ಮಡಿಕೇರಿ, ಸೆ.8 : ವಿಯೆಟ್ನಾಂನಿಂದ ಆಮದಾಗುತ್ತಿರುವ ಕಾಳು ಮೆಣಸಿನ ಕಲಬೆರಕೆ ವ್ಯವಹಾರದಿಂದಾಗಿ ಕೊಡಗಿನ ರೈತರಿಗೆ ಅನ್ಯಾಯವಾಗುತ್ತಿದ್ದು, ಇದಕ್ಕೆ ಕಾರಣಕರ್ತರಾಗಿರುವ ಗೋಣಿಕೊಪ್ಪಲು ಎಪಿಎಂಸಿ ಆಡಳಿತ ಮಂಡಳಿಯ ಅಧ್ಯಕ್ಷರು ಹಾಗೂ ಸದಸ್ಯರುಗಳು ತಮ್ಮ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕೆಂದು ಒತ್ತಾಯಿಸಿ ತಾ.11 ರಂದು ಜಿಲ್ಲಾ ಕಾಂಗ್ರೆಸ್ ವತಿಯಿಂದ ಎಪಿಎಂಸಿಗೆ ಮುತ್ತಿಗೆ ಹಾಕಲಾಗುವ ದೆಂದು ಪಕ್ಷದ ಜಿಲ್ಲಾಧ್ಯಕ್ಷ ಶಿವು ಮಾದಪ್ಪ ತಿಳಿಸಿದ್ದಾರೆ.ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಎಪಿಎಂಸಿ ಆಡಳಿತ ಮಂಡಳಿ ತನ್ನ ಲಾಭಕ್ಕಾಗಿ ಕಾಳು ಮೆಣಸಿನ ಆಮದಿಗೆ ಬೆಂಬಲ ನೀಡುತ್ತಿದೆÀಯೆಂದು ಆರೋಪಿಸಿದರು. ಸೆ.11 ರಂದು ಗೋಣಿಕೊಪ್ಪ ಉಮಾಮಹೇಶ್ವರಿ ದೇವಸ್ಥಾನದಿಂದ ಪ್ರತಿಭಟನಾ ಮೆರವಣಿಗೆ ನಡೆಸಿ ಎಪಿಎಂಸಿಗೆ ಮುತ್ತಿಗೆ ಹಾಕಲಾಗುವದು. ಆಡಳಿತ ಮಂಡಳಿಯ ರಾಜೀನಾಮೆಗೆ ಒತ್ತಾಯಿಸುವದಲ್ಲದೆ, ಕಲಬೆರಕೆ ವಿರುದ್ಧ ಕ್ರಮ ಕೈಗೊಳ್ಳುವಂತೆ ಸಂಬಂಧಿಸಿದ ಸಚಿವರಲ್ಲಿ ಮನವಿ ಮಾಡಲಾಗುವದೆಂದರು.ಕಾಳುಮೆಣಸಿನ ಬೆಲೆ ಕುಸಿತ ವಾಗಿದ್ದು, ಇದಕ್ಕೆ ವಿಯೆಟ್ನಾಂನಿಂದ ಕಾಳು ಮೆಣಸನ್ನು ಆಮದು ಮಾಡಿಕೊಳ್ಳುತ್ತಿರುವದೆ ಪ್ರಮುಖ ಕಾರಣವಾಗಿದೆ. ಎಪಿಎಂಸಿ ಆಡಳಿತ ಮಂಡಳಿಗೆ ರೈತರ
(ಮೊದಲ ಪುಟದಿಂದ) ಮೇಲೆ ಯಾವದೇ ಕಾಳಜಿ ಇಲ್ಲವೆಂದು ಆರೋಪಿಸಿದ ಶಿವು ಮಾದಪ್ಪ, ಪ್ರತಿಭಟನೆಗೆ ರೈತರು ಹಾಗೂ ಎಲ್ಲಾ ಸಂಘ ಸಂಸ್ಥೆಗಳು ಬೆಂಬಲ ನೀಡಬೇಕೆಂದು ಮನವಿ ಮಾಡಿದರು.
ರಾಜ್ಯ ಸರ್ಕಾರ ನೀಡಿದ ಅನುದಾನದ ಕಾಮಗಾರಿಗಳಿಗೆ ಸ್ಥಳೀಯ ಜನಪ್ರತಿನಿಧಿಗಳು ಹಾಗೂ ವಿಧಾನ ಪರಿಷತ್ ಸದಸ್ಯರ ಮೂಲಕ ಭೂಮಿ ಪೂಜೆ ನೆರವೇರಿಸಲಾಗುತ್ತಿದೆ. ಶಾಸಕರನ್ನು ಕಡೆಗಣಿಸಲಾಗುತ್ತಿದೆ ಎನ್ನುವ ಆರೋಪ ಅರ್ಥಹೀನ ವಾಗಿದ್ದು, ಅವರ ನಿರ್ಲಕ್ಷ್ಯ ಮನೋಭಾವವನ್ನೇ ನಾವು ಅನುಸರಿಸುತ್ತಿದ್ದೇವೆ ಎಂದು ಸಮರ್ಥಿಸಿಕೊಂಡರು. ತನ್ನ ಜಿ.ಪಂ. ಕ್ಷೇತ್ರದ ಕಾಮಗಾರಿಗೆ ರಾಜ್ಯ ಸರ್ಕಾರ ಅನುದಾನ ನೀಡಿದೆ. ಆದರೆ, ತನ್ನ ಗಮನಕ್ಕೆ ತಾರದೆ, ಶಾಸಕರು ಕಾಮಗಾರಿಗೆ ಚಾಲನೆ ನೀಡಿದ್ದಾರೆ. ಅವರು ಹಾಕಿದ ನೀತಿಯನ್ನೇ ನಾವು ಮುಂದುವರೆಸಿಕೊಂಡು ಹೋಗುತ್ತಿದ್ದೇವೆ ಎಂದು ಶಿವು ಮಾದಪ್ಪ ಸ್ಪಷ್ಟಪಡಿಸಿದರು.
ಕಾಂಗ್ರೆಸ್ ಕಿಸಾನ್ ಘಟಕದ ಅಧ್ಯಕ್ಷ ನೆರವಂಡ ಉಮೇಶ್ ಮಾತನಾಡಿ, ದಲ್ಲಾಳಿಗಳ ಕೈಯಿಂದ ರೈತರಿಗಾಗುವ ಅನ್ಯಾಯವನ್ನು ತಪ್ಪಿಸಲು ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಗಳನ್ನು ರಚಿಸಲಾಗಿದೆ. ಆದರೆ, ಗೋಣಿಕೊಪ್ಪ ಎಪಿಎಂಸಿ ಆಡಳಿತ ಮಂಡಳಿ ದಲ್ಲಾಳಿಗಳ ಪರ ಕಾರ್ಯನಿರ್ವಹಿಸುತ್ತಿದೆ ಎಂದು ಆರೋಪಿಸಿದರು.
ವಿಯೆಟ್ನಾಂನಿಂದ ಆಮದು ಮಾಡಿಕೊಂಡ ಕಾಳು ಮೆಣಸನ್ನು ಬೆಂಗಳೂರಿನÀಲ್ಲೇ ಮಾರಾಟ ಮಾಡಬಹುದಾಗಿತ್ತು. ಕೊಡಗಿನಲ್ಲಿ ಈ ವ್ಯವಹಾರವನ್ನು ನಡೆಸುವ ಉದ್ದೇಶ ಏನಿದೆ ಎಂದು ನೆರವಂಡ ಉಮೇಶ್ ಪ್ರಶ್ನಿಸಿದರು. ಸುದ್ದಿಗೋಷ್ಠಿಯಲ್ಲಿ ಪಕ್ಷದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ವಿ.ಪಿ. ಸುರೇಶ್ ಉಪಸ್ಥಿತರಿದ್ದರು.
ರೈತ ಸಂಘ ವಿರೋಧ
ಗೋಣಿಕೊಪ್ಪಲು: ವಿದೇಶದಿಂದ ಕರಿಮೆಣಸನ್ನು ಆಮದು ಮಾಡಿ ಕೊಂಡು ಗೋಣಿಕೊಪ್ಪ ಆರ್‍ಎಂಸಿ ಮಳಿಗೆಯಲ್ಲಿ ಕಲಬೆರಕೆ ಮಾಡುತ್ತಿರು ವದನ್ನು ರೈತ ಸಂಘ ವಿರೋಧಿಸುತ್ತದೆ. ಈ ಬಗ್ಗೆ ಕ್ರಮಕೈಗೊಳ್ಳಬೇಕು ಎಂದು ಜಿಲ್ಲಾಧ್ಯಕ್ಷ ಕಾಡ್ಯಮಾಡ ಮನು ಸೋಮಯ್ಯ ಒತ್ತಾಯಿಸಿದ್ದಾರೆ.
ಪರವಾನಗಿ ಹೊಂದಿರುವ ಕಾರಣವನ್ನು ಮುಂದಿಟ್ಟು ಕಾನೂನನ್ನು ದುರುಪಯೋಗ ಪಡಿಸಿಕೊಂಡು ಸ್ಥಳೀಯ ಬೆಳೆಗಾರರಿಗೆ ನಷ್ಟ ಉಂಟುಮಾಡುವ ಯಾವದೇ ಚಟುವಟಿಕೆಗೆ ರೈತ ಸಂಘ ಆಸ್ಪದ ನೀಡುವದಿಲ್ಲ. ವ್ಯಾಪಾರಿಗಳ ಪರವಾನಗಿ ರದ್ದುಪಡಿಸಿ ಅವರಿಗೆ ನೀಡಿರುವ ಮಳಿಗೆಗಳನ್ನು ತೆರವುಗೊಳಿಸಬೇಕೆಂದು ಸುದ್ದಿಗೋಷ್ಠಿ ಯಲ್ಲಿ ಆಗ್ರಹಿಸಿದರು.
ರೈತರಿಂದ ಅಧಿಕಾರಕ್ಕೆ ಬಂದಿರುವ ಸಮಿತಿ ರೈತರ ಏಳಿಗೆಗೆ ಮಾತ್ರ ಶ್ರಮಿಸಿಬೇಕು. ಪರವಾನಗಿ ಎಂದು ನೆಪ ಹೇಳಿ ಪ್ರಕರಣದಿಂದ ದೂರ ಸರಿಯುವದು ಸರಿಯಲ್ಲ ರೈತರಲ್ಲದ ಉದ್ಯಮಿಗಳನ್ನು ಮಾರುಕಟ್ಟೆಯಿಂದ ದೂರವಿಡಬೇಕು ಎಂದರು.
ರಾಜ್ಯ ರೈತ ಸಂಘವು ಮಂಗಳೂರುವಿನಲ್ಲಿ ಇದೇ ರೀತಿ ನಡೆಯುತ್ತಿದ್ದ ಪ್ರಕರಣದ ವಿರುದ್ಧ ಹೋರಾಟ ನಡೆಸಿ ಯಶಸ್ವಿ ಸಾಧಿಸಿರುವದರಿಂದ ಮುಂದಿನ ದಿನಗಳಲ್ಲಿ ಇದರ ವಿರುದ್ಧ ಹೋರಾಟ ನಡೆಸಲು ನಿರ್ಧರಿಸಲಾಗುವದು ಎಂದರು.
ಕಾರ್ಯದರ್ಶಿ ಕಳ್ಳಿಚಂಡ ಧನು ಮಾತನಾಡಿ, ಕಾಫಿ ಬೆಳೆಗೆ ನಿರ್ವಹಣಾ ವೆಚ್ಚ ಅಧಿಕವಾಗಿದ್ದು ಕರಿಮೆಣಸಿಗೆ ಉತ್ತಮ ದರವಿರುವ ಕಾರಣ ರೈತ ಮುತುವರ್ಜಿ ವಹಿಸಿ ಕರಿಮೆಣಸು ಬೆಳೆಯಲ್ಲಿ ತೊಡಗಿಸಿಕೊಂಡಿದ್ದಾನೆ. ಇಂತಹ ಪರಿಸ್ಥಿತಿಯಲ್ಲಿ ಕಲಬೆರಕೆ ಕರಿಮೆಣಸನ್ನು ಮಾರಾಟ ಮಾಡಿದರೆ ರೈತ ನಷ್ಟ ಅನುಭವಿಸಬೇಕಾಗುತ್ತದೆ. ಕರಿಮೆಣಸಿಗೆ ಅಭಾವ ಎದುರಾಗಿಲ್ಲ. ಹಾಗಾಗಿ ಕರಿಮೆಣಸನ್ನು ವಿದೇಶಗಳಿಂದ ಆಮದು ಮಾಡಿಕೊಳ್ಳುವ ಪ್ರಕ್ರಿಯೆಗೆ ಸರ್ಕಾರ ತಡೆಮಾಡಬೇಕಿದೆ ಎಂದರು.
ಪ್ರ. ಕಾರ್ಯದರ್ಶಿ ಸುಜಯ್ ಬೋಪಯ್ಯ ಮಾತನಾಡಿ, ಸರ್ಕಾರ ಆಮದು ನೀತಿಗಳನ್ನು ಉತ್ತಮವಾಗಿ ರೂಪಿಸಿದೆ. ಆದರೆ ಬಂಡವಾಳ ಶಾಹಿಗಳಿಂದ ತೊಂದರೆ ಯಾಗುತ್ತಿದೆ. ಪರವಾನಗಿ ಹೊಂದಿರುವದು ಸರಿ ಆದರೆ ಕಳಪೆ ಗುಣಮಟ್ಟದ ಕರಿಮೆಣಸನ್ನು ಆಮದು ಮಾಡಿ ಕೊಂಡು ಸ್ಥಳೀಯ ರೈತರಿಗೆ ಅನ್ಯಾಯವಾಗುತ್ತಿದೆ. ಗೋಷ್ಠಿಯಲ್ಲಿ ರೈತ ಮುಖಂಡರುಗಳಾದ ಬಾಚಮಾಡ ಭವಿತ್, ಕೋಳೇರ ರನ್ನು ಉಪಸ್ಥಿತರಿದ್ದರು.
ಕೊಡವ ಸಮಾಜ ಬೆಂಬಲ
ಶ್ರೀಮಂಗಲ: ಗೋಣಿಕೊಪ್ಪಲು ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ವಿಯೆಟ್ನಾಂ ದೇಶದಿಂದ ಕರಿಮೆಣಸನ್ನು ಆಮದು ಮಾಡಿಕೊಂಡು ಜಿಲ್ಲೆಯ ರೈತರಿಗೆ ಅನ್ಯಾಯವಾಗಿರುವ ವಿರುದ್ದ ತಾ. 11 ರಂದು ಗೋಣಿಕೊಪ್ಪಲುವಿನಲ್ಲ್ಲಿ ಕೊಡಗು ಬೆಳೆಗಾರರ ಒಕ್ಕೂಟದಿಂದ ಹಮ್ಮಿಕೊಂಡಿರುವ ಪ್ರತಿಭಟನೆಗೆ ಪೊನ್ನಂಪೇಟೆ ಕೊಡವ ಸಮಾಜ ಬೆಂಬಲ ನೀಡಲಿದೆ ಎಂದು ಅಧ್ಯಕ್ಷ ಸುಳ್ಳಿಮಾಡ ಗೋಪಾಲ್ ತಿಮ್ಮಯ್ಯ ತಿಳಿಸಿದ್ದಾರೆ.