ಗೋಣಿಕೊಪ್ಪಲು, ಆ.30: ಬಾಳೆಲೆ, ನೊಕ್ಯ, ನಿಟ್ಟೂರು, ಕಾನೂರು, ಕೆ.ಬಾಡಗ, ದೇವನೂರು, ನಾಲ್ಕೇರಿ, ಕೋತೂರು, ಕುಟ್ಟ ಒಳಗೊಂಡಂತೆ ಸೂಕ್ಷ್ಮ ಪರಿಸರ ತಾಣಕ್ಕೆ ಒಳಪಡುವ ಈ ವಿಭಾಗದ ಗ್ರಾಮಸ್ಥರು ಇಂದು ಬಾಳೆಲೆಯಲ್ಲಿ ಸಭೆ ಸೇರಿ ಸೆ.25 ಕ್ಕೂ ಮುನ್ನ ಬೆಂಗಳೂರಿಗೆ ನಿಯೋಗ ತೆರಳಿ ಅನುಷ್ಠಾನಕ್ಕೆ ವಿರೋಧ ವ್ಯಕ್ತಪಡಿಸುವದು ಹಾಗೂ ಕೇಂದ್ರ ಅರಣ್ಯ ಮತ್ತು ಪರಿಸರ ಇಲಾಖೆಗೂ ಕಸ್ತೂರಿರಂಗನ್ ವರದಿ ಅನುಷ್ಠಾನದಿಂದ ಜನಜೀವನದ ಮೇಲೆ ಆಗುವ ದುಷ್ಪರಿಣಾಮವನ್ನು ಮನವರಿಕೆ ಮಾಡುವ ಮೂಲಕ ನಿರಂತರ ಪ್ರತಿಭಟನೆ ಹಮ್ಮಿಕೊಳ್ಳಲು ಇಂದಿನ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಯಿತು.ಬಾಳೆಲೆ ಕೊಡವ ಸಮಾಜ ಆವರಣದಲ್ಲಿ ಇಂದು ನಡೆದ ಸಭೆಯಲ್ಲಿ ಮೊದಲಿಗೆ ಮಾತನಾಡಿದ ಮಾಜಿ ಎಂ.ಎಲ್.ಸಿ.ಅರುಣ್ ಮಾಚಯ್ಯ 1963ರಲ್ಲಿಯೇ ಅರಣ್ಯ ಕಾಯ್ದೆಗೆ ತಿದ್ದುಪಡಿ ತರಲಾಯಿತು. 1972 ರಲ್ಲಿ ವನ್ಯಜೀವಿ ಸಂರಕ್ಷಣಾ ಕಾಯ್ದೆ ಜಾರಿಗೆ ತರಲಾಯಿತು. ಮತ್ತೆ 1991 ರಂದು ಅರಣ್ಯ ಕಾಯ್ದೆಗೆ ತಿದ್ದುಪಡಿ ತರಲಾಯಿತು. 2006 ರಲ್ಲಿ ರಕ್ಷಿತಾರಣ್ಯ ಕಾಯ್ದೆಗೆ ತಿದ್ದುಪಡಿಯೊಂದಿಗೆ 20-12-2007 ರಲ್ಲಿ 1980 ರ ಅರಣ್ಯ ಸಂರಕ್ಷಣಾ ಕಾಯ್ದೆ, ಹಾಗೂ 1999ರಲ್ಲಿ ಉಚ್ಛ ನ್ಯಾಯಾಲಯದ ಆದೇಶದಂತೆ ಸೂಕ್ಷ್ಮ ಪರಿಸರ ತಾಣ ಕಾಯ್ಧೆಯನ್ನು ಕಡ್ಡಾಯಗೊಳಿಸಲಾಯಿತು. ಆ ನಂತರ 2011ರ ನಂತರ ಕಸ್ತೂರಿ ರಂಗನ್ ವರದಿ ಆಧಾರದ ಮೇಲೆ ಲಕ್ಷಾಂತರ ಜನತೆಯ ವಿರೋಧದ ನಡುವೆಯೂ ಸೂಕ್ಷ್ಮ ಪರಿಸರ ತಾಣ ಅನುಷ್ಠಾನಗೊಳಿಸಲು ಹುನ್ನಾರ ಆರಂಭವಾಯಿತು. ಇದಕ್ಕೆ ಎಲ್ಲರ ವ್ಯಾಪಕ ವಿರೋಧವಿದೆ ಎಂದು ಹೇಳಿದರು.

ಕುಟ್ಟ ಬಾಡಗ ನಿವಾಸಿ ಎಂ.ಎಂ.ರಾಜಾತಿಮ್ಮಯ್ಯ, ಇದೀಗ ಕೆಲವೊಂದು ಸಡಿಲಿಕೆಯೊಂದಿಗೆ ಅಳವಡಿಕೆಯಾಗಿರುವ ಸೂಕ್ಷ್ಮ ಪರಿಸರ ತಾಣದ ಸಾಧಕ ಬಾಧಕವನ್ನು ವಿವರಿಸಿದರು. ಜಿಲ್ಲೆಯಿಂದ ಕಸ್ತೂರಿ ರಂಗನ್ ವರದಿ ಜಾರಿಗೆ ಮೂರು ಬಾರಿ ವಿರೋಧ ವ್ಯಕ್ತವಾದರೂ ಮತ್ತೆ ಮತ್ತೆ ಏರಿಕೆಯಾಗುತ್ತಿರುವ ಬಗ್ಗೆ ಆತಂಕ ವ್ಯಕ್ತಪಡಿಸಿದರು. ಒಟ್ಟಿನಲ್ಲಿ ಮೈಸೂರಿನಲ್ಲಿರುವ ಮೇಲುಸ್ತುವಾರಿ ಸಮಿತಿಯಿಂದ ಎಲ್ಲದಕ್ಕೂ ಅನುಮತಿ ಹೊಂದುವಂತಾಗಬೇಕು. ಈ ಹಂತದಲ್ಲಿ ರೈತರು, ಕೃಷಿಕರು, ಗ್ರಾಮಸ್ಥರು ಶೋಷಣೆಗೆ

(ಮೊದಲ ಪುಟದಿಂದ) ಒಳಗಾಗುವದೇ ಅಧಿಕ ಎಂದು ಮಾಹಿತಿ ನೀಡಿದರು. ಸಭೆಯಲ್ಲಿ ತೀತಿರ ಧರ್ಮಜ ಅವರನ್ನು ಹೋರಾಟ ಸಮಿತಿಯ ಸಂಚಾಲಕರನ್ನಾಗಿ ಆಯ್ಕೆ ಮಾಡಲಾಯಿತು. ಪರಿಸರವಾದಿಗಳು ನಿರಂತರ ಕೊಡಗಿನ ಜನರ ಮೇಲೆ ಚೆಲ್ಲಾಟವಾಡುತ್ತಿದ್ದಾರೆ. 2011 ರಿಂದ ವನ್ಯಜೀವಿ ಸೂಕ್ಷ್ಮ ಪರಿಸರ ವಲಯ, ಸೂಕ್ಷ್ಮ ಪರಿಸರ ತಾಣ ಇತ್ಯಾದಿ ಭೂತದ ಕಾಟ ಆರಂಭವಾಗಿದೆ. ಒಟ್ಟು 8 ಜಿಲ್ಲೆಗಳಲ್ಲಿ ಸೂಕ್ಷ್ಮ ಪರಿಸರ ತಾಣ ಅನುಷ್ಟಾನಗೊಳ್ಳುತ್ತಿದ್ದು ಕೊಡಗು ಜಿಲ್ಲೆಯಿಂದ ಮಾತ್ರಾ ವ್ಯಾಪಕ ಪ್ರತಿರೋಧ ವ್ಯಕ್ತವಾಗುತ್ತಿದೆ. ಮೂರು ಬಾರಿ ವಿರೋಧಿಸಿದರೂ ಇದೀಗ ಮತ್ತೆ ತಿದ್ದುಪಡಿಗಳೊಂದಿಗೆ ಅನುಷ್ಟಾನಗೊಳಿಸಲು ಯತ್ನಿಸಲಾಗುತ್ತದೆ ಎಂದು ಆರೋಪಿಸಿದರು.

ಬೃಹ್ಮಗಿರಿ, ಪುಷ್ಪಗಿರಿ ಹಾಗೂ ತಲಕಾವೇರಿಯ ಸರಹದ್ದನ್ನು ಸೂಕ್ಷ್ಮ ಪರಿಸರ ತಾಣವಾಗಿ ಘೋಷಣೆ ಮಾಡುವ ಹಿಂದೆ ವಿದೇಶದಿಂದ ಹಣ ತರುವ ದುರುದ್ಧೇಶ ಇರಬಹುದು. ರಾಜ್ಯ 35 ವಿಧಾನ ಸಭಾ ಸದಸ್ಯರು ವಿರೋಧ ವ್ಯಕ್ತಪಡಿಸಿದ್ದರೂ ಮತ್ತೆ ಮತ್ತೆ ಹೇರಲಾಗುತ್ತಿದೆ. ಹೋರಾಟ ರಾಜಕೀಯ ರಹಿತವಾಗಿ ಕೇವಲ ಶ್ರೀಮಂತ ವ್ಯಕ್ತಿಗಳಲ್ಲದೆ ಗಿರಿಜನರು, ಯೋಜನೆ ಅನುಷ್ಠಾನದಿಂದ ತೊಂದರೆಗೊಳಗಾಗುವ ಎಲ್ಲರನ್ನೂ ಒಗ್ಗೂಡಿಸಿ ಪ್ರತಿಭಟನೆ ನಡೆಸಬೇಕಾಗಿದೆ ಎಂದು ಅಭಿಪ್ರಾಯಪಟ್ಟರು. ಕಾನೂರಿನ ಮಾಚಿಮಾಡ ರವೀಂದ್ರ ಅವರು ಮಾತನಾಡಿ, ರಾಜಕಾರಣಿಗಳು ಯಾಕೆ ಸುಮ್ಮನಿದ್ದಾರೆ? ರಾಜ್ಯಸಭೆ, ಲೋಕಸಭೆ, ಶಾಸಕರು ಹಾಗೂ ಪರಿಸರವಾದಿಗಳನ್ನೂ ಕರೆಸಿ ಸಭೆ ನಡೆಸುವ. ಇವರೆಲ್ಲಾ ಯಾಕೆ ಸುಮ್ಮನಿದ್ದಾರೆ ಎಂದು ಪ್ರಶ್ನಿಸಿದರು. ಪೆÇನ್ನಂಪೇಟೆ ಕೊಡವ ಸಮಾಜ ಅಧ್ಯಕ್ಷ ಪೆÇನ್ನಿಮಾಡ ಗೋಪಾಲ್ ಹಾಗೂ ಬಾಳೆಲೆ ಕೊಡವ ಸಮಾಜ ಅಧ್ಯಕ್ಷ ಮಲಚೀರ ಬೋಸ್ ಅವರು ಮಾತನಾಡಿ ಯೋಜನೆ ಅನುಷ್ಠಾನಕ್ಕೆ ತಮ್ಮ ತೀವ್ರ ವಿರೋಧ ವ್ಯಕ್ತಪಡಿಸಿದರು.

ಕುಟ್ಟ ಕೊಡವ ಸಮಾಜ ಅಧ್ಯಕ್ಷ ಕಳ್ಳಿಚಂಡ ವಿಷ್ಣುಕಾರ್ಯಪ್ಪ ಮಾತನಾಡಿ, ಕುಶಾಲನಗರದವರೆಗೆ ರೈಲು ಬರಲಿ, ದಕ್ಷಿಣ ಕೊಡಗಿಗೆ ಬೇಕಿಲ್ಲ. ನಮಗೆ ನಾಲ್ಕುಪಥ, ಆರು ಪಥದ ರಸ್ತೆ ಬೇಡ. ದ್ವಿಪಥ ರಸ್ತೆ ಸಾಕು. ಹೇರ್ಮಾಡುವಿನಲ್ಲಿ ಹೈಟೆನ್ಷನ್ ವಿದ್ಯುತ್ ಲೇನ್ ವಿರುದ್ಧ ಮೂರು ತಿಂಗಳು ಪ್ರತಿಭಟನೆ ನಡೆಸಿ ಏನಾಯಿತು? ಕೊಡಗಿಗೆ ಹೈಟೆನ್ಷನ್ ಲೇನ್ ಮಾಲ್ದಾರೆ ಮೂಲಕ ಹಾದು ಬರುವಾಗಲೇ ಹೋರಾಟ ರೂಪಿಸಬೇಕಿತ್ತು. ಯೋಜಿತವಾಗಿ ಹೋರಾಟ ಮಾಡುವ ಅಗತ್ಯವಿದೆ ಎಂದು ಅಭಿಪ್ರಾಯಪಟ್ಟರು.

ಕೊಡಗಿನಲ್ಲಿದ್ದ ಗಿರಿಜನರನ್ನು ಪುನರ್ವಸತಿ ನೆಪದಲ್ಲಿ ವೀರನಹೊಸಳ್ಳಿ ಇತ್ಯಾದಿ ಹೊರಜಿಲ್ಲೆಗೆ ಸ್ಥಳಾಂತರ ಮಾಡಲಾಗಿದೆ. ಕಾಡು ಪ್ರಾಣಿಗಳಿಗೆ ಅರಣ್ಯದಲ್ಲಿ ನೀರು ಆಹಾರ ಸಿಗುತ್ತಿಲ್ಲ. ಬೆಳೆಗಾರರ ತೋಟಗಳೇ ಅವುಗಳಿಗೆ ಆಶ್ರಯ ತಾಣ. ಕೊಡಗಿನ ಶ್ರೀಮಂತ ಸಂಸ್ಕೃತಿ ಉಳಿಯ ಬೇಕಿದ್ದರೆ ಕೊಡಗಿನ ಮೇಲೆ ನಿರಂತರವಾಗಿ ನಡೆಯುತ್ತಿರುವ ಷಡ್ಯಂತ್ರದ ವಿರುದ್ಧ ಹೋರಾಟ ನಡೆಸಬೇಕಾಗಿದೆ ಎಂದರು. ಕೊಡಗು ಬಿಜೆಪಿ ಮಹಿಳಾ ಘಟಕದ ಅಧ್ಯಕ್ಷೆ ಮಾಪಂಗಡ ಯಮುನಾ ಚಂಗಪ್ಪ ಅವರು ಮಾತನಾಡಿದರು. ಜಿ.ಪಂ.ಸದಸ್ಯ ಬಾನಂಡ ಪ್ರಥ್ಯು ನೇತೃತ್ವದಲ್ಲಿ ಇಂದು ನಡೆದ ಸಭೆಯಲ್ಲಿ ಎಪಿಎಂಸಿ ಸದಸ್ಯ ಮಾಚಂಗಡ ಸುಜಾ ಪೂಣಚ್ಚ ಉಪಸ್ಥಿತರಿದ್ದರು. ಸಭೆಯಲ್ಲಿ ಸಾರ್ವಜನಿಕರ ಪರವಾಗಿ ಅಳಮೇಂಗಡ ಬೋಸ್ ಮಂದಣ್ಣ, ಕಳ್ಳಿಚಂಡ ನಟರಾಜ್, ಅಳಮೇಂಗಡ ವಿವೇಕ್, ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಚಿಮ್ಮಣಮಾಡ ಕೃಷ್ಣಾ ಮುಂತಾದವರು ಮಾತನಾಡಿದರು.