ಕುಶಾಲನಗರ, ಸೆ. 5: ಆರು ತಿಂಗಳ ಅವಧಿಯಲ್ಲಿ ಕಾವೇರಿ ನದಿಗೆ ಯಾವದೇ ಕಲುಷಿತ ತ್ಯಾಜ್ಯಗಳು ನೇರವಾಗಿ ಸೇರ್ಪಡೆಯಾಗದಂತೆ ಶಾಶ್ವತ ಯೋಜನೆ ರೂಪಿಸಲಾಗು ವದೆಂದು ಕುಶಾಲನಗರ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಎ.ಎಂ.ಶ್ರೀಧರ್ ತಿಳಿಸಿದ್ದಾರೆ.

ಕುಶಾಲನಗರ ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ಕಳೆದ 1 ವರ್ಷದ ಅವಧಿಯಲ್ಲಿ ಪಟ್ಟಣದ ಸ್ವಚ್ಛತೆಗೆ ವಿವಿಧ ಯೋಜನೆಗಳನ್ನು ರೂಪಿಸಲಾಗಿದ್ದು ವಿವಿಧ ಬಡಾವಣೆಗಳಿಂದ ಹೊರಸೂಸುವ ಘನತ್ಯಾಜ್ಯ ವಸ್ತುಗಳ ವಿಲೇವಾರಿಗೆ ಮತ್ತು ನಿರ್ವಹಣೆಗೆ ಕ್ರಮಕೈಗೊಳ್ಳ ಲಾಗಿದೆ. ವಾರ್ಷಿಕ ರೂ 65 ಲಕ್ಷವನ್ನು ಪಟ್ಟಣದ ಸ್ವಚ್ಛತೆಗೆ ವೆಚ್ಚ ಮಾಡಲಾಗುತ್ತಿದೆ. ಕಾರ್ಮಿಕರು, ವಾಹನ, ಪೌರಕಾರ್ಮಿಕರ ಸಂಬಳ ಈ ವೆಚ್ಚದಲ್ಲಿ ಸೇರ್ಪಡೆಗೊಂಡಿದ್ದು ಪಟ್ಟಣ ಪಂಚಾಯಿತಿಯಲ್ಲಿ 24 ಪೌರಕಾರ್ಮಿಕರು ಬಡಾವಣೆಗಳ ಸ್ವಚ್ಛತೆಯಲ್ಲಿ ತೊಡಗಿಸಿಕೊಂಡಿದ್ದಾರೆ ಎಂದು ಮಾಹಿತಿ ಒದಗಿಸಿದರು.

ಪಟ್ಟಣದ ವಿವಿಧ ಬಡಾವಣೆ ಗಳಿಂದ ತರಕಾರಿ ತ್ಯಾಜ್ಯಗಳು ಹೆಚ್ಚಿನ ಪ್ರಮಾಣದಲ್ಲಿ ಹೊರಸೂಸುತ್ತಿದ್ದು ಇದರಿಂದ ಪಟ್ಟಣದ ಸ್ವಚ್ಛತೆಗೆ ಧಕ್ಕೆ ಉಂಟಾಗುತ್ತಿದೆ. ಈ ನಿಟ್ಟಿನಲ್ಲಿ ಬಡಾವಣೆಯ ನಿವಾಸಿಗಳು ತಮ್ಮ ಮನೆಯಲ್ಲಿ ಸಂಗ್ರಹವಾಗುವ ತ್ಯಾಜ್ಯಗಳನ್ನು ತಾವೇ ವಿಲೇವಾರಿ ಮಾಡಿಕೊಳ್ಳಬೇಕೆಂದು ಸೂಚಿಸಿದ್ದಾರೆ. ಡಿಸೆಂಬರ್ ನಂತರದಿಂದ ಯಾವದೇ ಬಡಾವಣೆಗಳಲ್ಲಿ ಹಸಿ ಕಸದ ಸಂಗ್ರಹ ಮಾಡುವದನ್ನು ಸ್ಥಗಿತಗೊಳಿಸ ಲಾಗುತ್ತದೆ ಎಂದು ತಿಳಿಸಿದ ಶ್ರೀಧರ್, ಕುಶಾಲನಗರ ಪಟ್ಟಣದ ಸ್ವಚ್ಛತಾ ಕಾರ್ಯಕ್ರಮದಲ್ಲಿ ಶೇ.70 ರಷ್ಟು ಸಾಧನೆ ಈ ನಿಟ್ಟಿನಲ್ಲಿ ನಾಗರೀಕರು ಸಹಕರಿಸಿದರೆ ಶೇ.100 ಗುರಿ ಮುಟ್ಟಲು ಸಾಧ್ಯ ಎಂದು ಆಶಾಭಾವನೆ ವ್ಯಕ್ತಪಡಿಸಿದ್ದಾರೆ.

ಕುಶಾಲನಗರದ ಒಳಚರಂಡಿ ಯೋಜನೆ ಶೇ.75 ರಷ್ಟು ಕಾಮಗಾರಿ ಮುಗಿದಿದ್ದು ಇನ್ನು ಆರು ತಿಂಗಳ ಒಳಗಾಗಿ ಪೂರ್ಣಗೊಳ್ಳುವದಾಗಿ ತಿಳಿಸಿದ್ದಾರೆ. ಪಟ್ಟಣದ ಖಾಸಗಿ ಬಸ್ ನಿಲ್ದಾಣ ಇನ್ನು ಕೆಲವೇ ದಿನಗಳಲ್ಲಿ ಲೋಕಾರ್ಪಣೆಗೊಳ್ಳಲಿದೆ. ಸಮರ್ಪಕ ವಾಗಿ ವಾಹನ ನಿಲುಗಡೆಗಾಗಿ ಹಲವು ಯೋಜನೆಗಳನ್ನು ರೂಪಿಸಲಾಗಿದೆ. ಹೆದ್ದಾರಿಯಲ್ಲಿ ಎರಡು ನೂತನ ಆಟೋ ನಿಲ್ದಾಣ ಸೇರಿದಂತೆ ವಾಹನಗಳಿಗೆ ನಿಲುಗಡೆಗೆ ವ್ಯವಸ್ಥೆ ಕಲ್ಪಿಸಲಾಗುವದು. ಜನರಿಗೆ ಶುದ್ಧ ಕುಡಿಯುವ ನೀರಿನ ಯೋಜನೆ, ಮೂರು ಹೊಸ ನಂದಿನಿ ಹಾಲು ವಿತರಣಾ ಕೇಂದ್ರಗಳು, ಪ್ಲಾಸ್ಟಿಕ್ ನಿರ್ಮೂಲನೆಗೆ ಸಂಘ ಸಂಸ್ಥೆ ಗಳೊಂದಿಗೆ ಸೇರಿ ಜನರಿಗೆ ಅರಿವು ಮೂಡಿಸುವ ಕಾರ್ಯಕ್ರಮ ಕೈಗೊಳ್ಳಲಾಗುವದು ಎಂದಿದ್ದಾರೆ.

ನದಿ ತಟದಲ್ಲಿ ಅಥವಾ ಸಾರ್ವಜನಿಕ ಸ್ಥಳಗಳಲ್ಲಿ ಶೌಚ ಮಾಡುವ ಜನರ ಮೇಲೆ ಕಟ್ಟುನಿಟ್ಟಿನ ಕಾನೂನು ಕ್ರಮಕ್ಕೆ ಮುಂದಾಗಲು ಈಗಾಗಲೇ ಕ್ರಮಕೈಗೊಳ್ಳಲಾಗಿದೆ. ಕಾವೇರಿ ನದಿಗೆ ಚರಂಡಿ ಮೂಲಕ ತ್ಯಾಜ್ಯ ಬಿಡುತ್ತಿದ್ದ ಹಲವು ವಾಣಿಜ್ಯ ಕಟ್ಟಡಗಳ ಮಾಲೀಕರ ಮೇಲೆ ಜಿಲ್ಲಾಧಿಕಾರಿಗಳ ಆದೇಶದಂತೆ ಕ್ರಿಮಿನಲ್ ಮೊಕದ್ದಮೆ ಹೂಡಿ ಕಾನೂನು ಕ್ರಮಕೈಗೊಳ್ಳಲಾಗಿದ್ದು, ಸ್ವಚ್ಛತೆಯ ಗುರಿ ತಲುಪಲು ಪ್ರಯತ್ನ ನಡೆದಿದೆ ಎಂದು ತಿಳಿಸಿದ್ದಾರೆ.

ಪಟ್ಟಣ ಪಂಚಾಯಿತಿಯಿಂದ ಸ್ಥಳೀಯ ಪಂಚಾಯಿತಿ ಪ್ರತಿನಿಧಿಗಳ ಮೂಲಕ ಅಭಿವೃದ್ಧಿಗೆ ರೂ 10 ಸಾವಿರ ಪ್ರೋತ್ಸಾಹ ಧನ ವಿತರಣೆಗೆ ಕ್ರಮಕೈಗೊಳ್ಳಲಾಗಿದೆ. ಸ್ವಚ್ಛ ಕುಶಾಲನಗರ ಪಟ್ಟಣದ ನಿರ್ಮಾಣಕ್ಕೆ ಎಲ್ಲರೂ ಕೈಜೋಡಿಸು ವಂತೆ ಪತ್ರಿಕೆ ಮೂಲಕ ಎ.ಎಂ. ಶ್ರೀಧರ್ ಕೋರಿದ್ದಾರೆ.