ಕೂಡಿಗೆ, ಆ. 30: ರೈತರು ಬೆಳೆದ ಬೆಳೆ ಮಳೆಯಿಂದ, ಆನೆ ದಾಳಿಗಳಿಂದ ನಷ್ಟವುಂಟಾಗುತ್ತಿರುವದು ಇತ್ತೀಚಿನ ದಿನಗಳಲ್ಲಿ ಸರ್ವೆ ಸಾಮಾನ್ಯ. ಆದರೆ, ಮಂಗಣ್ಣಗಳ ಗುಂಪಿನ ಆಟಕ್ಕೆ ಬೆಳೆ ನಷ್ಟವುಂಟಾಗಿ ರೈತರು ಕಂಗಾಲಾಗಿರುವ ಘಟನೆ ಕೂಡಿಗೆ-ಕಣಿವೆ ಮಧ್ಯೆ ದಿನಂಪ್ರತಿ ನಡೆಯುತ್ತಿದೆ. ರೈತರು ಎಕರೆಗಟ್ಟಲೆ ಬೆಳೆದಿರುವ ಜೋಳ, ಗೆಣಸುಗಳ ಮೇಲೆ 150ಕ್ಕೂ ಹೆಚ್ಚು ಮಂಗಗಳ ಗುಂಪು ಧಾಳಿಯಿಂದ ರೈತರು ನಷ್ಟದಲ್ಲಿದ್ದಾರೆ.

ಮಂಗಗಳು ಮನುಷ್ಯರಂತೆ ಜೋಳದ ಹೊಲಕ್ಕೆ ದಾಳಿ ನಡೆಸಿ ಯಾರದೇ ಹೆದರಿಕೆ ಇಲ್ಲದೆ ಜೋಳಗಳನ್ನು ಮುರಿದು ಕೈಯಲ್ಲೊಂದು, ಬಾಯಲ್ಲೊಂದು ಹಿಡಿದು ತಿನ್ನುತ್ತಾ ಅವುಗಳ ಹಸಿವನ್ನು ನೀಗಿಸಿಕೊಳ್ಳುತ್ತಿವೆ. ಆದರೆ, ಇವುಗಳನ್ನು ಬೇರೆಡೆಗೆ ಓಡಿಸಲು ಈ ಭಾಗದ ರೈತರು ಹರಸಾಹಸ ಪಡುತ್ತಿದ್ದಾರೆ. ಪಟಾಕಿಗಳನ್ನು ಸಿಡಿಸಿದರೂ, ಯಾವುದಕ್ಕು ಜಗ್ಗದ ಮಂಗಗಳು ಪಟಾಕಿ ಸಿಡಿದ ನಂತರ ಯಥಾಸ್ಥಿತಿಯಲ್ಲಿ ಮನುಷ್ಯರಂತೆ ಜಮೀನಿಗೆ ದಾಳಿ ಮಾಡಿ ಮನಬಂದಂತೆ ಜೋಳವನ್ನು ಮುರಿದು ಕೊಂಡೊಯ್ಯುತ್ತಿವೆ.

ಇತ್ತ ರೈತರು ಈ ವಿಷಯಕ್ಕೆ ಸಂಬಂಧಪಟ್ಟಂತೆ ಅರಣ್ಯ ಇಲಾಖೆಗೆ ವಿಚಾರ ತಿಳಿಸಿದ್ದಾರೆ. ಅರಣ್ಯ ಇಲಾಖೆಯವರು ಮತ್ತು ರೈತರು ಮಂಗಗಳಿಗೆ ಏನು ಮಾಡುವದೆಂಬ ಯೋಚನೆಯಲ್ಲಿ ತೊಡಗಿದ್ದಾರೆ.