯಾಯ ಮಾಡುತ್ತಿರುವ ಸಮಿತಿ ಕೃಷಿಕರಿಗೆ ಬೇಡ. ಸಮಿತಿಯನ್ನು ವಿಸರ್ಜಿಸಿ ತನಿಖೆ ನಡೆಸಬೇಕು ಎಂದು ಜೆಡಿಎಸ್ ಪ್ರಮುಖ ಎಂ. ಟಿ. ಕಾರ್ಯಪ್ಪ ಸುದ್ದಿಗೋಷ್ಠಿಯಲ್ಲಿ ಒತ್ತಾಯಿಸಿದರು.

ಕಲಬೆರಕೆ ಮೂಲಕ ಕೊಡಗಿನ ಕಾಳುಮೆಣಸು ಮಾರುಕಟ್ಟೆಯಲ್ಲಿ ತನ್ನ ದರವನ್ನು ಕಳೆದುಕೊಳ್ಳಲಿದೆ. ಇದರಿಂದ ಕೃಷಿಕರಿಗೆ ಅನ್ಯಾಯವಾಗಲಿದೆ. ಅಷ್ಟೊಂದು ಪ್ರಮಾಣದ ಮೆಣಸು ಆಮದು ಆಗಿರುವದು ತಿಳಿದೂ ಸುಮ್ಮನಿರುವ ಸಮಿತಿ ಹಾಗೂ ಕಾರ್ಯದರ್ಶಿ ಇದರ ಜವಾಬ್ದಾರಿ ಹೊರಬೇಕಿದೆ ಎಂದರು.

ಸಮಿತಿಯಿಂದ ಸ್ಥಳೀಯ ಕೃಷಿಕರಿಗೆ ಯಾವದೇ ಪ್ರಯೋಜನವಾಗುತ್ತಿಲ್ಲ. ಸರ್ಕಾರದ ಅನುದಾನ ಯೋಜನೆಗಳು ಪ್ರಭಾವಿಗಳ ಪಾಲಾಗುತ್ತಿವೆ. ರಾಜಕೀಯವಾಗಿ ಅನುದಾನ ಬಳಕೆಯಾಗುತ್ತಿರುವದು ಕೂಡ ಸ್ಥಳೀಯ ಕೃಷಿಕರಿಗೆ ನಷ್ಟ ಉಂಟುಮಾಡಿದೆ. ತಾ. 11ರಂದು ನಡೆಯುವ ಪ್ರತಿಭಟನೆಗೆ ಪಕ್ಷಾತೀತವಾಗಿ ಬೆಂಬಲ ನೀಡುವ ಮೂಲಕ ಕೃಷಿಕರ ಪರವಾಗಿ ಧ್ವನಿ ಎತ್ತಲಿದ್ದೇವೆ ಎಂದರು.

ಜೆಡಿಎಸ್ ಮುಖಂಡ ಕೋಳೇರ ದಯಾ ಚೆಂಗಪ್ಪ ಮಾತನಾಡಿ, ಸಮಿತಿ ಆವರಣ ದಲ್ಲಾಳಿಗಳ ಕೇಂದ್ರವಾಗಿ ಮಾರ್ಪಟ್ಟಿದೆ. ಕೃಷಿಕರಿಗೆ ಮಳಿಗೆಗಳ ವಿತರಣೆಯಲ್ಲೂ ಅವಕಾಶ ನೀಡುತ್ತಿಲ್ಲ. ಮೆಣಸು ಆವರಣಕ್ಕೆ ಬಂದಿರುವದು ತಿಳಿಸಿದ್ದರೂ ಸುಮ್ಮನೆ ಇರುವ ಆಡಳಿತ ಮಂಡಳಿ ಹಾಗೂ ಆಡಳಿತ ವರ್ಗದ ನಡೆ ಸಂಶಯಕ್ಕೆ ಎಡೆಮಾಡಿಕೊಟ್ಟಿದೆ ಎಂದು ಆರೋಪಿಸಿದರು.

ಸಂಬಾರ ಮಂಡಳಿಯಲ್ಲಿ ಕೂಡ ಕೊಡಗಿಗೆ ನಾಮನಿರ್ದೇಶನದ ಸ್ಥಾನವಿಲ್ಲ. ಇದರ ವಿರುದ್ಧ ಜನಪ್ರತಿನಿಧಿಗಳು ಹೋರಾಟ ನಡೆಸುತ್ತಿಲ್ಲ. ಇಷ್ಟೊಂದು ಅನ್ಯಾಯ ಕೃಷಿಕರಿಗೆ ಅಗುತ್ತಿದ್ದರೂ ಶಾಸಕ, ಸಂಸದರು ಸುಮ್ಮನೆ ಇರುವದು ಸಂಶಯಕ್ಕೆ ಕಾರಣವಾಗಿದೆ ಎಂದು ಆರೋಪಿಸಿದರು.

ಜೆಡಿಎಸ್ ಹಿರಿಯ ಮುಖಂಡರು ಮನೆಯಪಂಡ ಬೆಳ್ಯಪ್ಪ ಮಾತನಾಡಿ, ಸಮಿತಿಯ ನಡೆ ವಿರುದ್ಧ ಪಕ್ಷ ನಿರಂತರ ಹೋರಾಟ ನಡೆಸಲಿದೆ. ಅನ್ಯಾಯದ ವಿರುದ್ಧ ಸೋಮವಾರ ನಡೆಯುವ ಪ್ರತಿಭಟನೆಯಲ್ಲಿ ಪಾಲ್ಗೊಳ್ಳಲಿದೆ ಎಂದರು.

ಗೋಷ್ಠಿಯಲ್ಲಿ ಪಕ್ಷದ ಮುಖಂಡರುಗಳಾದ ಅಜೀಜ್, ಮುತ್ತ ಇದ್ದರು.