ಕುಶಾಲನಗರ, ಸೆ. 8: ಕುಶಾಲನಗರದ ಕಾರು ಮಾಲೀಕರು ಮತ್ತು ಚಾಲಕರುಗಳ ವಿವಿಧೋದ್ದೇಶ ಸಹಕಾರ ಸಂಘ 2016-17 ನೇ ಸಾಲಿನಲ್ಲಿ ಒಟ್ಟು ರೂ. 10,38,76,669.45 ವಹಿವಾಟು ನಡೆಸಿ ರೂ. 5,56,912 ನಿವ್ವಳ ಲಾಭಗಳಿಸಿದೆ ಎಂದು ಸಂಘದ ಅಧ್ಯಕ್ಷ ಹೆಚ್.ಎನ್. ರಾಮಚಂದ್ರ ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 2008 ರಲ್ಲಿ ಸ್ಥಾಪನೆಗೊಂಡ ಸಂಘವು ಲಾಭದಲ್ಲಿ ಮುನ್ನಡೆಯುತ್ತಿದೆ. ಸಂಘದಲ್ಲಿ ಒಟ್ಟು 287 ಎ ಮತ್ತು 589 ಸಿ ತರಗತಿ ಸದಸ್ಯರುಗಳಿದ್ದು ಒಟ್ಟು ರೂ. 8,31,000 ಪಾಲು ಬಂಡವಾಳ ಸಂಗ್ರಹವಾಗಿದೆ. ಸದಸ್ಯರುಗಳಿಗೆ ಅನುಕೂಲವಾಗುವ ರೀತಿಯಲ್ಲಿ ಜಾಮೀನು ಸಾಲ, ಪಿಗ್ಮಿ ಸಾಮಾನ್ಯ ಸಾಲ, ಆಭರಣ ಸಾಲ ಹಾಗೂ ತುರ್ತು ವಾಹನ ಸಾಲವನ್ನು ವಿತರಿಸಲಾಗುತ್ತಿದೆ ಎಂದರು.
ವ್ಯಾಪಾರ ಅಭಿವೃದ್ಧಿ ದೃಷ್ಟಿಯಿಂದ ಮುಂದಿನ ದಿನಗಳಲ್ಲಿ ಹಲವು ಯೋಜನೆಗಳನ್ನು ಕೈಗೊಳ್ಳಲಾಗುವದು. ಸದಸ್ಯರು ಮತ್ತು ಅವರ ಕುಟುಂಬದವರನ್ನು ಸರ್ಕಾರಿ ಯಶಸ್ವಿನಿ ವಿಮೆ ಸೌಲಭ್ಯ ಕಲ್ಪಿಸಲಾಗಿದೆ. ಎಸ್‍ಎಸ್‍ಎಲ್‍ಸಿ ಮತ್ತು ಪಿಯುಸಿಯಲ್ಲಿ ಅತಿ ಹೆಚ್ಚು ಅಂಕಗಳಿಸಿದ ಸದಸ್ಯರುಗಳ ಮಕ್ಕಳಿಗೆ ಈ ಸಾಲಿನಿಂದ ಪ್ರೋತ್ಸಾಹ ಧನವನ್ನು ವಿತರಿಸಲು ಸಂಘದಿಂದ ತೀರ್ಮಾನಿಸಲಾಗಿದೆ ಎಂದೂ ತಿಳಿಸಿದರು.
ಪಟ್ಟಣದ ಬಾಪೂಜಿ ಬಡಾವಣೆ ಯಲ್ಲಿ ರೂ. 18.75 ಲಕ್ಷಗಳಿಗೆ ಕಟ್ಟಡವೊಂದನ್ನು ಖರೀದಿಸಿ ಸಂಘದ ನೂತನ ಕಚೇರಿ ನಿರ್ಮಿಸಲಾಗಿದೆ. ತಾ. 10 ರಂದು ನೂತನ ಕಚೇರಿ ಉದ್ಘಾಟನೆ ಹಾಗೂ ಸಂಘದ ಮಹಾಸಭೆ ನಡೆಯಲಿದೆ ಎಂದು ಅವರು ಮಾಹಿತಿ ನೀಡಿದರು.
ಗೋಷ್ಠಿಯಲ್ಲಿ ಸಂಘದ ಉಪಾಧ್ಯಕ್ಷ ಕೆ.ಎನ್. ಅಶೋಕ್, ನಿರ್ದೇಶಕರಾದ ಎಂ.ಎನ್. ಕರುಣ ಕುಮಾರ್, ಬಿ.ಸಿ. ಮಲ್ಲಿಕಾರ್ಜುನ, ಬಿ.ಆರ್. ರುಕ್ಮಿಣಿ, ಬಿ. ಸಾವಿತ್ರಿ, ಕಾರ್ಯದರ್ಶಿ ರೋಹಿತ್ ಉಪಸ್ಥಿತರಿದ್ದರು.