ಕುಶಾಲನಗರ, ಸೆ. 5 : ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತು ಕೊಡಗು ಜಿಲ್ಲಾ ಸಮಿತಿ ಹಾಗೂ ಕರ್ನಾಟಕ ಅರಣ್ಯ ಇಲಾಖೆಯ ಕೊಡಗು ವೃತ್ತದ ವತಿಯಿಂದ ಕುಶಾಲನಗರ ಅರಣ್ಯ ವಲಯಾಧಿಕಾರಿಗಳ ಕಚೇರಿ ಹಾಗೂ ಕುಶಾಲನಗರ ಪಟ್ಟಣ ಪಂಚಾಯಿತಿ ಸಂಯುಕ್ತಾಶ್ರಯದಲ್ಲಿ ಹಸಿರು ಕರ್ನಾಟಕ ಅಭಿಯಾನ ಕಾರ್ಯಕ್ರಮದಡಿ ಪಟ್ಟಣದ ಆದಿಶಂಕರಾಚಾರ್ಯ ಬಡಾವಣೆಯ ಕಾವೇರಿ ನದಿ ಪಾತ್ರದಲ್ಲಿ ಇತ್ತೀಚೆಗೆ ಅರಣ್ಯ ಸಸಿಗಳ ಬೀಜದುಂಡೆಗಳನ್ನು ಬಿತ್ತನೆ ಮಾಡುವ ಮೂಲಕ ಬನ್ನಿ-ನದಿ ಉಳಿಸಿ ಆಂದೋಲನಕ್ಕೆ ಚಾಲನೆ ನೀಡಲಾಯಿತು.

`ನೀರಿಗಾಗಿ ಅರಣ್ಯ-ಗಿಡನೆಟ್ಟು ಬೆಳೆಸೋಣ' ಹಾಗೂ `ಕಾವೇರಿ ನದಿ ಸಂರಕ್ಷಣೆ' ಜಾಗೃತಿ ಆಂದೋಲನದ ಅಂಗವಾಗಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಕಾಡಿನ ವಿವಿಧ ಜಾತಿಯ ಮರಗಳ 100 ಬೀಜದ ಉಂಡೆಗಳನ್ನು ಸ್ವಯಂ ಸೇವಕರು ಬಿತ್ತನೆ ಮಾಡಿದರು.

`ನೀರಿಗಾಗಿ ಅರಣ್ಯ ಮತ್ತು ಜೀವನದಿ ಕಾವೇರಿ ಸಂರಕ್ಷಣೆಯ ಮಹತ್ವ' ಕುರಿತು ರಾಜ್ಯ ವಿಜ್ಞಾನ ಪರಿಷತ್ತಿನ ಪರಿಸರ ಜಾಗೃತಿ ಆಂದೋಲನದ ಜಿಲ್ಲಾ ಸಂಯೋಜಕ ಶಿಕ್ಷಕ ಟಿ.ಜಿ.ಪ್ರೇಮಕುಮಾರ್ ಮಾತನಾಡಿ, ನಾಡಿನ ಜೀವನಾಡಿ ಕಾವೇರಿ ನದಿ ಸೇರಿದಂತೆ ಎಲ್ಲಾ ನದಿಗಳಲ್ಲಿ ನೀರಿನ ಹರಿವಿನ ಪ್ರಮಾಣ ಕ್ಷೀಣಿಸುತ್ತಿರುವದರಿಂದ ನಾವು ಜಾಗೃತಗೊಂಡು ನದಿ ನೀರನ್ನು ಸಂರಕ್ಷಿಸದಿದ್ದಲ್ಲಿ ಭವಿಷ್ಯತ್ತಿನಲ್ಲಿ ನದಿಗಳು ಕಣ್ಮರೆಯಾಗುವ ಅಪಾಯವಿದೆ ಎಂದರು.

ರಾಜ್ಯ ವಿಜ್ಞಾನ ಪರಿಷತ್ತಿನ ಜಿಲ್ಲಾ ಸಮಿತಿ ಅಧ್ಯಕ್ಷ ಫಿಲಿಪ್‍ವಾಸ್ ಮಾತನಾಡಿ, ಪ್ರತಿಯೊಬ್ಬರೂ ಸಂಘಟಿತರಾಗಿ ಅರಣ್ಯ, ವನ್ಯಜೀವಿ ಸಂರಕ್ಷಣೆ ಹಾಗೂ ನೀರಿನ ಸಂರಕ್ಷಣೆಗಾಗಿ ಜನಾಂದೋಲನ ರೂಪಿಸಬೇಕಿದೆ ಎಂದರು.

ನದಿಪಾತ್ರದಲ್ಲಿ ಬೇವಿನ ಸಸಿನೆಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಪಟ್ಟಣ ಪಂಚಾಯಿತಿ ಸದಸ್ಯ ಪ್ರಮೋದ್ ಮುತ್ತಪ್ಪ, ಪರಿಸರ ಸಂರಕ್ಷಣೆಗೆ ಕೈಜೋಡಿಸಬೇಕು ಎಂದರು.

ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಶ್ರೀಧರ್ ಮಾತನಾಡಿ, ಪಟ್ಟಣದಲ್ಲಿ ಸ್ವಚ್ಛತೆಗೆ ಆದ್ಯತೆ ನೀಡಿದ್ದು, ನಾಗರಿಕರು ಕಾವೇರಿ ನದಿಗೆ ಯಾವದೇ ರೀತಿಯಲ್ಲೂ ತ್ಯಾಜ್ಯಗಳು ಸೇರದಂತೆ ಮುಂಜಾಗ್ರತೆ ವಹಿಸಬೇಕು ಎಂದರು.

ವಿಜ್ಞಾನ ಪರಿಷತ್ತಿನ ಜಿಲ್ಲಾ ಉಪಾಧ್ಯಕ್ಷ ಎಂ.ಇ.ಮೊಹಿದ್ದೀನ್, ಕಾವೇರಿ ನದಿ ಸ್ವಚ್ಚತಾ ಆಂದೋಲನದ ರಾಜ್ಯ ಸಂಚಾಲಕ ಎಂ.ಎನ್. ಚಂದ್ರಮೋಹನ್, ನೆಲ್ಯಹುದಿಕೇರಿ ಪಿಯು ಕಾಲೇಜಿನ ಪ್ರಾಂಶುಪಾಲ ಕೆಂಚಪ್ಪ, ಉಪನ್ಯಾಸಕರಾದ ಎಚ್.ಎಸ್. ಗುರುಸ್ವಾಮಿ, ಎಚ್.ಜೆ. ನಾಗರಾಜ್, ಉಪ ಅರಣ್ಯ ವಲಯಾಧಿಕಾರಿ ಸುಬ್ರಹ್ಮಣ್ಯ, ಅರಣ್ಯ ರಕ್ಷಕ ಮಂಜೇಗೌಡ, ಆದಿಶಂಕರಾ ಚಾರ್ಯ ಬಡಾವಣೆಯ ಹಸಿರು ಪಡೆಯ ಸದಸ್ಯರು ಪಾಲ್ಗೊಂಡಿದ್ದರು.