ಮಡಿಕೇರಿ, ಸೆ. 4: ಜಿಲ್ಲೆಯಾದ್ಯಂತ ಮಲೆಯಾಳಿ ಬಾಂಧವರು ವಿಶೇಷವಾದ ಓಣಂ ಹಬ್ಬವನ್ನು ವಿವಿಧ ರೀತಿಯಲ್ಲಿ ಆಚರಿಸಿದರು.ಕೇರಳ ಶೈಲಿಯ ಉಡುಗೆ ತೊಡುಗೆ, ಸಂಪ್ರದಾಯಿಕ ರಂಗೋಲಿ ರಚನೆ, ವಿಶೇಷ ಆಹಾರ ತಯಾರಿಕೆಗಳ ಮೂಲಕ ಸಂಭ್ರಮಿಸಿದರೆ, ಮೂರ್ನಾಡಿನ ಹೊಟೇಲ್ ಮಾಲೀಕರೊಬ್ಬರು ಉಚಿತ ಊಟದ ವ್ಯವಸ್ಥೆ ಕಲ್ಪಿಸಿ ಜನರ ಮೆಚ್ಚುಗೆ ಗಳಿಸಿದರು.ಓಣಂ ಹಬ್ಬದ ಪ್ರಯುಕ್ತ ಪಟ್ಟಣದ ಮೂರ್ನಾಡಿನ ಶ್ರೀ ಕೃಷ್ಣ ಹೊಟೇಲ್‍ನಲ್ಲಿ ಓಣಂ ಊಟವನ್ನು ಸಾರ್ವಜನಿಕರಿಗೆ ಉಚಿತವಾಗಿ ನೀಡಲಾಯಿತು.

ಕೇರಳ ಶೈಲಿಯಲ್ಲಿ ವಿವಿಧ ಬಗೆಯ ತಿಂಡಿ ತಿನಿಸುಗಳೊಂದಿಗೆ ಓಣಂ ಸದ್ಯವನ್ನು (ಊಟ) ತಯಾರಿಸಿ ಮಧ್ಯಾಹ್ನ ಸಾರ್ವಜನಿಕರಿಗೆ ನೀಡಲಾಯಿತು. ಕಳೆದ ಆರು ವರ್ಷದಿಂದ ಹೊಟೇಲ್‍ನಲ್ಲಿ ಓಣಂ ದಿನದಂದು ಸದ್ಯವನ್ನು ತಯಾರಿಸಿ ದಂಪತಿಗಳು ಉಚಿತವಾಗಿ ನೀಡುತ್ತಿದ್ದಾರೆ. ಶಾಲಾ ವಿದ್ಯಾರ್ಥಿಗಳು, ಪಟ್ಟಣದ ನಿವಾಸಿಗಳು ಹಬ್ಬದ ಊಟವನ್ನು ಸವಿದರು. ಓಣಂ ಹಬ್ಬದಂದು ಸಾರ್ವಜನಿಕರಿಗೆ ಒಂದು ದಿನದ ಊಟವನ್ನು

(ಮೊದಲ ಪುಟದಿಂದ) ಉಚಿತವಾಗಿ ನೀಡಿ ಉಪಚರಿಸುತ್ತಿರುವದು ನಿಜಕ್ಕೂ ತೃಪ್ತಿ ತಂದಿದೆ ಎಂದು ಮಾಲೀಕ ಗೋವಿಂದನ್ ಅನಿಸಿಕೆ ವ್ಯಕ್ತಪಡಿಸಿದ್ದಾರೆ.

ಕೂಡಿಗೆ ವ್ಯಾಪ್ತಿಯಲ್ಲಿ ಪ್ರತಿವರ್ಷದ ಆಚರಣೆಯ ಪೂಕಳಂ (ತಿರು ಓಣಂ) ಹಬ್ಬವನ್ನು ಅನೇಕ ಮನೆಗಳಲ್ಲಿ ಕುಟುಂಬದ ಸದಸ್ಯರೊಂದಿಗೆ ಕೇರಳ ಶೈಲಿಯ ಉಡುಗೆ ತೊಡುಗೆಗಳನ್ನು ತೊಟ್ಟು ವಿಜೃಂಭಣೆಯಿಂದ ಆಚರಿಸುತ್ತಿರುವುದು ಕಂಡುಬಂದಿತು.

ಈ ಹಬ್ಬ ಹೂಗಳ ಹಬ್ಬವೆಂದೆ ಪ್ರಖ್ಯಾತಿಗೊಂಡು ಮನೆ ಮನೆಯ ಅಂಗಳಗಳಲ್ಲಿ ಭಿನ್ನಭಿನ್ನವಾದ ರಂಗೋಲಿಗಳು ಹೂಗಳಿಂದಲೇ ರಚಿತವಾಗಿರುವದು ವಿಶೇಷವಾಗಿತ್ತು. ಮನೆಯ ಅಂಗಳವನ್ನು ಹಬ್ಬದ ಧ್ಯೋತಕವಾಗಿ ಸಾಂಪ್ರದಾಯಕವಾಗಿ ಹೂಗಳ ರಂಗೋಲಿ ಬಿಡಿಸಿ, ಹೊಸ ಉಡುಗೆ ತೊಡುಗೆ ತೊಟ್ಟು ಸಂಭ್ರಮದಿಂದ ಓಣಂ ಆಚರಣೆ ಮಾಡಿದರು.

ಈ ದಿನಗಳ ಊಟದ ವಿಶಿಷ್ಟ ವೈವಿದ್ಯಮಯ ಅಡುಗೆಗಳಲ್ಲಿ ಪುಳಿಂಚಿ, ಪಚ್ಚಡಿ, ಓಲನ್, ಅವಿಲ್, ಕೂಟ್‍ಕರಿ, ಪುಳಿಶೇರಿ, ಸರ್ಕರ ಉಪ್ಪೇರಿ, ಪಪ್ಪಡ, ಅಡಪ್ರಥಮನ್, ತೋರೆ, ಸಾಂಬಾರ್ ಹಾಗೂ ಕುಚ್ಚಲಕ್ಕಿ ಅನ್ನ ಹಬ್ಬದ ವಿಶೇಷ ಶಾಖಾಹಾರಿ ತಿನಿಸುಗಳಾಗಿದ್ದವು. ಮುಳ್ಳೂರು, ಮಾಲಂಬಿ, ನಿಡ್ತ, ಜಾಗೇನಹಳ್ಳಿ. ಕಣಿವೆ ಬಸವನಹಳ್ಳಿ, ಮಲ್ಲೇಶ್ವರ, ಶನಿವಾರಸಂತೆ ಸೇರಿದಂತೆ ಜಿಲ್ಲೆಯ ವಿವಿಧೆಡೆ ಓಣಂ ಹಬ್ಬವನ್ನು ಅದ್ದೂರಿಯಾಗಿ ಆಚರಿಸಲಾಯಿತು.

ಹಬ್ಬದ ವಿಶೇಷ : ಹಿಂದೆ ಕೇರಳವನ್ನು ಮಹಾಬಲಿ ಚಕ್ರವರ್ತಿ ಆಳುತ್ತಿದ್ದನೆಂದು ಅವನ ಆಡಳಿತದಲ್ಲಿ ಸುಖ, ಸಂತೋಷ, ನೆಮ್ಮದಿಯಿಂದ ಕೂಡಿ ರಾಜ್ಯ ಸಂಪದ್ಬರಿತವಾಗಿತ್ತೆಂದು ಇಂದ್ರ ಪದವಿ ಪಡೆಯುವದಕ್ಕಾಗಿ ಮಹಾಬಲಿ ಯಾಗವೊಂದನ್ನು ಕೈಗೊಂಡನು. ಆಗ ದೇವತೆಗಳು ಭಯಗೊಂಡು ವಿಷ್ಣುವಿನ ಮೊರೆಹೊಕ್ಕರು ದೇವತೆಗಳ ಬೇಡಿಕೆ ಈಡೇರಿಸುವದಕ್ಕಾಗಿ ಮಹಾ ವಿಷ್ಣುವು ವಾಮನ ರೂಪವನ್ನು ತಾಳಿ ಮಹಾಬಲಿಯ ಯಾಗಶಾಲೆಯನ್ನು ಪ್ರವೇಶಿಸಿ ತನಗೆ ಮೂರು ಹೆಜ್ಜೆಗಳನ್ನು ಇಡುವಷ್ಟು ಜಾಗವನ್ನು ದಾನ ಮಾಡಬೇಕೆಂದನು ಮಹಾಬಲಿಯು ಒಪ್ಪಿ ಮೂರು ಹೆಜ್ಜೆಗಳನ್ನು ಇಡುವಷ್ಟು ಜಾಗವನ್ನು ಅಳೆಯುವಂತೆ ಸೂಚಿಸಿದಾಗ ವಾಮನ ಮೂರ್ತಿ ವಿಷ್ಣುವು ತ್ರಿವಿಕ್ರಮನಾಗಿ ಬೆಳೆದು ತನ್ನ ಒಂದು ಹೆಜ್ಜೆಯನ್ನು ಪೃಥ್ವಿಯಲ್ಲ್ಲೂ ಎರಡನೇ ಹೆಜ್ಜೆಯನ್ನು ಭೂಮಂಡಲದಲ್ಲಿ ಇಟ್ಟನು ಮೂರನೇ ಹೆಜ್ಜೆಯನ್ನು ಎಲ್ಲಿ ಇಡಲಿ ಎಂದು ಮಹಾ ವಿಷ್ಣು ಕೇಳಿದನು. ಮಹಾಬಲಿ ಚಕ್ರವರ್ತಿ ಮೂರನೇ ಹೆಜ್ಜೆಯನ್ನು ಇಡಲು ತನ್ನ ಶಿರವನ್ನೇ ಒಡ್ಡುತ್ತಾನೆ. ಮಹಾಬಲಿಯ ನಿಶ್ವಾರ್ಥ ತ್ಯಾಗಕ್ಕೆ ಮೆಚ್ಚಿದ ವಾಮನಮೂರ್ತಿ ಬೇಕಾದ ವರವನ್ನು ಕೇಳಿಕೋ ಎಂದು ಮಹಾಬಲಿಯಲ್ಲಿ ಹೇಳಿದಾಗ ಮಹಾಬಲಿಯು ವರ್ಷಕ್ಕೆ ಒಮ್ಮೆ ತನ್ನ ಪ್ರಜೆಗಳನ್ನು ನೋಡಿ ಹೋಗಲು ಅವಕಾಶ ನೀಡಬೇಕೆಂದು ಕೇಳಿದನು ಈ ದಿನ ಮಹಾಬಲಿ ಚಕ್ರವರ್ತಿ ಭೂಮಿಗೆ ಬರುವನೆಂಬ ನಂಬಿಕೆಯಿಂದ ಇದೇ ದಿನವಾಗಿ ಇಂದಿಗೂ ಓಣಂ ಹಬ್ಬವನ್ನು ಕೇರಳೀಯರು ಆಚರಿಸುತ್ತಿದ್ದಾರೆ.

ಓಣಂ ಹಬ್ಬದ ವಿಶೇಷ ಆಕರ್ಷಣೆ ಎಂದರೆ ಪೂಕಳಂ(ಹೂವಿನ ರಂಗೋಲಿ) ಈ ರಂಗೋಲಿಗೆ ಅದರದೇ ಆದ ಮಹತ್ವವಿದೆ. ಮನೆಯ ಮುಂಭಾಗ ಸುಂದರವಾದ ರಂಗೋಲಿ ಎಲ್ಲರ ಗಮನ ಸೆಳೆಯುತ್ತಿದೆ. ಓಣಂಗೆ ಹತ್ತು ದಿನ ಮೊದಲೇ ಹೂವಿನ ವಿಧವಿಧದ ರಂಗೋಲಿಯನ್ನು ರಚಿಸಲು ಪ್ರಾರಂಭಿಸುತ್ತಾರೆ. ಪ್ರತಿ ನಿತ್ಯ ವಿಧವಿಧದ ಹೂವುಗಳು ಎಲೆಗಳನ್ನು ಉಪಯೋಗಿಸಿ ರಂಗೋಲಿಯನ್ನು ರಚಿಸುತ್ತಾರೆ.

ಮಲೆಯಾಳಿ ಸಮುದಾಯದವರ ಪ್ರಮುಖ ಹಬ್ಬವಾದ ಓಣಂ ಹಬ್ಬವನ್ನು ಸೋಮವಾರಪೇಟೆಯಾದ್ಯಂತ ಮಲೆಯಾಳಿ ಬಾಂಧವರು ಶ್ರದ್ಧಾ ಭಕ್ತಿಯಿಂದ ಆಚರಿಸಿದರು. ಕಳೆದ 10ದಿನಗಳಿಂದ ಮನೆಯ ಎದುರು ಹೂವಿನ ರಂಗೋಲಿಯನ್ನು ಹಾಕಿ ಸಿಂಗರಿಸಿಕೊಂಡು ಬರುತ್ತಿದ್ದ ಮಲಯಾಳಿ ಭಾಷಿಕರು, ಹಬ್ಬದ ಕೊನೆಯ ದಿನದಂದು ಹೆಚ್ಚಿನ ಸಂಭ್ರಮದಿಂದ ಹಬ್ಬಾಚರಿಸಿದರು.

- ಹರೀಶ್ ಟಿ.ಸಿ., ನಾಗರಾಜಶೆಟ್ಟಿ, ದಿನೇಶ್ ಕೆ.ಎನ್., ವಿಜಯ್