ನಾಪೆÇೀಕ್ಲು, ಸೆ. 8: ಬದುಕಿನ ಭಾಷೆ ಇಂಗ್ಲೀಷ್ ಆಗಿರುವದರಿಂದ ಪೋಷಕರು ಒತ್ತಡಕ್ಕೆ ಮಣಿದು ಖಾಸಗಿ ಶಾಲೆಗಳತ್ತ ಒಲವು ಹೊಂದಿದ್ದಾರೆ ಎಂದು ಮಡಿಕೇರಿ ಶಾಸಕ ಅಪ್ಪಚ್ಚು ರಂಜನ್ ಅವರು ಹೇಳಿದರು.

ಹೊದ್ದೂರು ಗ್ರಾ. ಪಂ.ಯ ಕುಂಬಳದಾಳುವಿನಲ್ಲಿ ಜಿಲ್ಲಾ ಮತ್ತು ತಾಲೂಕು ಪಂಚಾಯಿತಿಯಿಂದ ಬಿಡುಗಡೆ ಯಾದ 7.97 ಲಕ್ಷ ರೂ. ವೆಚ್ಚದಲ್ಲಿ ನೂತನವಾಗಿ ನಿರ್ಮಿಸಿದ ಅಂಗನವಾಡಿ ಕೇಂದ್ರವನ್ನು ಉದ್ಘಾಟಿಸಿದ ಬಳಿಕ ಜರುಗಿದ ಸಭೆಯಲ್ಲಿ ಮಾತನಾಡಿದ ಅವರು ಕನ್ನಡದ ಜೊತೆಗೆ ಇದೀಗ ಇಂಗ್ಲೀಷ್ ಶಿಕ್ಷಣ ಕಲಿಕೆ ಅನಿವಾರ್ಯವಾಗಿದೆ. ಅದರೆ ಕೆಲವು ಕನ್ನಡ ಹೋರಾಟ ಗಾರರೆನ್ನಿಸಿಕೊಂಡವರು ತಮ್ಮ ಮಕ್ಕಳನ್ನು ಆಂಗ್ಲ ಮಾಧ್ಯಮದಲ್ಲಿ ವ್ಯಾಸಂಗ ಮಾಡಿಸುವದರ ಮೂಲಕ ಕಂಡವರ ಮಕ್ಕಳನ್ನು ಬಾವಿಗೆ ತಳ್ಳಿ ಆಳ ನೋಡುವದು ಸರಿಯಲ್ಲ ಎಂದರು. ಇದೀಗ ಅಂತರಾಷ್ಟ್ರೀಯ ಮಟ್ಟದಲ್ಲಿ ತಂತ್ರಜ್ಞಾನದ ಮೂಲಕ ನಾವು ಇರುವಲ್ಲಿಂದಲೇ ಉದ್ಯೋಗ ನಿರ್ವಹಿಸುವ ಅವಕಾಶಗಳಿರುವದರಿಂದ ಇವುಗಳಿಗೆ ಆಂಗ್ಲಭಾಷಾ ಜ್ಞಾನ ಅನಿವಾರ್ಯವಾಗಿದೆ. ಈ ನಿಟ್ಟಿನಲ್ಲಿ ಸರ್ಕಾರಿ ಶಾಲೆಯಲ್ಲಿಯೂ ಸ್ಪೋಕನ್ ಇಂಗ್ಲೀಷ್ ಜಾರಿಯಲ್ಲಿದೆ ಎಂದರು.

ರೈತರು ಕೃಷಿಯಲ್ಲಿ ಹೊಸ ಆವಿಷ್ಕಾರಗಳೊಂದಿಗೆ ತಮ್ಮ ಜಮೀನಿನಲ್ಲಿ ಮಿಶ್ರ ಕೃಷಿ ಮಾಡುವದರ ಮೂಲಕ ಆರ್ಥಿಕವಾಗಿ ಸದೃಢರಾಗಲು ಸಾಧ್ಯ. ಈ ನಿಟ್ಟಿನಲ್ಲಿ ಸರ್ಕಾರದಿಂದ ದೊರಕುವ ಸೌಲಭ್ಯಗಳನ್ನು ಸದುಪಯೋಗಪಡಿಸಿಕೊಳ್ಳುವಂತಾಗಬೇಕೆಂದು ಕರೆ ನೀಡಿದ ಅವರು, ಅಂಗನವಾಡಿ ಮೂಲಕ ಮಕ್ಕಳ ಮತ್ತು ಮಹಿಳೆಯರ ಸರ್ವತೋಮುಖ ಅಭಿವೃದ್ಧಿಗೆ ವಿವಿಧ ಸೌಲಭ್ಯಗಳಿದ್ದು, ಸಮಗ್ರ ಮಾಹಿತಿ ಪಡೆದು ಅಭಿವೃದ್ಧಿ ಹೊಂದ ಬೇಕೆಂದರು.

ಜಿಲ್ಲಾ ಪಂಚಾಯ್ತಿ ಸದಸ್ಯ ಪಾಡಿಯಮ್ಮಂಡ ಮುರಳಿ ಕರುಂಬಮ್ಮಯ್ಯ ಮಾತನಾಡಿ ಅಭಿವೃದ್ಧಿ ಕಾರ್ಯಗಳಿಗೆ ಜನಪ್ರತಿನಿಧಿಗಳು ಮತ್ತು ಸಾರ್ವಜನಿಕರ ಜವಾಬ್ದಾರಿಯಿದ್ದು, ಈ ನಿಟ್ಟಿನಲ್ಲಿ ಸರ್ಕಾರದ ಹಣ ದುರುಪಯೋಗವಾಗದಂತೆ ಅಧಿಕಾರಿಗಳು ಮುತುವರ್ಜಿ ವಹಿಸಿ ಕ್ರಮ ಕೈಗೊಳ್ಳುವಂತಾಗಬೇಕೆಂದರು.

ತಾಲೂಕು ಪಂಚಾಯ್ತಿ ಅಧ್ಯಕ್ಷೆ ತೆಕ್ಕಡೆ ಶೋಭಾ ಮೋಹನ್ ಸರ್ಕಾರದಿಂದ ಅನುದಾನಗಳು ಸಮರ್ಪಕವಾಗಿ ಬರುತ್ತಿಲ್ಲ. ಇದರಿಂದಾಗಿ ರಸ್ತೆಗಳು ಹದಗೆಟ್ಟು ನಿರ್ವಹಣೆಗೆ ತೊಡಕ್ಕಾಗಿದೆ ಎಂದ ಅವರು ಮೂರ್ನಾಡು ಕುಂಬಳದಾಳು ರಸ್ತೆಯಲ್ಲಿ ಖಾಸಗಿ ಮಿಲ್ ನಿಂದಾಗಿ ರಸ್ತೆ ವಿಸ್ತರಣೆಗೆ ತೊಡಕ್ಕಾಗಿದೆ. ಸದ್ಯದಲ್ಲೆ ಸಮಸ್ಯೆ ಪರಿಹಾರವಾಗಲಿದೆ ಎಂದರು.

ಕಾರ್ಯಕ್ರಮದಲ್ಲಿ ಕುಂಬಳದಾಳು ದವಸ ಭಂಡಾರದ ಕಾರ್ಯದರ್ಶಿ ನೆರವಂಡ ಗಣೇಶ್, ಊರಿನ ಹಿರಿಯರಾದ ಕರ್ಣಯ್ಯನ ಸಿದ್ದಾರ್ಥ್, ಮಹಿಳಾ ಸಮಾಜದ ಅಧ್ಯಕ್ಷೆ ಕರ್ಣಯ್ಯನ ಲೀಲಾವತಿ, ಗ್ರಾ.ಪಂ. ಮಾಜಿ ಸದಸ್ಯೆ ಬೊಬ್ಬೀರ ರಾಧಾ ಕುಮಾರಿ ಇನ್ನಿತರರು ಉಪಸ್ಥಿತರಿದ್ದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಹೊದ್ದೂರು ಗ್ರಾ.ಪಂ. ಅಧ್ಯಕ್ಷ ಪಿ.ಕೆ. ದಿನೇಶ್ ವಹಿಸಿದ್ದು, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಯೋಜನಾಧಿಕಾರಿ ದಮಯಂತಿ ಸ್ವಾಗತಿಸಿದ ಕಾರ್ಯಕ್ರಮವನ್ನು ಕುಂಬಳದಾಳು ಸರ್ಕಾರಿ ಪ್ರಾಥಮಿಕ ಶಾಲಾ ಶಿಕ್ಷಕ ನಂದಕುಮಾರ್ ಸ್ವಾಗತಿಸಿ, ಅಂಗನವಾಡಿ ಶಿಕ್ಷಕಿ ಶಾರದ ವಂದಿಸಿದರು.

- ದುಗ್ಗಳ ಸದಾನಂದ