ಮಡಿಕೇರಿ, ಜು. 26: ಬಾಕಿ ಇರುವ ವಿವಾಹ ಪಿಂಚಣಿ, ವೈದ್ಯಕೀಯ ಸೌಲಭ್ಯ ಸೇರಿದಂತೆ ವಿವಿಧ ಸೌಲಭ್ಯಗಳನ್ನು ಕಾರ್ಮಿಕರಿಗೆ ಶೀಘ್ರದಲ್ಲಿಯೇ ಒದಗಿಸಬೇಕು ಎಂದು ಒತ್ತಾಯಿಸಿ ಜಿಲ್ಲಾ ಕಟ್ಟಡ ನಿರ್ಮಾಣ ಕಾರ್ಮಿಕರ ಸಂಘದ ವತಿಯಿಂದ ನಗರದಲ್ಲಿ ಪ್ರತಿಭಟನೆ ನಡೆಯಿತು. ನಗರದ ಗಾಂಧಿ ಮೈದಾನದಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಮೆರವಣಿಗೆ ನಡೆಸಿದ ಕಾರ್ಮಿಕರು ಸರಕಾರದ ವಿರುದ್ಧ ಅಕ್ರೋಶ ವ್ಯಕ್ತ ಪಡಿಸಿ, ತಮ್ಮ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿದರು. ಈ ಸಂದರ್ಭ ಸಂಘದ ಪ್ರಧಾನ ಕಾರ್ಯದರ್ಶಿ ಎ.ಸಿ. ಸಾಬು, ಕಸ್ತೂರಿ ರಂಗನ್ ವರದಿಯನ್ನು ಹಿಂಪಡೆಯಬೇಕು ಎಂದು ಒತ್ತಾಯಿಸಿದರು.

ಜಿಲ್ಲಾ ಅಧ್ಯಕ್ಷ ಸಾಲಿ ಪೌಲೋಸ್, ಜಿಲ್ಲಾ ಉಪಕಾರ್ಯದರ್ಶಿಗಳಾದ ಕೆ.ಕೆ ಹರಿದಾಸ್, ರಿತೀಶ್, ಖಜಾಂಚಿ ಹಮೀದ್, aಕಾರ್ಮಿಕ ಮುಖಂಡ ಎನ್.ಡಿ ಕುಟ್ಟಪ್ಪ, ಸದಸ್ಯ ಪಾಪಚ್ಚ ಸೇರಿದಂತೆ ಮತ್ತಿತರರು ಹಾಜರಿದ್ದರು.

ಬೇಡಿಕೆಗಳು: ಕಟ್ಟಡ ಕಾರ್ಮಿಕರ ಕಲ್ಯಾಣ ಮಂಡಳಿಯಲ್ಲಿ ಆನ್‍ಲೈನ್ ನೋಂದಣಿ ಮತ್ತು ನವೀಕರಣದಲ್ಲಿ ಉಂಟಾಗುತ್ತಿರುವ ಸಮಸ್ಯೆಗಳನ್ನು ಬಗೆಹರಿಸಬೇಕು.

ವಲಸೆ ಕಾರ್ಮಿಕರು ಕಲ್ಯಾಣ ಮಂಡಳಿಯ ಸೌಲಭ್ಯ ಪಡೆಯಲು ಗುರುತಿನ ಚೀಟಿ ನೀಡಬೇಕು. ಕಟ್ಟಡ ಕಾರ್ಮಿಕರಿಗೆ ವಸತಿ ಯೋಜನೆಯನ್ನು ಸರಕಾರದ ಅನುದಾನದಿಂದ ಜಾರಿಗೊಳಿಸಲು ಮುಖ್ಯಮಂತ್ರಿಗಳು ಚರ್ಚೆ ನಡೆಸಬೇಕು.

ಕಲ್ಯಾಣ ಮಂಡಳಿಯಲ್ಲಿ ಸಿಐಟಿಯುಸಿ ನೇತೃತ್ವದ ಕಟ್ಟಡ ಫೆಡರೇಷನ್‍ಗೆ ಪ್ರಾತಿನಿಧ್ಯ ನೀಡಬೇಕು

ನೋಂದಣಿ ಸಮಯದಲ್ಲಿ ಹಾಗೂ ಪರಿಶೀಲನಾ ನೆಪದಲ್ಲಿ ಕಾರ್ಮಿಕ ನಿರೀಕ್ಷಕರು ಮತ್ತು ಸಿಬ್ಬಂದಿಗಳಿಂದ ನಡೆಯುತ್ತಿರುವ ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಬೇಕು ಎಂದು ಆಗ್ರಹಿಸಿದರು.