ಮಡಿಕೇರಿ, ಆ. 30: ನಾಪೋಕ್ಲು ಬಳಿ ಕಕ್ಕಬೆಯ ನೆಟ್ಟುಮಾಡು ಶ್ರೀ ಭಗವತಿ ದೇಗುಲ ಆವರಣದಲ್ಲಿ ಜಾನುವಾರು ಕಾಲುಗಳನ್ನು ನೇತು ಹಾಕಿ ಅಪವಿತ್ರಗೊಳಿಸಿರುವ ಘಟನೆ ಖಂಡಿಸಿ ಇಂದು ಜಿಲ್ಲೆಯ ವಿವಿಧೆಡೆ ಪ್ರತಿಭಟನೆ ನಡೆಸಲಾಯಿತು.ಜಿಲ್ಲಾ ಕೇಂದ್ರ ಮಡಿಕೇರಿ ಸೇರಿದಂತೆ ಸೋಮವಾರಪೇಟೆ, ಭಾಗಮಂಡಲ, ಚೇರಂಬಾಣೆಗಳಲ್ಲಿ ಹಿಂದೂ ಸಂಘಟನೆಗಳು ಹಾಗೂ ಬಿಜೆಪಿಯಿಂದ ಪ್ರತಿಭಟನೆ ನಡೆಸಿದ ಕುರಿತು ವರದಿಗಳು ಬಂದಿವೆ.ಮಡಿಕೇರಿ: ಕಕ್ಕಬೆ ಸಮೀಪದ ಶ್ರೀ ಭಗವತಿ ದೇವಸ್ಥಾನದ ಸ್ವಾಗತ ಕಮಾನಿಗೆ ಗೋವಿನ ಕಾಲನ್ನು ಕತ್ತರಿಸಿ ನೇತು ಹಾಕಿರುವ ಘಟನೆಯನ್ನು ಖಂಡಿಸಿ ಹಿಂದೂಪರ ಸಂಘಟನೆಗಳ ಕಾರ್ಯಕರ್ತರು ಪ್ರತಿಭಟನೆ ನಡೆಸಿ ಆರೋಪಿಗಳ ಬಂಧನಕ್ಕೆ ಆಗ್ರಹಿಸಿದರು.

ಮಡಿಕೇರಿ ನಗರ ಸೇರಿದಂತೆ ಗ್ರಾಮೀಣ ಭಾಗಗಳಾದ ಮರಗೋಡು, ಬೆಟ್ಟಗೇರಿ -ಬಕ್ಕ, ಸಂಪಾಜೆ, ಚೆಂಬು, ಚೆಟ್ಟಿಮಾನಿಗಳಲ್ಲಿ ಹಿಂದೂ ಜಾಗರಣಾ ವೇದಿಕೆ ನೇತೃತ್ವದಲ್ಲಿ ದುಷ್ಕೃತ್ಯ ಖಂಡಿಸಿ ಪ್ರತಿಭಟನೆ ನಡೆಯಿತು.

ನಗರದ ಜನರಲ್ ತಿಮ್ಮಯ್ಯ ವೃತ್ತದಲ್ಲಿ ಸುಮಾರು 15 ನಿಮಿಷಗಳ ಕಾಲ ರಸ್ತೆ ತಡೆ ನಡೆಸಿ ಆಕ್ರೋಶ ವ್ಯಕ್ತಪಡಿಸಲಾಯಿತು. ಬಳಿಕ ಮೆರವಣಿಗೆಯಲ್ಲಿ ಜಿಲ್ಲಾಡಳಿತ ಭವನಕ್ಕೆ ತೆರಳಿದ ಪ್ರತಿಭಟನಾಕಾರರು ಆರೋಪಿಗಳ ಬಂಧನಕ್ಕೆ ಒಂದು ವಾರಗಳ ಗಡುವು ನೀಡಿ ಮನವಿ ಸಲ್ಲಿಸಿದರು.

ಈ ಸಂದರ್ಭ ಹಿಂ.ಜಾ.ವೇ. ಜಿಲ್ಲಾ ಸಹಸಂಚಾಲಕ ಅಜಿತ್, ಭಜರಂಗದಳ ಜಿಲ್ಲಾ ಸಂಚಾಲಕ ಎನ್.ಕೆ. ಅಜಿತ್ ಕುಮಾರ್ ಮಾತನಾಡಿ

(ಮೊದಲ ಪುಟದಿಂದ) ಹಿಂದೂಗಳ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುವ ಕೆಲಸ ಜಿಲ್ಲೆಯಲ್ಲಿ ಪದೇಪದೇ ನಡೆಯುತ್ತಿದೆ. ಜಿಲ್ಲಾಡಳಿತ ಇಂತಹ ದುಷ್ಕೃತ್ಯಗಳ ವಿರುದ್ಧ ಸೂಕ್ತ ಕ್ರಮಕೈಗೊಳ್ಳದಿದ್ದಲ್ಲಿ ಹಿಂದೂಗಳು ಬೀದಿಗಿಳಿದು ಹೋರಾಟ ಮಾಡಬೇಕಾದ ಪರಿಸ್ಥಿತಿ ಬಂದರೆ ಕಕ್ಕಬೆ ದೇವಾಲಯ ಅಪವಿತ್ರಗೊಳಿಸಲು ಯತ್ನಿಸಿದ ಆರೋಪಿಗಳನ್ನು ಒಂದು ವಾರದೊಳಗೆ ಬಂದಿಸದಿದ್ದಲ್ಲಿ ಮುಂದಿನ ದಿನಗಳಲ್ಲಿ ಕೊಡಗು ಬಂದ್ ಕರೆ ನೀಡುವ ಎಚ್ಚರಿಕೆ ನೀಡಿದರು.

ಈ ಸಂದರ್ಭದಲ್ಲಿ ಹಿಂದೂ ಸಂಘಟನೆಗಳ ಕಾರ್ಯಕರ್ತರಾದ ಮಹೇಶ್, ಕುಮಾರ್, ಗಣೇಶ್, ನಂದೀಶ್, ಡಿ.ಹೆಚ್. ಮೇದಪ್ಪ, ಬಿಜೆಪಿ ಪ್ರಮುಖರಾದ ಬಿ.ಕೆ. ಅರುಣ್ ಕುಮಾರ್, ಮಹೇಶ್ ಜೈನಿ, ಎಸ್. ಸಿ. ಸತೀಶ್, ಮನು ಮಂಜುನಾಥ್, ಬಿ.ಕೆ. ಜಗದೀಶ್ ಹಾಗೂ ಇನ್ನಿತರರು ಇದ್ದರು.

ಸೋಮವಾರಪೇಟೆ: ನೆಟ್ಟುಮಾಡು ಭಗವತಿ ದೇವಾಲಯದ ಆವರಣದಲ್ಲಿ ಗೋವಿನ ಕಾಲುಗಳನ್ನು ಎಸೆದಿರುವ ಕ್ರಮವನ್ನು ಖಂಡಿಸಿ, ದುಷ್ಕರ್ಮಿಗಳ ಬಂಧನಕ್ಕೆ ಆಗ್ರಹಿಸಿ ಹಿಂದೂ ಜಾಗರಣಾ ವೇದಿಕೆಯ ಪದಾಧಿಕಾರಿಗಳು ಸೋಮವಾರಪೇಟೆ ಪಟ್ಟಣದಲ್ಲಿ ಪ್ರತಿಭಟನೆ ನಡೆಸಿದರು.

ಇಲ್ಲಿನ ಖಾಸಗಿ ಬಸ್ ನಿಲ್ದಾಣದ ಪುಟ್ಟಪ್ಪ ವೃತ್ತದಲ್ಲಿ ಸೇರಿದ ಕಾರ್ಯಕರ್ತರು ಘಟನೆಯನ್ನು ತೀವ್ರವಾಗಿ ಖಂಡಿಸಿದರು. ಹಿಂದೂಗಳ ಶ್ರದ್ಧಾಕೇಂದ್ರಗಳ ಮೇಲಿನ ಧಾಳಿ ಅಕ್ಷಮ್ಯ. ಇದನ್ನು ಸಹಿಸಲು ಸಾಧ್ಯವಿಲ್ಲ. ಕೊಡಗಿನಲ್ಲಿ ಕೋಮು ಭಾವನೆ ಕೆರಳಿಸಲು ಹವಣಿಸುತ್ತಿರುವ ದುಷ್ಟರನ್ನು ತಕ್ಷಣ ಬಂಧಿಸಿ ಕಠಿಣ ಶಿಕ್ಷೆ ನೀಡಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.

ತಕ್ಷಣ ಆರೋಪಿಗಳನ್ನು ಬಂಧಿಸದಿದ್ದರೆ, ಮುಂದಿನ ದಿನಗಳಲ್ಲಿ ಜಿಲ್ಲೆಯಾದ್ಯಂತ ಉಗ್ರ ಹೋರಾಟ ನಡೆಸಲಾಗುವದು. ಕೋಮು ಭಾವನೆಗಳನ್ನು ಕೆರಳಿಸಿ ಗಲಭೆ ಸೃಷ್ಟಿಸಲೆಂದೇ ಕೆಲವೊಂದು ಮತಾಂಧ ಶಕ್ತಿಗಳು ಜಿಲ್ಲೆಯಲ್ಲಿ ಕಾರ್ಯಾಚರಿಸುತ್ತಿದ್ದು, ಇಂತಹವರ ಮೇಲೆ ಜಿಲ್ಲಾಡಳಿತ ಮತ್ತು ಪೊಲೀಸ್ ಇಲಾಖೆ ಹದ್ದಿನ ಕಣ್ಣಿಡಬೇಕು. ಹಿಂದೂಗಳ ಆರಾಧನಾಲಯಗಳ ಅಪವಿತ್ರತೆಯನ್ನು ಸಹಿಸಿಕೊಳ್ಳಲು ಸಾಧ್ಯವಿಲ್ಲ ಎಂದು ಪ್ರತಿಭಟನೆಯಲ್ಲಿ ಭಾಗಿಯಾಗಿದ್ದ ವಿಧಾನ ಪರಿಷತ್ ಮಾಜೀ ಸದಸ್ಯ ಎಸ್.ಜಿ. ಮೇದಪ್ಪ ಹೇಳಿದರು.

ಜಿ.ಪಂ. ಉಪಾಧ್ಯಕ್ಷೆ ಲೋಕೇಶ್ವರಿ ಗೋಪಾಲ್, ಸದಸ್ಯ ಬಿ.ಜೆ. ದೀಪಕ್, ಹಿಂದೂ ಜಾಗರಣಾ ವೇದಿಕೆಯ ಪದಾಧಿಕಾರಿಗಳಾದ ಸುಭಾಷ್ ತಿಮ್ಮಯ್ಯ, ರಮೇಶ್, ಉಮೇಶ್, ದರ್ಶನ್ ಜೋಯಪ್ಪ, ರವಿ, ಅಶೋಕ್, ತಾಕೇರಿ ಪೊನ್ನಪ್ಪ ಸೇರಿದಂತೆ ಇತರ ಕಾರ್ಯಕರ್ತರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

ಕುಶಾಲನಗರ: ಕಕ್ಕಬೆಯಲ್ಲಿ ದನದ ಕಾಲುಗಳನ್ನು ದೇವಾಲಯದ ಆವರಣದಲ್ಲಿ ಇರಿಸಿದ್ದ ಕೃತ್ಯವನ್ನು ಖಂಡಿಸಿ ಹಿಂದೂಪರ ಸಂಘಟನೆಗಳ ಕಾರ್ಯಕರ್ತರು ಕುಶಾಲನಗರದಲ್ಲಿ ಪ್ರತಿಭಟನೆ ನಡೆಸಿದರು.

ಪಟ್ಟಣದ ಫೀಲ್ಡ್ ಮಾರ್ಷಲ್ ಕಾರ್ಯಪ್ಪ ವೃತ್ತದಲ್ಲಿ ಪ್ರತಿಭಟನೆ ನಡೆಸಿದ ಕಾರ್ಯಕರ್ತರು ಕಿಡಿಗೇಡಿಗಳ ವಿರುದ್ಧ ಧಿಕ್ಕಾರ ಕೂಗಿದರು. ಈ ಕೃತ್ಯ ಎಸಗಿದವರನ್ನು ಕೂಡಲೆ ಪತ್ತೆ ಹಚ್ಚಿ ಕಾನೂನು ಕ್ರಮಕೈಗೊಳ್ಳಬೇಕೆಂದು ಆಗ್ರಹಿಸಿದರು.

ಈ ಸಂದರ್ಭ ಮಾತನಾಡಿದ ಕೊಡಗು ಜಿಲ್ಲಾ ಬಿಜೆಪಿ ಅಧ್ಯಕ್ಷ ಬಿ.ಬಿ. ಭಾರತೀಶ್, ಕಿಡಿಗೇಡಿಗಳು ಗೋವಿನ ಕಾಲುಗಳನ್ನು ಕಡಿದು ದೇವಾಲಯದಲ್ಲಿ ಕಟ್ಟುವ ಮೂಲಕ ಹಿಂದೂಗಳ ಭಾವನೆಗೆ ಧಕ್ಕೆ ಉಂಟುಮಾಡಿದ್ದಾರೆ. ರಾಜ್ಯ ಸರಕಾರ ಹಿಂದೂ ವಿರೋಧಿ ಆಡಳಿತದಿಂದಾಗಿ ಕೊಡಗಿನಲ್ಲಿ ಹಿಂದೂಗಳ ಮೇಲಿನ ದೌರ್ಜನ್ಯ ಹೆಚ್ಚುತ್ತಿದೆ. ದುಷ್ಟರ ಗುಂಪುಗಳು ಜಿಲ್ಲೆಯಲ್ಲಿ ಸಕ್ರಿಯವಾಗಿದೆ ಎಂದು ಆರೋಪಿಸಿದರÀು.

ಇದೇ ಸಂದರ್ಭ ಪ್ರತಿಭಟನಾಕಾರರು ಮಾನವ ಸರಪಳಿ ರಚಿಸಿ ಕೆಲಕಾಲ ರಸ್ತೆ ತಡೆ ನಡೆಸಿ ಸರಕಾರದ ವಿರುದ್ಧ ಘೋಷಣೆ ಕೂಗಿದರು.

ಬಿಜೆಪಿ ಯುವ ಮೋರ್ಚಾ ಜಿಲ್ಲಾ ಅಧ್ಯಕ್ಷ ಕಾಳನ ರವಿ, ಹಿರಿಯರಾದ ಜಿ.ಎಲ್. ನಾಗರಾಜ್, ಗಪ್ಪಣ್ಣ, ತಾಲೂಕು ಅಧ್ಯಕ್ಷ ಮಹೇಶ್ ತಿಮ್ಮಯ್ಯ, ಧನಂಜಯ, ಹಿಂದೂಪರ ಸಂಘಟನೆಗಳ ಪ್ರಮುಖರಾದ ಕೆ.ಕೆ. ದಿನೇಶ್, ಮಂಜುನಾಥ್, ಸೋಮವಾರಪೇಟೆ ಕ್ಷೇತ್ರಾಧ್ಯಕ್ಷ ಎಂ.ಎನ್.ಕುಮಾರಪ್ಪ, ನಗರಾಧ್ಯಕ್ಷ ಕೆ.ಜಿ.ಮನು, ಯುವಮೋರ್ಚಾ ತಾಲೂಕು ಪ್ರಧಾನ ಕಾರ್ಯದರ್ಶಿ ಎಂ.ಡಿ.ಕೃಷ್ಣಪ್ಪ, ನಗರ ಘಟಕ ಕಾರ್ಯದರ್ಶಿ ನಿಡ್ಯಮಲೆ ದಿನೇಶ್, ಪಟ್ಟಣ ಪಂಚಾಯಿತಿ ಮಾಜಿ ಅಧ್ಯಕ್ಷ ಎಂ.ಎಂ.ಚರಣ್, ಪ್ರಮುಖರಾದ ಅನೀಶ್, ನವನೀತ್ ಮತ್ತಿತರರು ಇದ್ದರು.

ಭಾಗಮಂಡಲ ಬಂದ್ : ದೇವಾಲಯ ಅಪವಿತ್ರ ಕೃತ್ಯ ಖಂಡಿಸಿ ಹಿಂದೂಪರ ಸಂಘಟನೆಗಳಿಂದ ಅರ್ಧ ಗಂಟೆ ಸಮಯ ಪಟ್ಟಣ ಬಂದ್ ಮೂಲಕ ಪ್ರತಿಭಟಿಸಲಾಯಿತು. ಪ್ರಮುಖರಾದ ರಾಜ ರೈ, ಶಿವಕುಮಾರ್, ಜಿ.ಪಂ. ಸದಸ್ಯ ಕುಮಾರ್, ಮಾಜಿ ಸದಸ್ಯ ರಾಜೀವ್, ಗ್ರಾ.ಪಂ. ಸದಸ್ಯ ಪುರುಷೋತ್ತಮ ಮೊದಲಾದವರು ಪಾಲ್ಗೊಂಡಿದ್ದರು. ಭಾಗಮಂಡಲ - ಕರಿಕೆ ಮಾರ್ಗ ಸಂಚಾರ ಸ್ಥಗಿತಗೊಳಿಸಲಾಗಿತ್ತು.

ಚೇರಂಬಾಣೆ : ಚೇರಂಬಾಣೆಯಲ್ಲಿಯೂ ಘಟನೆ ಖಂಡಿಸಿ ಹಿಂದೂ ಸಂಘಟನೆಗಳ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. ಸಂಜೆ 6 ರಿಂದ 6.30ರ ತನಕ ಬಂದ್ ಮುಖಾಂತರ ಅಸಮಾಧಾನ ವ್ಯಕಪಡಿಸಿದರಲ್ಲದೆ, ತಪ್ಪಿತಸ್ಥರ ವಿರುದ್ಧ ಕಠಿಣ ಕಾನೂನು ಕ್ರಮಕ್ಕೆ ಆಗ್ರಹಿಸಿದರು.

ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರುಗಳು, ಜಿಲ್ಲೆಯಲ್ಲಿ ಶಾಂತಿ ಕದಡುವ ಯತ್ನದೊಂದಿಗೆ ಹಿಂದೂಗಳ ಭಾವನೆಗೆ ಘಾಸಿ ಉಂಟು ಮಾಡುವ ಇಂಥ ಕೃತ್ಯಗಳನ್ನು ಸಮಾಜ ಸಹಿಸದು ಎಂದು ಆಕ್ರೋಶ ವ್ಯಕ್ತಪಡಿಸಿದ್ದು, ಪೊಲೀಸ್ ಇಲಾಖೆ ದುಷ್ಕರ್ಮಿಗಳ ಮೇಲೆ ಕಠಿಣ ಕ್ರಮ ಜರುಗಿಸಬೇಕೆಂದು ಒತ್ತಾಯಿಸಿದರು.

ವರದಿ : ವಿಜಯ್, ಕೆ.ಡಿ. ಸುನಿಲ್, ರಾಜು ರೈ, ಸಿಂಚು.