ಗೋಣಿಕೊಪ್ಪಲು,ಆ.31: ಇತ್ತೀಚೆಗೆ ಸುರಿದ ಭಾರೀ ಮಳೆ ಹಾಗೂ ಲಕ್ಷ್ಮಣ ತೀರ್ಥ ನದಿಯಲ್ಲಿ ಕಾಣಿಸಿಕೊಂಡ ಪ್ರವಾಹದಿಂದಾಗಿ ಬಾಳೆಲೆ ಮತ್ತು ಕೊಟ್ಟಗೇರಿಗೆ ಕೇವಲ 3 ಕಿ.ಮೀ. ಅಂತರದಲ್ಲಿ ಸಂಪರ್ಕ ಕಲ್ಪಿಸುವ ಹಳೆಯ ಸೇತುವೆ ಸಮೀಪದ ಬರೆ ಕುಸಿತ ಉಂಟಾಗಿದ್ದು, ತುರ್ತು ಮಳೆಹಾನಿ ಪರಿಹಾರ ಅನುದಾನ ದಿಂದ ಶಾಶ್ವತ ತಡೆಗೋಡೆ ನಿರ್ಮಾಣ ಮಾಡಲು ಗ್ರಾಮಸ್ಥರು ಒತ್ತಾಯಿಸಿದ್ದಾರೆ.

ಸುಮಾರು 1985 ರಲ್ಲಿ ದೋಣಿಕಡವು ಎಂಬಲ್ಲಿ ಸೇತುವೆ ಯೊಂದನ್ನು ನಿರ್ಮಾಣ ಮಾಡಿದ್ದು ಈ ಭಾಗದ ನೂರಾರು ಗ್ರಾಮಸ್ಥರು ಮಳೆಗಾಲದಲ್ಲಿ ಲಕ್ಷ್ಮಣ ತೀರ್ಥ ಪ್ರವಾಹ ಸಂದರ್ಭ ಬಾಳೆಲೆಗೆ ತೆರಳಲು ಇದೇ ಸಮೀಪದ ರಸ್ತೆಯನ್ನು ಬಳಸುತ್ತಿದ್ದರು. ಮಳೆಗಾಲದಲ್ಲಿ ಲಕ್ಷ್ಮಣ ತೀರ್ಥ ಪ್ರವಾಹ ಸಂದರ್ಭ ದೋಣಿ ಅಥವಾ ತೆಪ್ಪವನ್ನು ಬಳಸುತ್ತಿದ್ದ ಹಿನ್ನೆಲೆ ಈ ಭಾಗಕ್ಕೆ ದೋಣಿಕಡವು ಎಂಬ ಹೆಸರು ಬಂದಿದೆ. ಇದೀಗ ಸೇತುವೆ ಸಮೀಪ ರಸ್ತೆಯ ತಳಭಾಗ ಪ್ರವಾಹದಿಂದ ಕುಸಿಯುತ್ತಿದ್ದು, ತುರ್ತು ತಡೆಗೋಡೆ ನಿರ್ಮಿಸುವಂತೆ ಗ್ರಾಮಸ್ಥರು ಒತ್ತಾಯಿಸಿದ್ದಾರೆ.

ಬಾಳೆಲೆಯಿಂದ ಕಾನೂರು ರಸ್ತೆಯಲ್ಲಿ ಕೊಟ್ಟಗೇರಿಗೆ ತಲುಪಲು ಸುಮಾರು 10 ಕಿ.ಮೀ. ದೂರ ಕ್ರಮಿಸ ಬೇಕಿದ್ದು, ದೋಣಿಕಡವು ಮಾರ್ಗ ಕೇವಲ 3 ಕಿ.ಮೀ. ಅಂತರದಲ್ಲಿ ಬಾಳೆಲೆ ಸಂಪರ್ಕ ಸಾಧಿಸಬಹು ದಾಗಿದೆ. ಇದೇ ಮಾರ್ಗ 4 ಶಾಲಾ ಬಸ್‍ಗಳು ದಿನನಿತ್ಯ ಓಡಾಟ ನಡೆಸುತ್ತಿವೆ. ಕೊಟ್ಟಗೇರಿ ಗ್ರಾಮಸ್ಥರಿಗೆ ಅತ್ಯುಪಯುಕ್ತ ರಸ್ತೆಯಾಗಿದ್ದು ಈಗಾಗಲೇ ಜಿ.ಪಂ.ಅಭಿಯಂತರ ಪುಟ್ಟಸ್ವಾಮಿ ಅವರಿಗೆ ಮಾಹಿತಿ ನೀಡಿದ ಮೇರೆ ಸದ್ಯಕ್ಕೆ ಮರಳು ಚೀಲವನ್ನು ಪೇರಿಸಿ, ತಾತ್ಕಾಲಿಕ ತಡೆಗೋಡೆ ಮಾಡಲಾಗುವದು. ಮಳೆಗಾಲದ ನಂತರ ಶಾಶ್ವತ ತಡೆಗೋಡೆ ನಿರ್ಮಿಸ ಲಾಗುವದು ಎಂದು ತಿಳಿಸಿದ್ದಾರೆ ಎನ್ನಲಾಗಿದೆ.

ಸುಮಾರು 10 ಅಡಿ ಅಗಲದ ಕಾಂಕ್ರೀಟ್ ರಸ್ತೆ ಗದ್ದೆ ಏರಿಯ ಮೇಲೆ ಬಾಳೆಲೆ-ಕೊಟ್ಟಗೇರಿಗೆ ಸಂಪರ್ಕ ಕಲ್ಪಿಸಲಿದ್ದು, ಶಾಸಕ ಬೋಪಯ್ಯ ಅವರ ಒತ್ತಾಸೆ ಮೇರೆಗೆ ಕಾಮಗಾರಿ ನಡೆದಿತ್ತು. ಇದೀಗ ರಸ್ತೆಯನ್ನು ಸುಮಾರು 18 ರಿಂದ 20 ಅಡಿಗೆ ಅಗಲೀಕರಣಗೊಳಿಸಿದ್ದಲ್ಲಿ ವಾಹನ ಸುಗಮ ಸಂಚಾರ ಸಾಧ್ಯ. ಈ ನಿಟ್ಟಿನಲ್ಲಿ ಇಬ್ಬದಿಯೂ ಭತ್ತದ ಗದ್ದೆಗಳಿದ್ದು, ಒಕ್ಕಲಿಗರ ಕುಟುಂಬ, ಮಾಪಂಗಡ, ಪೆÇೀಡಮಾಡ ಹಾಗೂ ಮಡಿವಾಳ ಜನಾಂಗದ ಒಡೆತನದಲ್ಲಿ ರಸ್ತೆಯ ಆಸುಪಾಸಿನ ಭೂಮಿ ಇದ್ದು, ರಸ್ತೆ ಅಗಲೀಕರಣಕ್ಕೆ ಸ್ಥಳ ದಾನನೀಡಲು ಸಿದ್ಧರಿದ್ದಾರೆ ಎನ್ನಲಾಗಿದೆ.

ಸುಮಾರು ಮೂರು ಕಿ.ಮೀ. ರಸ್ತೆ ಉದ್ದಕ್ಕೂ ತಡೆಗೋಡೆಯ ಅಗತ್ಯವೂ ಇದ್ದು ಹಂತಹಂತವಾಗಿ ಯೋಜನೆ ಕಾರ್ಯಗತವಾದಲ್ಲಿ ಈ ಭಾಗದ ಗ್ರಾಮಸ್ಥರಿಗೆ ಹೆಚ್ಚಿನ ಉಪಯೋಗ ವಾಗಲಿದೆ ಎಂದು ಹಲವರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಇಂದು ‘ಶಕ್ತಿ’ ಪ್ರತಿನಿಧಿ ದೋಣಿಕಡವು ಸೇತುವೆ ಬದಿ ಕುಸಿತದ ಜಾಗಕ್ಕೆ ತೆರಳಿದ ಸಂದರ್ಭ ಕೊಡಗು ಜಿಲ್ಲಾ ಸಾರ್ವಜನಿಕ ಹಿತರಕ್ಷಣಾ ಸಮಿತಿ ಪ್ರಧಾನ ಕಾರ್ಯದರ್ಶಿ ಅರಮಣಮಾಡ ಸತೀಶ್ ದೇವಯ್ಯ, ಎಪಿಎಂಸಿ ಸದಸ್ಯ ಮಾಚಂಗಡ ಸುಜಾ ಪೂಣಚ್ಚ, ಅಳಮೇಂಗಡ ಮೋಹನ್, ಒಕ್ಕಲಿಗರ ಹರೀಶ್, ಅರಮಣಮಾಡ ವಿನು ಸೋಮಯ್ಯ, ಒಕ್ಕಲಿಗರ ಮೋಹನ್, ಪ್ರಕಾಶ್, ಮಾಚಂಗಡ ಉಮೇಶ್ ಮುತ್ತಣ್ಣ ಹಾಗೂ ಮಚ್ಚಮಾಡ ಸುಬಿ ಅಯ್ಯಪ್ಪ ರಸ್ತೆ ಅಗಲೀಕರಣ ಅವಶ್ಯಕತೆ ಕುರಿತು ಮಾಹಿತಿ ನೀಡಿದರು.

ವರದಿ: ಟಿ.ಎಲ್.ಶ್ರೀನಿವಾಸ್