ಮಡಿಕೇರಿ, ಜು. 26: ಒಂದು ವರ್ಷದಲ್ಲಿ ಒಂದೂವರೆ ಲಕ್ಷದಷ್ಟು ಮಂದಿ ಅಪಘಾತದಲ್ಲಿಯೇ ಸಾವನ್ನಪ್ಪುತ್ತಿರುವದು ದೇಶದ ದುರಂತವಾಗಿದೆ ಎಂದು ಸಾರಿಗೆ ಇಲಾಖೆಯ ವಾಹನ ತಪಾಸಣಾ ಅಧಿಕಾರಿ ಸಿ.ಪಿ. ಅನಿಲ್ ಕುಮಾರ್ ವಿಷಾದಿಸಿದರು.

ನಗರದ ಹೋಟೆಲ್ ಸಮುದ್ರ ಸಭಾಂಗಣದಲ್ಲಿ ನಡೆದ ಮಡಿಕೇರಿ ನಗರದ ಆಟೋ ಮಾಲೀಕ, ಚಾಲಕರ ಸಂಘದ 2016-17 ನೇ ಸಾಲಿನ ವಾರ್ಷಿಕ ಮಹಾಸಭೆಯಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಅವರು ಮಾತನಾಡಿದರು.

ದೇಶದಲ್ಲಿ ಅಪಘಾತ ಪ್ರಕರಣಗಳು ಮಾನವನ ತಪ್ಪಿನಿಂದ ಉಂಟಾಗುತ್ತದೆ. ವಾಹನ ಓಡಿಸುವ ಸಂದರ್ಭ ಮೊಬೈಲ್ ಬಳಸುವದು ಕೂಡ ಇದಕ್ಕೆ ಕಾರಣ. ಮೊಬೈಲ್ ನಮ್ಮ ಅಗತ್ಯಕ್ಕೆ ಬಳಕೆಯಾಗಬೇಕೆ ಹೊರತು, ಅದುವೇ ನಮ್ಮ ಜೀವನವಾಗಬಾರದು ಎಂದ ಅವರು, ಚಾಲಕರು ವಾಹನ ಚಲಾವಣೆ ಸಂದರ್ಭ ಮೊಬೈಲ್‍ನಿಂದ ದೂರವಿರಬೇಕು ಎಂದು ಸಲಹೆ ನೀಡಿದರು.

ಒಬ್ಬರ ತಪ್ಪಿನಿಂದ ಹತ್ತು ಜನರಿಗೆ ಸಮಸ್ಯೆ ಉಂಟಾಗಬಾರದು. ತಮ್ಮ ಕೆಲಸದ ಜೊತೆಗೆ ನಿರಂತರವಾಗಿ ಸಮಾಜಸೇವೆಯಲ್ಲೂ ಕೂಡ ತೊಡಗಿಕೊಂಡಿರಬೇಕು. ತಮ್ಮ ವಾಹನವನ್ನು ಸುಸ್ಥಿತಿಯಲ್ಲಿಟ್ಟು ಕೊಳ್ಳುವದು ಚಾಲಕರ ಕರ್ತವ್ಯ ಎಂದರು.

ಇದೇ ಸಂದರ್ಭ 2016-17ನೇ ಸಾಲಿನಲ್ಲಿ 10ನೇ ತರಗತಿ ಹಾಗೂ ದ್ವಿತೀಯ ಪಿಯುಸಿಯಲ್ಲಿ ಉತ್ತೀರ್ಣರಾದ ಸಂಘದ ಸದಸ್ಯರ ಮಕ್ಕಳನ್ನು ಸನ್ಮಾನಿಸಲಾಯಿತು. 15-16ನೇ ಸಾಲಿನ ಮಹಾಸಭೆಯ ನಡಾವಳಿ ಹಾಗೂ 16-17ನೇ ಸಾಲಿನ ಆಡಳಿತ ಮಂಡಳಿಯ ವರದಿಯನ್ನು ಸಂಘದ ಪದಾಧಿಕಾರಿಗಳು ವಾಚಿಸಿದರು. 16-17 ನೇ ಸಾಲಿನ ಲೆಕ್ಕಪತ್ರ ಮಂಡನೆ ಮಾಡಲಾಯಿತು.

ಸಂಘದ ಅಧ್ಯಕ್ಷ ಎ.ಅರುಣ್ ಕುಮರ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಸಂಘದ ಜಿಲ್ಲಾಧ್ಯಕ್ಷ ಮೇದಪ್ಪ, ಪ್ರಧಾನ ಕಾರ್ಯದರ್ಶಿ ಬಿ.ಸಿ. ದಿನೇಶ್, ಉಪಾಧ್ಯಕ್ಷ ಬಿ.ಡಿ ಸುಂದರ, ಖಜಾಂಚಿ ಪಿ.ವಿ. ಆನಂದ ಕುಮಾರ್ ಮತ್ತಿತರರು ಪಾಲ್ಗೊಂಡಿದ್ದರು.