ಗೋಣಿಕೊಪ್ಪಲು, ಸೆ. 9 : ಹೊರದೇಶದಿಂದ ಕಡಿಮೆ ದರಕ್ಕೆ ವಿಯೆಟ್ನಾಂ ಕಾಳುಮೆಣಸನ್ನು ಖರೀದಿಸಿ, ನಂತರ ವಿದೇಶಕ್ಕೆ ರಪ್ತು ಮಾಡುವ ಸಂದರ್ಭ ವಿಯೆಟ್ನಾಂ ಕಾಳುಮೆಣಸೆಂದು ತೋರಿಸಿಲ್ಲ. ಈ ಬಗ್ಗೆ ಸಮಗ್ರ ತನಿಖೆಯಾಗಬೇಕು ಎಂದು ಬಿ.ಶೆಟ್ಟಿಗೇರಿಯ ಹಲವು ಬೆಳೆಗಾರರು ಒತ್ತಾಯಿಸಿದ್ದಾರೆ.

ಈ ಬಗ್ಗೆ ಸಮಗ್ರ ತನಿಖೆಗೆ ರಾಜ್ಯ ಕೃಷಿ ಮಾರಾಟ ಮಂಡಳಿಗೂ ದೂರನ್ನು ನೀಡಲಾಗುವದು. ತಾ.11 ರಂದು ಎಪಿಎಂಸಿ ವಿರುದ್ಧ ನಡೆಯುವ ಪ್ರತಿಭಟನೆಗೂ ಬಿ.ಶೆಟ್ಟಿಗೇರಿಯಿಂದ ರಾಜಕೀಯ ರಹಿತವಾಗಿ ಬೆಂಬಲ ನೀಡಲಾಗುವದು ಎಂದು ಕೊಲ್ಲೀರ ಬೋಪಣ್ಣ, ಕಡೇಮಾಡ ಅಶೋಕ್ ಚಿಟ್ಟಿಯಪ್ಪ,ಉಮೇಶ್‍ಕೇಚಮಯ್ಯ, ತೀತಿಮಾಡ ಸದನ್, ಚೇರಂಡ ಮೋಹನ್ ಮುಂತಾದವರು ತಿಳಿಸಿದ್ದಾರೆ.

ಬಿ.ಶೆಟ್ಟಿಗೇರಿಯ ಕಡೇಮಾಡ ಜೋಯಪ್ಪ, ಕಡೇಮಾಡ ರಿಜು, ಅಪ್ಪಂಡೇರಂಡ ವಿಶ್ವನಾಥ್, ಸತೀಶ್, ರಾಯ್, ಚೇಂದಿರ ಪ್ರಕಾಶ್, ಚೇರಂಡ ಮೋಟಯ್ಯ, ಟಿ.ಎಸ್. ಜೋಯಪ್ಪ, ಕೆ.ಎಂ.ಸುಬ್ರಮಣಿ, ಚಂದೂರ ರೋಹಿತ್, ಜಗನ್ ಮತ್ತಿತರರು ಎಪಿಎಂಸಿ ವಿರುದ್ಧ ಹೋರಾಟಕ್ಕೆ ತಮ್ಮ ಬೆಂಬಲ ವ್ಯಕ್ತಪಡಿಸಿದ್ದು, ಖಂಡನೆ ವ್ಯಕ್ತಪಡಿಸಿದ್ದಾರೆ.

ರಾಜೀನಾಮೆಗೆ ಆಗ್ರಹ

ವೀರಾಜಪೇಟೆ : ಗೋಣಿಕೊಪ್ಪಲು ಎ.ಪಿ.ಎಂ.ಸಿ. ಆಡಳಿತ ಮಂಡಳಿ ನಿಯಮ ಬಾಹಿರವಾಗಿ ವಿಯೆಟ್ನಾಂ ದೇಶದಿಂದ ಆಮದಾದ ಕಳಪೆ ಗುಣ ಮಟ್ಟದ ಕಾಳು ಮೆಣಸನ್ನು ಬೇನಾಮಿ ಹೆಸರಿನಲ್ಲಿ ತರಿಸಿ ವ್ಯವಹಾರ ಮಾಡುತ್ತಿರುವದರಿಂದ ಇದು ಕೊಡಗಿನ ಬೆಳೆಗಾರರಿಗೆ, ಕಾರ್ಮಿಕ ವರ್ಗಕ್ಕೆ ವಂಚನೆಯಾಗಿದೆ. ಸಂಘದ ಎಲ್ಲ ಸದಸ್ಯರುಗಳು ನೈತಿಕ ಹೊಣೆ ಹೊತ್ತು ತಕ್ಷಣ ರಾಜೀನಾಮೆ ನೀಡಬೇಕು ಎಂದು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಆರ್.ಕೆ. ಅಬ್ದುಲ್ ಸಲಾಂ ಹೇಳಿದರು.

ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅಬ್ದುಲ್ ಸಲಾಂ ಅವರು ಬೆಂಗಳೂರಿನ ಸಂಸ್ಥೆಯೊಂದು ಗೋಣಿಕೊಪ್ಪ ಕೃಷಿ ಉತ್ಪನ್ನ ಮಾರುಕಟ್ಟೆಯ ಸಭಾಂಗಣದಲ್ಲಿ ಬೇನಾಮಿ ಹೆಸರಿನಲ್ಲಿರುವ ಕಾವೇರಿ ಎಂಟರ್ ಪ್ರೈಸಸ್ ಎಂಬ ಮಳಿಗೆಯಲ್ಲಿನ ಉದ್ಯಮಿ ಮೂಲಕ ವ್ಯವಹಾರ ನಡೆಸಿದೆ. ಸುಮಾರು 45ಮೆಟ್ರೀಕ್ ಟನ್ ಕಾಳು ಮೆಣಸು ಖರೀದಿಸಿರುವ ಬೇನಾಮಿ ಸಂಸ್ಥೆÀಯ ಈ ಕಳಪೆ ಗುಣಮಟ್ಟದ ಈ ಕಾಳು ಮೆಣಸಿನ ಬೆಲೆ ಕೆ.ಜಿ.ಗೆ ರೂ 223ರಿಂದ 225 ಎಂದು ದೃಢೀಕರಿಸಲಾಗಿದ್ದು ಇದೇ ಕಾಳು ಮೆಣಸನ್ನು ಕೇರಳದ ವಯನಾಡಿನ ಕಲ್ಪೆಟ್ಟಾ ಐಡಿಯಲ್ ಟ್ರೇಡಿಂಗ್ ಕಂಪೆನಿಗೆ ಕೆ.ಜಿ.ಗೆ ರೂ 450ರಂತೆ ತಾ:8-08-17ರಂದು 200 ಕ್ವಿಂಟಾಲ್‍ನಷ್ಟು ಮಾರಾಟ ಮಾಡಿದ್ದಾರೆ. ಇದೇ ರೀತಿಯಲ್ಲಿ ಸುಂಟಿಕೊಪ್ಪದ ಎ.ಪಿ.ಸಿ.ಎಂ.ಎಸ್. ಕಟ್ಟಡದಲ್ಲಿರುವ ಸ್ಪೈಸಸ್ ಆಫ್ ಕೂರ್ಗ್ ಸಂಸ್ಥೆಗೆ 100ಕ್ವಿಂಟಾಲ್‍ನಷ್ಟು ಕಾಳು ಮೆಣಸು ಮಾರಾಟ ಮಾಡಿದ್ದಾರೆ. ಇದರಿಂದ ಕೊಡಗಿನ ರೈತ ವರ್ಗಕ್ಕೆ ತೊಂದರೆಯಾಗಿದೆ. ಆಮದು ಮಾಡಿದ ಕಾಳು ಮೆಣಸಿಗೆ ಕೊಡಗಿನ ಗುಣ ಮಟ್ಟದ ಕಾಳು ಮೆಣಸನ್ನು ಮಿಶ್ರ ಮಾಡಿ ಹೊರಗಿನ ಖಾಸಗಿಯವರಿಗೆ ಮಾರಾಟ ಮಾಡಲಾಗುತ್ತಿದೆ. ರಾಜಸ್ತಾನದ ಉದ್ಯಮಿಗಳೊಂದಿಗೆ ಶಾಮಿಲಾಗಿರುವ ಎ.ಪಿ.ಎಂ.ಸಿ, ಬೇನಾಮಿ ಉದ್ಯಮಿಗಳಿಗೆ ಅನಧಿಕೃತವಾಗಿ ಮೂರು ಮಳಿಗೆಗಳು, ಕಾಳು ಮೆಣಸಿನ ಗ್ರೇಡಿಂಗ್‍ಗಾಗಿ ವಿಶಾಲವಾದ ಸಭಾಂಗಣವನ್ನು ನೀಡಿದೆ, ಉದ್ಯಮಿಯಿಂದ ರೂ. 1,51,637 ನ್ನು ಸೆಸ್ ಆಗಿ ರಶೀತಿ ಮೂಲಕ ಪಡೆದಿದೆ ಎಂದು ದೂರಿದರು.

ಬ್ಲಾಕ್ ಕಾಂಗ್ರೆಸ್‍ನ ಪ್ರಧಾನ ಕಾರ್ಯದರ್ಶಿ ಜಾನ್‍ಸನ್ ಮಾತನಾಡಿ ತಾಲೂಕಿನ ರೈತ ವರ್ಗ, ಬೆಳೆಗಾರರ ಹಿತ ಕಾಪಾಡಬೇಕಾದ ಸಂಸ್ಥೆ, ಆಮದು ಮಾಡಿದ ಕಾಳು ಮೆಣಸನ್ನು ಮಿಶ್ರ ಮಾಡಿ ಮಾರಾಟ ಮಾಡುವದು ಹೇಯ ಕೃತ್ಯವಾಗಿದೆ. ಈ ಪ್ರಕರಣವನ್ನು ಸಂಸ್ಥೆಯ ನಾಮ ನಿರ್ದೇಶನ ಸದಸ್ಯರುಗಳಾದ ಮಾಳೇಟಿರ ಕೆ. ಬೋಪಣ್ಣ, ಎ. ನರೇನ್ ಕಾರ್ಯಪ್ಪ ಹಾಗೂ ಕೆ. ಕುಸುಮಾ ಇವರುಗಳು ಬೇಧಿಸಿ ಪಕ್ಷಕ್ಕೆ ಸಾಕ್ಷ್ಯಧಾರ ಸಮೇತ ದೂರು ನೀಡಿದ್ದಾರೆ.

ಚೇರಿಗೆ ಮುತ್ತಿಗೆ : ಗೋಣಿಕೊಪ್ಪಲಿನ ಎ.ಪಿ.ಎಂ.ಸಿಯ ಕಾಳು ಮೆಣಸು ಅವ್ಯವಹಾರದ ತನಿಖೆಗೆ ಆಗ್ರಹಿಸಿ ತಾ. 11 ರಂದು ಬೆಳಿಗ್ಗೆ 11 ಗಂಟೆಗೆ ಗೋಣಿಕೊಪ್ಪಲಿನ ಉಮಾ ಮಹೇಶ್ವರಿ ದೇವಸ್ಥಾನದಿಂದ ಪ್ರತಿಭಟನಾ ಮೆರವಣಿಗೆ ಹೊರಟು ಸಂಘದ ಕಚೇರಿಗೆ ಮುತ್ತಿಗೆ ಹಾಕಲಾಗುವದು ಎಂದು ತಿಳಿಸಿದ ಜಾನ್‍ಸನ್ ಅವರು ವ್ಯವಹಾರಕ್ಕೆ ಸಂಬಂಧಿಸಿದಂತೆ ಎಲ್ಲ ದಾಖಲಾತಿಗಳನ್ನು ಪತ್ರಕರ್ತರಿಗೆ ತೋರಿಸಿದರು. ಗೋಷ್ಠಿಯಲ್ಲಿ ಬ್ಲಾಕ್ ಉಪಾಧ್ಯಕ್ಷ ಸಿ.ಬಿ. ರವಿ ಉಪಸ್ಥಿತರಿದ್ದರು.

ಕೊಡವ ಸಮಾಜದ ಬೆಂಬಲ

ವೀರಾಜಪೇಟೆ: ಗೋಣಿಕೊಪ್ಪದ ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ಕಾಳು ಮೆಣಸಿನ ಅವ್ಯವಹಾರಕ್ಕೆ ಸಂಬಂಧಿಸಿದಂತೆ ಪೊನ್ನಂಪೇಟೆ ಕೊಡವ ಸಮಾಜ ತಾ:11ರಂದು ಬೆಳಿಗ್ಗೆ 10-30ಗಂಟೆಗೆ ಹಮ್ಮಿಕೊಂಡಿರುವ ಪ್ರತಿಭಟನಾ ರ್ಯಾಲಿಗೆ ವೀರಾಜಪೇಟೆ ಕೊಡವ ಸಮಾಜ ಪೂರ್ಣ ಬೆಂಬಲ ನೀಡುವದಾಗಿ ಅಧ್ಯಕ್ಷ ವಾಂಚಿರ ಟಿ. ನಾಣಯ್ಯ ತಿಳಿಸಿದ್ದಾರೆ.