ಗೋಣಿಕೊಪ್ಪಲು,ಸೆ.8: ಇಂದು ಬೆಳಿಗ್ಗೆ 7 ಗಂಟೆ ಸುಮಾರಿಗೆ ಕೇರಳಕ್ಕೆ ಅಕ್ಕಿ ಸಾಗಾಟ ಮಾಡುತ್ತಿದ್ದ ಎರಡು ಲಾರಿಗಳ ನಡುವೆ ಡಿಕ್ಕಿ ಸಂಭವಿಸಿದ ಪರಿಣಾಮ ವೀರಾಜಪೇಟೆ-ಕಣ್ಣಾನೂರು ರಸ್ತೆ ಸಂಚಾರ 6 ಗಂಟೆಗಳ ಕಾಲ ಸ್ಥಗಿತಗೊಂಡು ಪ್ರಯಾಣಿಕರು ಬವಣೆ ಅನುಭವಿಸಿದರು.

ಪಶ್ಚಿಮ ಬಂಗಾಳದ ಲಾರಿ (ಡಬ್ಲ್ಯು. ಬಿ. 41, ಹೆಚ್.0058) ಹಾಗೂ ಆಂಧ್ರ ಪ್ರದೇಶಕ್ಕೆ ಸೇರಿದ ಲಾರಿ (ಎ.ಪಿ. 26 ಟಿ.ಇ.1499) ನಡುವೆ ಪೆರುಂಬಾಡಿ-ಮಾಕುಟ್ಟ ರಸ್ತೆ ಮಾರ್ಗವಾಗಿ ಬೆಳಿಗ್ಗೆ ಡಿಕ್ಕಿ ಸಂಭವಿಸಿದೆ. ಅಲ್ಲಿನ ಹನುಮಾನ್ ದೇವಸ್ಥಾನಕ್ಕೂ ಎರಡು ಕಿ.ಮೀ. ಮೊದಲೇ ಸಿಗುವ ತಿರುವಿನಲ್ಲಿ ಮುಂದೆ ಸಾಗುತ್ತಿದ್ದ ಪಶ್ಚಿಮ ಬಂಗಾಳದ ಲಾರಿಗೆ ಆಂಧ್ರ ಪ್ರದೇಶದ ಲಾರಿ ಬ್ರೇಕ್ ವೈಫಲ್ಯಗೊಂಡು ಹಿಂಭಾಗಕ್ಕೆ ಡಿಕ್ಕಿ ಹೊಡೆದ ರಭಸಕ್ಕೆ ಚಾಲಕನ ನಿಯಂತ್ರಣ ತಪ್ಪಿ ಎಡಭಾಗದ ಚರಂಡಿಗೆ ಲಾರಿ ನುಗ್ಗಿದರೆ, ಅಪಘಾತದ ರಭಸಕ್ಕೆ ಆಂಧ್ರ ಲಾರಿ ಮುಂಭಾಗ ಜಖಂ ಗೊಂಡಿದೆ. ಪರಿಣಾಮ ಅಪಘಾತ ನಡೆದ ಸ್ಥಳದಲ್ಲಿ ವಾಹನ ಓಡಾಟಕ್ಕೆ ಅಡ್ಡಿ ಉಂಟಾಯಿತು.ಅಪಘಾತದಲ್ಲಿ ಯಾರಿಗೂ ಜೀವಹಾನಿ ಸಂಭವಿಸಿಲ್ಲ.

ಸುಮಾರು 20 ಕ್ಕೂ ಅಧಿಕ ರಸ್ತೆ ಸಾರಿಗೆ ಬಸ್‍ಗಳು, ನೂರಾರು ವಾಹನಗಳು ರಸ್ತೆ ಉದ್ದಕ್ಕೂ ಸುಮಾರು 6 ಗಂಟೆ ಸಾಲುಗಟ್ಟಿ ನಿಲ್ಲಬೇಕಾಯಿತು. ಅತ್ತ ಪೆರುಂಬಾಡಿ ಚೆಕ್‍ಪೆÇೀಸ್ಟ್‍ನಲ್ಲಿ ರಸ್ತೆ ಸಂಚಾರ ಸ್ಥಗಿತ ಹಿನ್ನೆಲೆ ಸಾರಿಗೆ ಬಸ್‍ಗಳು, ಇನ್ನಿತರೆ ವಾಹನಗಳನ್ನು ಪೆÇಲೀಸರು ತಡೆದು ನಿಲ್ಲಿಸಿದ್ದರು.

ಮಧ್ಯಾಹ್ನ 1 ಗಂಟೆ ಸುಮಾರಿಗೆ ರಸ್ತೆ ಮಧ್ಯೆ ಬ್ರೇಕ್ ವಿಫಲಗೊಂಡು ನಿಂತಿದ್ದ ಲಾರಿಯನ್ನು ವೀರಾಜಪೇಟೆಯ ಟೋಯಿಂಗ್ ಜೀಪ್ ಮೂಲಕ ಎಳೆದು ಅಂತರಾಷ್ಟ್ರೀಯ ಹೆದ್ದಾರಿಯನ್ನು ಸುಗಮಗೊಳಿಸಲಾಯಿತು.

ವೀರಾಜಪೇಟೆ ಗ್ರಾಮಾಂತರ ವಿಭಾಗದ ಪೆÇಲೀಸರು ಈ ಹಂತದಲ್ಲಿ ಜನದಟ್ಟಣೆಯನ್ನು ನಿಯಂತ್ರಿಸಲು ಹರಸಾಹಸ ಪಡಬೇಕಾಯಿತು. ಸುಮಾರು 26 ಟನ್ ಸಾಮಥ್ರ್ಯದ ಲಾರಿಗಳು ಅಪಘಾತಕ್ಕೀಡಾದ ಹಿನ್ನೆಲೆ ತುರ್ತು ಕೆಲಸಕ್ಕೆ ತೆರಳಬೇಕಾಗಿದ್ದ ಹಲವು ಪ್ರಯಾಣಿಕರು ಚಡಪಡಿಸಿದರೆ, ಮತ್ತೆ ಹಲವರು ಕಾಲ್ನಡಿಗೆಯಲ್ಲಿಯೇ ಮಾಕುಟ್ಟದತ್ತ ತೆರಳುತ್ತಿದ್ದುದು ಕಂಡು ಬಂತು. ಬ್ರೇಕ್ ವೈಫಲ್ಯಗೊಂಡ ಲಾರಿ ಮುಂಭಾಗದಿಂದ ಬರುತ್ತಿದ್ದ ವಾಹನಕ್ಕೇನಾದರೂ ಮುಖಾ ಮುಖಿ ಡಿಕ್ಕಿ ಆದಲ್ಲಿ ಭಾರೀ ದುರ್ಘಟನೆ ನಡೆಯುವ ಸಾಧ್ಯತೆ ಇದ್ದು, ಸ್ವಲ್ಪದರಲ್ಲಿಯೇ ವಿಪತ್ತು ತಪ್ಪಿದಂತಾಗಿದೆ.

ವೀರಾಜಪೇಟೆ ವರದಿ

ವೀರಾಜಪೇಟೆ-ಕಣ್ಣನೂರು ಅಂತರರಾಜ್ಯ ಹೆದ್ದಾರಿಯ ಮಾಕುಟ್ಟ ತಿರುವು ರಸ್ತೆಯಲ್ಲಿ ಕಳೆದ 24ಗಂಟೆಗಳ ಅವಧಿಯಲ್ಲಿ ಆರು ಕಡೆಗಳಲ್ಲಿ ವಾಹನ ಅಪಘಾತಗಳು ಸಂಭವಿಸಿವೆ. 25ಕ್ಕೂ ಹೆಚ್ಚು ಮಂದಿ ಗಾಯಾಳುಗಳಾಗಿದ್ದಾರೆ. ಇವರೆಲ್ಲರೂ ಕೇರಳ ರಾಜ್ಯಕ್ಕೆ ಸೇರಿದವರಾಗಿದ್ದು. ಕೇರಳದ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಎಲ್ಲಾ ಅಪಘಾತಗಳು ಪೆರಂಬಾಡಿ ಹಾಗೂ ಮಾಕುಟ್ಟ ತಪಸಣಾ ಕೇಂದ್ರದ ಮಧ್ಯೆ ನಡೆದಿದೆ.

ಗುರುವಾರ ಬೆಳಿಗ್ಗೆ 25 ಮಂದಿ ಪ್ರಯಾಣಿಕರೊಂದಿಗೆ ಕೊಡಗು ಪ್ರವಾಸ ಮುಗಿಸಿ ಹಿಂತಿರುಗುವಾಗ ಕೇರಳದ ಟೆಂಪೋ ಟ್ರಾವೆಲರ್ ವಾಹನವೊಂದು ಹತೋಟಿ ತಪ್ಪಿ 15ಅಡಿ ಆಳದ ಪ್ರಪಾತಕ್ಕೆ ಮಗುಚಿದೆ. ಈ ಅಪಘಾತದಲ್ಲಿ 11ಮಂದಿ ಗಾಯಾಳುಗಳಾಗಿದ್ದು ಕೇರಳದ ಇರಿಟ್ಟಿ ಆಸ್ಪತ್ರೆಯಲ್ಲಿ ದಾಖಲಿಸಲ್ಪಟ್ಟಿದ್ದಾರೆ. ಮಾಕುಟ್ಟ ರಸ್ತೆಯ ಹನುಮಾನ್ ದೇವಾಲಯದ ಮೆದಿಯಡಿಪರ ಎಂಬಲ್ಲಿ ಅದೇ ದಿನ ಮೂರು ಅಪಘಾತಗಳು ಸಂಭವಿಸಿವೆ. ಈ ಮೂರು ಅಪಘಾತಗಳು ಕಾರುಗಳ ಪರಸ್ಪರ ಡಿಕ್ಕಿಯಿಂದಾಗಿ ಸಂಭವಿಸಿದೆ. ಅಪಘಾತದಲ್ಲಿ ಒಟ್ಟು 10ಮಂದಿ ಗಾಯಗೊಂಡಿದ್ದಾರೆ.

ಅದೇ ದಿನ ಮೈಸೂರಿನಿಂದ ತರಕಾರಿ ಹೊತ್ತು ಕಣ್ಣನೂರಿಗೆ ಬರುತ್ತಿದ್ದ ವ್ಯಾನ್ ಮಗುಚಿ ಅಪಘಾತ ಸಂಭವಿಸಿದೆ. ವ್ಯಾನ್ ಚಾಲಕ ಗಾಯಾಳುವಾಗಿದ್ದಾನೆ. ವ್ಯಾನಿನಲ್ಲಿದ್ದ ಇತರ ಈರ್ವರು ಗಾಯಗಳಾಗದೆ ಪಾರಾಗಿದ್ದಾರೆ. ಪೆರಂಬಾಡಿ ಕೆರೆಗೆ ಸಮೀಪ ಟೆಂಪೋ ಟ್ರಾವೆಲರ್ ಸ್ವಿಫ್ಟ್ ಕಾರಿಗೆ ಡಿಕ್ಕಿಯಾಗಿ ಕಾರು ನಜ್ಜು-ಗುಜ್ಜಾಗಿದೆ. ಇಂದು ಬೆಳಿಗ್ಗೆ 7 ಗಂಟೆ ಹೊತ್ತಿಗೆ ತೆಲಂಗಾಣ ರಾಜ್ಯಕ್ಕೆ ಸೇರಿದ ಎರಡು ಸರಕು ಲಾರಿಗಳ ಮಧ್ಯೆ ಉಂಟಾದ ಡಿಕ್ಕಿಯ ಪರಿಣಾಮವಾಗಿ ವೀರಾಜಪೇಟೆ-ಕೇರಳ ರಾಜ್ಯದ ವಾಹನ ಸಂಚಾರ 4 ಗಂಟೆಗಳು ಸಂಪೂರ್ಣವಾಗಿ ಸ್ಥಗಿತಗೊಂಡಿತ್ತು . ಪರಿಣಾಮವಾಗಿ ನೂರಾರು ವಾಹನಗಳು ಎರಡು ಕಡೆಗಳಲ್ಲಿ ಗಂಟೆ ಗಟ್ಟಲೆ ನಿಲ್ಲಿಸಬೇಕಾಯಿತು. ಓಣಂ-ಬಕ್ರೀದ್ ರಜೆ ಕಾರಣ ಈ ರಸ್ತೆಯಲ್ಲಿ ವಾಹನ ಸಂಚಾರ ಹೆಚ್ಚಿರುವದು ಅಪಘಾತಕ್ಕೆ ಕಾರಣ ಎನ್ನಲಾಗಿದೆ.

ವರದಿ: ಟಿ.ಎಲ್.ಎಸ್., ರೆಹಮಾನ್