ಶ್ರೀಮಂಗಲ, ಸೆ. 4: ಗೋಣಿಕೊಪ್ಪ ಕೃಷಿ ಉತ್ಪನ್ನ ಮಾರುಕಟ್ಟೆ ಆವರಣದಲ್ಲಿ ಕರಿಮೆಣಸು ವ್ಯಾಪಾರಿಗಳು ಬೃಹತ್ ಪ್ರಮಾಣದಲ್ಲಿ ಕಳಪೆ ಗುಣಮಟ್ಟದ ವಿಯೇಟ್ನಾಂ ದೇಶದ ಕರಿಮೆಣಸು ಆಮದು ಮಾಡಿಕೊಂಡು, ಕೊಡಗಿನ ಉತ್ತಮ ಮಟ್ಟದ ಕರಿಮೆಣಸಿನೊಂದಿಗೆ ಬೆರಕೆ ಮಾಡಿ ಭಾರತದ ಕರಿಮೆಣಸೆಂದು ಮಾರಾಟ ಮಾಡುತ್ತಿದ್ದಾರೆ. ಇದರಿಂದ ಕೊಡಗು ಹಾಗೂ ದೇಶದ ಕರಿಮೆಣಸು ಬೆಳೆಗಾರರು ಬೆಳೆದ ಕರಿಮೆಣಸಿಗೆ ದರ ಕುಸಿಯುವಂತಾಗಿದೆ. ಇದನ್ನು ತಕ್ಷಣದಿಂದಲೆ ತಡೆಗಟ್ಟಬೇಕು. ಆಮದು ಮಾಡಿಕೊಂಡ ವ್ಯಾಪಾರಿಯನ್ನು ಕೃಷಿ ಉತ್ಪನ್ನ ಮಾರುಕಟ್ಟೆ ಆವರಣದಿಂದ ಹೊರದೂಡಬೇಕು ಎಂದು ಪ್ರಮುಖರು ಎಚ್ಚರಿಕೆ ನೀಡಿದರು.

ಗೋಣಿಕೊಪ್ಪ ಕೃಷಿ ಉತ್ಪನ್ನ ಮಾರುಕಟ್ಟೆ ಒಳಗೆ ಬೃಹತ್ ಪ್ರಮಾಣದಲ್ಲಿ ಕಳಪೆ ಮಟ್ಟದ ವಿಯೇಟ್ನಾಂ ದೇಶದ ಕರಿಮೆಣಸು ದಾಸ್ತಾನಿರುವ ಬಗ್ಗೆ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಕೆಲವು ಸದಸ್ಯರೆ ಮಾಧ್ಯಮದ ಮೂಲಕ ಅಚ್ಚರಿಯ ವಿಚಾರವನ್ನು ಬಹಿರಂಗಪಡಿಸಿದ ಬೆನ್ನಲ್ಲೆ, ಗೋಣಿಕೊಪ್ಪ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಸಭಾಂಗಣದಲ್ಲಿ ಬೆಳೆಗಾರರು ಈ ಬಗ್ಗೆ ಸಭೆ ಕರೆದು ತೀವ್ರ ಆತಂಕ ವ್ಯಕ್ತಪಡಿಸಿದರು.

ಸಭೆಯಲ್ಲಿ ಪ್ರಾಸ್ತವಿಕವಾಗಿ ಮಾತನಾಡಿದ ಕಾಫಿ ರಾಷ್ಟ್ರೀಯ ಪಾನೀಯ ಆಂದೋಲನ ಸಮಿತಿ ಸಂಚಾಲಕ ಮಾಚಿಮಾಡ ಎಂ. ರವೀಂದ್ರ, ಕೊಡಗು ಜಿಲ್ಲೆಗೆ ವಿಯೇಟ್ನಾಂ ಕರಿಮೆಣಸು ಆಮದಾಗಿದ್ದು, ಇದರಿಂದ ಸ್ಥಳೀಯ ಕರಿಮೆಣಸು ಬೆಳೆಗಾರರ ಉತ್ಪನ್ನಗಳಿಗೆ ದರ ಕುಸಿತವಾಗಿದ್ದು, ಸಂಚಕಾರವಾಗಿದೆ. ಈ ಬಗ್ಗೆ ನೂತನ ವಾಣಿಜ್ಯ ಸಚಿವ ಸುರೇಶ್ ಪ್ರಭು

(ಮೊದಲ ಪುಟದಿಂದ) ಅವರಿಗೆ ಟ್ವೀಟ್ ಮಾಡಲಾಗಿದೆ ಎಂದರು.

ಕೃಷಿ ಮಾರುಕಟ್ಟೆ ಸಮಿತಿಯ ಮಾಜಿ ಅಧ್ಯಕ್ಷ ಬೋಸ್ ಮಂದಣ್ಣ ಮಾತನಾಡಿ, ಜಿ.ಎಸ್.ಟಿ ಬಂದಮೇಲೆ ಈ ಗೊಂದಲವಾಗಿದೆ. ವ್ಯಾಪಾರಸ್ಥರು ಸೆಸ್ ಪಾವತಿಸಿ ಕರಿಮೆಣಸು ಸಾಗಿಸಬಹುದು. ಆದರೆ ಆರ್.ಟಿ.ಸಿ. ಹೊಂದಿರುವ ಬೆಳೆಗಾರ ತಮ್ಮ ಕರಿಮೆಣಸನ್ನು ಯಾವುದೇ ಸೆಸ್ ಇಲ್ಲದೆ ಎಲ್ಲಿ ಬೇಕಾದರೂ ಮಾರಾಟ ಮಾಡಬಹುದು. ಬೆಳೆಗಾರರಿಗೆ ಮಾರಕವಾಗುವ ಕರಿಮೆಣಸು ಆಮದಿನಿಂದ ತೀವ್ರ ಸಂಕಷ್ಟ ಎದುರಿಸುತ್ತಿದ್ದರೂ ನಮ್ಮ ಜನಪ್ರತಿನಿಧಿಗಳು ಇದರ ಬಗ್ಗೆ ಚಕಾರವೆತ್ತುತ್ತಿಲ್ಲ. ಕರಿಮೆಣಸನ್ನು ಆಮದು ಮಾಡಿಕೊಂಡು ಬೆಳೆಗಾರರಿಗೆ ಸಂಕಷ್ಟ ತಂದೊಡ್ಡಿದ್ದಾರೆ ಎಂದು ಆರೋಪಿಸಿದರು.

ವೀರಾಜಪೇಟೆ ತಾಲೂಕು ಬೆಳೆಗಾರ ಒಕ್ಕೂಟದ ಅಧ್ಯಕ್ಷ ಕೈಬಿಲಿರ ಹರೀಶ್ ಅಪ್ಪಯ್ಯ ಮಾತನಾಡಿ, ಸ್ಥಳೀಯ ಕೃಷಿ ಉತ್ಪನ್ನ ಮಾರುಕಟ್ಟೆ ಸ್ಥಳೀಯ ಬೆಳೆಗಾರರಿಗೆ ಮಾರುಕಟ್ಟೆ ಕಲ್ಪಿಸುವ ಉದ್ದೇಶ ಹೊಂದಿರುವ ಕೇಂದ್ರ. ಇಲ್ಲಿ ವಿದೇಶಿ ಕೃಷಿ ಉತ್ಪನ್ನಗಳನ್ನು ಆಮದು ಮಾಡಿಕೊಂಡು ಸ್ಥಳೀಯ ಬೆಳೆಗಾರರಿಗೆ ಸಂಚಕಾರ ಪರಿಣಮಿಸಿದೆ. ಇದರಲ್ಲಿ ಸ್ಥಳೀಯ ಆರ್.ಎಂ.ಸಿ.ಯ ಆಡಳಿತ ಶಾಮೀಲಾಗದೆ ರಾಜಸ್ಥಾನದ ವ್ಯಾಪಾರಿ ಬಂದು ಕರಿಮೆಣಸನ್ನು ಆಮದು ಮಾಡಲು ಹೇಗೆ ಸಾಧ್ಯ. ಸಂಬಾರು ಮಂಡಳಿಯ ಓರ್ವ ಸದಸ್ಯರು ನಮ್ಮ ಸಂಸದ ಪ್ರತಾಪ್ ಸಿಂಹ ಆಗಿದ್ದಾರೆ. ಇವರ ನಿಲುವೇನು? ಎಂದು ಪ್ರಶ್ನಿಸಿದರು.

ಬಾಳೆಲೆಯ ಬೆಳೆಗಾರ ಅಳಮೇಂಗಡ ಮುರುಳಿ ಮುತ್ತಣ್ಣ ಮಾತನಾಡಿ, ಭಾರತವು ನೆರೆಯ ಶ್ರೀಲಂಕಾ ಹಾಗೂ ನೇಪಾಳ ದೇಶಗಳೊಂದಿಗೆ ಮುಕ್ತ ಮಾರುಕಟ್ಟೆ ಒಪ್ಪಂದ ಮಾಡಿಕೊಂಡಿದೆ. ವಿಯೇಟ್ನಾಂ ದೇಶವು ಶ್ರೀಲಂಕಾ ಹಾಗೂ ನೇಪಾಳದ ಮೂಲಕ ಭಾರತದೊಳಗೆ ತನ್ನ ಕಳಪೆ ಮಟ್ಟದ ಕರಿಮೆಣಸನ್ನು ರಪ್ತು ಮಾಡುವ ಮೂಲಕ ಒಪ್ಪಂದವನ್ನು ದುರುಪಯೋಗ ಮಾಡುತ್ತಿದೆ ಎಂದು ಸಂಶಯ ವ್ಯಕ್ತಪಡಿಸಿದರು.

ಕಾನೂರು ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಅಳಮೇಂಗಡ ವಿವೇಕ್ ಮಾತನಾಡಿ, ವಿಯೇಟ್ನಾಂ ನಿಂದ ಕರಿಮೆಣಸು ಆಮದು ಮಾಡಿಕೊಳ್ಳಲು ಶೇ. 54 ತೆರಿಗೆ ಪಾವತಿಸಬೇಕಾಗಿದೆ. ಆದರೆ ಸಾರ್ಕ್ ಒಪ್ಪಂದದಂತೆ ಭಾರತವು, ಶ್ರೀಲಂಕಾ ಮತ್ತು ನೇಪಾಳಗಳೊಂದಿಗೆ ಮುಕ್ತ ಮಾರುಕಟ್ಟೆ ಒಪ್ಪಂದ ಮಾಡಿಕೊಂಡಿರು ವದರಿಂದ ಈ ದೇಶದ ಮೂಲಕ ಶೇ. 8 ತೆರಿಗೆ ಪಾವತಿಸಿ ಭಾರತಕ್ಕೆ ಕಳಪೆ ಗುಣಮಟ್ಟದ ಮೆಣಸು ಸರಬರಾಜಾ ಗುತ್ತಿದೆ ಎಂದು ಹೇಳಿದರು.

ಕೊಟ್ಟಗೇರಿ ಗ್ರಾಮದ ಬೆಳೆಗಾರ ಮಾಚಂಗಡ ಉಮೇಶ್ ಮಾತನಾಡಿ ರಾಜಸ್ಥಾನದಿಂದ ಬಂದು ಗೋಣಿಕೊಪ್ಪದಲ್ಲಿ ವ್ಯಾಪಾರ ಮಾಡುತ್ತಿರುವ ವ್ಯಾಪಾರಿಯಿಂದ ಸ್ಥಳೀಯ ಬೆಳೆಗಾರರಿಗೆ ನಷ್ಟ ಉಂಟಾಗಿದೆ. ಜಿಲ್ಲೆಯ ಕರಿಮೆಣಸಿನೊಂದಿಗೆ ಬೆರಕೆ ಮಾಡಿ ಮಾರಿದ್ದಾರೆಯೇ ಎಂದು ತನಿಖೆಯಾಗಬೇಕಿದೆ ಎಂದು ವ್ಯಕ್ತಪಡಿಸಿದರು.

ಬಾಳೆಲೆ ಕೊಡವ ಸಮಾಜದ ಅದ್ಯಕ್ಷ ಮಲಚ್ಚೀರ ಬೋಸ್ ಮಾತನಾಡಿ, ಹೊರ ದೇಶದಿಂದ ಕಳಪೆ ಮಟ್ಟದ ಕರಿಮೆಣಸನ್ನು ತಂದು ಕೊಡಗಿನ ಕರಿಮೆಣಸೆಂದು ಮಾರಾಟ ಮಾಡಲಾಗುತ್ತಿದೆ. ಕೂಡಲೆ ಈ ವ್ಯಾಪಾರಿಯನ್ನು ಖಾಲಿ ಮಾಡಿಸದಿದ್ದರೆ ಬೆಳೆಗಾರರು ಒಂದಾಗಿ ಕೊಡಗು ಬಂದ್‍ಗೆ ಕರೆ ನೀಡಬೇಕಾದ ಅನಿವಾರ್ಯತೆ ಇದೆ ಎಂದು ಎಚ್ಚರಿಸಿದರು.

ಯುಕೊ ಸಂಚಾಲಕ ಮಂಜು ಚಿಣ್ಣಪ್ಪ ಮಾತನಾಡಿ, ನಮ್ಮಲ್ಲಿ ಪ್ರತಿಯೊಂದು ವಿಚಾರಕ್ಕೂ ರಾಜಕೀಯ ಬಣ್ಣ ಬಳಿಯಲಾಗುತ್ತದೆ. ಈ ವಿಚಾರದಲ್ಲಿ ರಾಜಕೀಯವಾಗಿ ಹೋರಾಟ ಹತ್ತಿಕ್ಕುವ ಪ್ರಯತ್ನಗಳು ನಡೆಯುತ್ತದೆ. ಈ ಬಗ್ಗೆ ಎಚ್ಚರವಹಿಸಬೇಕು ಎಂದು ಸಲಹೆ ನೀಡಿದರು.

ಬಾಳೆಲೆಯ ಬೆಳೆಗಾರರ ಆದೇಂಗಡ ವಿನು ಉತ್ತಪ್ಪ ಮಾತನಾಡಿ, ಸ್ಥಳೀಯ ಬೆಳೆಯನ್ನು ಖರೀದಿಸಲು ಇಲ್ಲಿನ ಆರ್.ಎಂ.ಸಿ. ಯಲ್ಲಿ ಗೋದಾಮು ನಿರ್ಮಿಸಲಾಗಿದೆ ಹೊರತು ಹೊರಗಿನಿಂದ ಆಮದು ಮಾಡಿಕೊಂಡು ಮತ್ತೆ ಅಂತ ರಾಷ್ಟ್ರೀಯ ಮಾರುಕಟ್ಟೆಗೆ ಕಳುಹಿಸಲು ಯಾರಿಗೂ ಗೋದಾಮು ನೀಡಿಲ್ಲ. ಈ ಬಗ್ಗೆ ಪ್ರತಿಯೊಬ್ಬ ಬೆಳೆಗಾರರು ಪ್ರತಿಭಟನೆ ನಡೆಸಬೇಕು ಎಂದು ಹೇಳಿದರು.

ಸಭೆಯಲ್ಲಿ ಹಾಜರಿದ್ದ ಮಾರುಕಟ್ಟೆ ಸಮಿತಿ ಸದಸ್ಯ ಗುಮ್ಮಟ್ಟಿರ ಕಿಲನ್ ಮಾತನಾಡಿ, ಈ ಹಿಂದಿನ ಆಡಳಿತ ಮಂಡಳಿ ಸಭೆಯಲ್ಲಿ ಆಮದಾಗಿರುವ ಕರಿಮೆಣಸಿನ ಬಗ್ಗೆ ಪ್ರಸ್ತಾಪವಾಗಿದೆ. ಕಾಯ್ದೆ ಪ್ರಕಾರ ನಮಗೆ ತಡೆಮಾಡುವ ಅಧಿಕಾರವಿಲ್ಲ. ಕರಿಮೆಣಸು ಆಮದು ಮಾಡಿಕೊಳ್ಳಲು ಅವಕಾಶವಿದೆ ಎಂದು ಮಾಹಿತಿ ನೀಡಿದರು. ಇದರಿಂದ ಸ್ಥಳೀಯ ಬೆಳೆಗಾರರಿಗೆ ಏನು ಪ್ರಯೋಜನ ಎಂದು ಪ್ರಶ್ನಿಸಿದ ಬೆಳೆಗಾರರಿಗೆ ಆಮದು ನೀತಿಯಿಂದ ನಾವು ಏನು ಮಾಡಲು ಸಾಧ್ಯವಿಲ್ಲ ವೆಂದು ಕಿಲನ್ ಉತ್ತರಿಸಿದರು.

ಇನ್ನೋರ್ವ ಸದಸ್ಯ ವಿನು ಚಂಗಪ್ಪ ಮಾತನಾಡಿ, ಈ ವಿಚಾರವನ್ನು ಈಗಾಗಲೆ ಆಡಳಿತ ಮಂಡಳಿ ಸಭೆಯಲ್ಲಿ ಪ್ರಸ್ತಾಪ ಮಾಡಲಾಗಿದೆ. ನಾವು ರೈತರ ಪರವಾಗಿದ್ದೇವೆ ಎಂದು ಹೇಳಿದರು. ಸಭೆಯಲ್ಲಿ ಬೆಳೆಗಾರರ ಒಕ್ಕೂಟದ ತಾಂತ್ರಿಕ ಸಲಹೆಗಾರ ಚೆಪ್ಪುಡಿರ ಶೆರಿ ಸುಬ್ಬಯ್ಯ ಸೇರಿದಂತೆ ಪ್ರಮುಖರು ಮಾತನಾಡಿದರು.

ಸಭೆಯಲ್ಲಿ ವಿವಿಧ ಸಂಘಸಂಸ್ಥೆಯ ಪ್ರಮುಖರು ಹಾಗೂ ತಾಲೂಕಿನ ವಿವಿದೆಡೆಯಿಂದ ಆಗಮಿಸಿದ ಬೆಳೆಗಾರರು ಪಾಲ್ಗೊಂಡಿದ್ದರು.