ಮಡಿಕೇರಿ, ಸೆ. 8: ಕಳೆದ ಆರು ತಿಂಗಳಿನಿಂದ ಜಿಲ್ಲಾ ಬಿಜೆಪಿ ಅಧ್ಯಕ್ಷರಾಗಿ ಬಿ.ಬಿ. ಭಾರತೀಶ್ ಆಯ್ಕೆ ಬೆನ್ನಲ್ಲೇ ಪಕ್ಷದೊಳಗೆ ನಡೆಯುತ್ತಿದ್ದ ಅಂತಃಕಲಹಕ್ಕೆ ತೆರೆ ಎಳೆಯುವದರೊಂದಿಗೆ, ಕೇಂದ್ರ ಸಚಿವ ಡಿ.ವಿ. ಸದಾನಂದಗೌಡ ಅವರ ಸಮ್ಮುಖ ಇಂದು ಒಗ್ಗಟ್ಟಿನ ಮಂತ್ರ ಪಡಿಸಲು ರಹಸ್ಯ ಸಮಾಲೋಚನೆ ನಡೆದಿದೆ ಎಂದು ತಿಳಿದು ಬಂದಿದೆ.ಕೊಡಗು ಬಿಜೆಪಿಯೊಂದಿಗೆ ಬಹಳ ಹಿಂದಿನಿಂದಲೂ ಪರಿಚಿತ ರಾಗಿದ್ದು, ಜಿಲ್ಲೆಯನ್ನು ಒಳಗೊಂಡಂತೆ ಸಂಸದರಾಗಿಯೂ ಅನುಭವವಿರುವ ಕೇಂದ್ರ ಸಚಿವರು ಇಂದು ನಗರದ ಸುದರ್ಶನ ಅತಿಥಿ ಗೃಹದಲ್ಲಿ ಸುಮಾರು ಎರಡು ಗಂಟೆಗಳ ಸಮಾಲೋಚನೆ ನಡೆಸಿರುವದಾಗಿ ಗೊತ್ತಾಗಿದೆ.
ಬಿಜೆಪಿ ಜಿಲ್ಲಾಧ್ಯಕ್ಷ ಬಿ.ಬಿ. ಭಾರತೀಶ್ ಹಾಗೂ ಪ್ರಮುಖ ಪದಾಧಿಕಾರಿಗಳ ಸಹಿತ ಶಾಸಕರು ಗಳಾದ ಕೆ.ಜಿ. ಬೋಪಯ್ಯ,
ಎಂ.ಪಿ. ಅಪ್ಪಚ್ಚುರಂಜನ್, ಮೇಲ್ಮನೆ ಸದಸ್ಯ ಎಂ.ಪಿ. ಸುನಿಲ್ ಸುಬ್ರಮಣಿ ಸೇರಿದಂತೆ ಪ್ರಮುಖರೊಂದಿಗೆ ಸಮಾಲೋಚಿಸಿದ ಡಿ.ವಿ. ಸದಾನಂದಗೌಡ, ಕೊಡಗಿನಲ್ಲಿ ಪಕ್ಷ ಸಂಘಟನೆಗೊಳಿಸಲು ಎಲ್ಲರೂ ಒಗ್ಗೂಡಿ ಶ್ರಮಿಸುವಂತೆ ತಿಳಿ ಹೇಳಿದರೆಂದು ವಿಶ್ವಾಸನೀಯ ಮೂಲಗಳಿಂದ ತಿಳಿದು ಬಂದಿದೆ.
ಅಲ್ಲದೆ ಜಿಲ್ಲೆಯ ಎರಡು ವಿಧಾನ ಸಭಾ ಕ್ಷೇತ್ರಗಳನ್ನು ಬಿಜೆಪಿ ಉಳಿಸಿಕೊಳ್ಳಲು ಒಗ್ಗಟ್ಟು ಅವಶ್ಯಕವೆಂದು
(ಮೊದಲ ಪುಟದಿಂದ) ಒತ್ತಿ ಹೇಳಿರುವ ಕೇಂದ್ರ ಸಚಿವರು, ಈ ಬಗ್ಗೆ ಕಾರ್ಯಕರ್ತರಲ್ಲಿ ವಿಶ್ವಾಸ ತುಂಬುವ ಕೆಲಸವನ್ನು ಪಕ್ಷದ ಮುಖಂಡರು ಮಾಡಬೇಕೆಂದು ಕಿವಿಮಾತನಾಡಿದ್ದಾರೆ. ಈಗಾಗಲೇ ಬಿಜೆಪಿ ವಿಸ್ತಾರಕ್ ಯೋಜನೆಯಿಂದ ಲಭಿಸಿರುವ ಲಾಭ ಹಾಗೂ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರದ ಸಾಧನೆಗಳನ್ನು ಜನತೆಗೆ ತಲುಪಿಸುವಲ್ಲಿ ಕಾರ್ಯತರ್ಕರ ಮನೋಭೂಮಿಕೆ ಬಗ್ಗೆ ಗಂಭೀರ ಚರ್ಚಿಸಲಾಗಿದೆ ಎಂದು ಮೂಲಗಳಿಂದ ಮಾಹಿತಿ ಲಭಿಸಿದೆ.
ಜೊತೆಗೆ ಮುಂದೆ ಚುನಾವಣೆ ಸಮೀಪಿಸುವ ಹೊತ್ತಿನಲ್ಲಿ ಬಿಜೆಪಿಯ ಒಂದಿಷ್ಟು ಕಾರ್ಯಕರ್ತರು ಪಕ್ಷಕ್ಕಾಗಿ ಪೂರ್ಣ ಸಮಯ ಕೊಟ್ಟು ಕೆಲಸ ಮಾಡುವ ಅಗತ್ಯವಿದ್ದು, ಅಂತಹವರನ್ನು ಗುರುತಿಸಿ ಕೆಲಸ ನಿರ್ವಹಿಸಲು ಪ್ರೇರೇಪಿಸುವಂತೆಯೂ ಸದಾನಂದಗೌಡ ಸಮಾಲೋಚನೆ ವೇಳೆ ಇಂಗಿತ ಹೊರಗೆಡವಿದ್ದಾಗಿ ತಿಳಿದು ಬಂದಿದೆ. ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಬಾಲಚಂದ್ರ ಕಳಗಿ, ವಿ.ಕೆ. ಲೋಕೇಶ್, ಎಸ್.ಬಿ. ರವಿಕುಶಾಲಪ್ಪ, ರಾಬಿನ್ ದೇವಯ್ಯ, ಕಾಂತಿ ಸತೀಶ್ ಮೊದಲಾದವರು ಕೇಂದ್ರ ಸಚಿವರೊಂದಿಗೆ ಸಮಾಲೋಚನೆಯಲ್ಲಿ ಪಾಲ್ಗೊಂಡಿದ್ದು, ಪಕ್ಷದ ಪ್ರಭಾರಿ ಉದಯ ಕುಮಾರ್ ಶೆಟ್ಟಿ ಹಾಗೂ ಸಹ ಪ್ರಭಾರಿ ಯತೀಶ್ಕುಮಾರ್ ಕೂಡ ಡಿ.ವಿ. ಸದಾನಂದಗೌಡರ ಭೇಟಿ ವೇಳೆ ಹಾಜರಿದ್ದುದಾಗಿ ಗೊತ್ತಾಗಿದೆ.