ಕುಶಾಲನಗರ, ಜು. 7: ಕುಶಾಲನಗರ ಪಟ್ಟಣ ಸೇರಿದಂತೆ ಸುತ್ತಮುತ್ತಲಿನ ವ್ಯಾಪ್ತಿಯಲ್ಲಿ ಮಕ್ಕಳು ಜ್ವರ ಬಾಧಿತರಾಗುತ್ತಿರುವ ಪ್ರಕರಣಗಳು ಹೆಚ್ಚಳಗೊಳ್ಳುತ್ತಿದೆ. ದಿನನಿತ್ಯ ಕುಶಾಲನಗರ ಸರಕಾರಿ ಆಸ್ಪತ್ರೆ ಸೇರಿದಂತೆ ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆಗೆ ಮಕ್ಕಳನ್ನು ಪೋಷಕರು ಕರೆ ತರುತ್ತಿರುವ ದೃಶ್ಯ ಸಾಮಾನ್ಯವಾಗಿದೆ.
ಶೀತಜ್ವರ, ಡೆಂಗ್ಯು ಮೊದಲಾದ ಖಾಯಿಲೆಗಳು ಹಬ್ಬುತ್ತಿದ್ದು ಕುಶಾಲನಗರ ಸರಕಾರಿ ಸಮುದಾಯ ಕೇಂದ್ರದಲ್ಲಿ ದಾಖಲಾಗುತ್ತಿರುವ ಹೊರ ರೋಗಿಗಳಲ್ಲಿ ಶೇ. 25 ರಷ್ಟು ಸಂಖ್ಯೆಯಲ್ಲಿ ಮಕ್ಕಳು ಚಿಕಿತ್ಸೆ ಪಡೆಯುತ್ತಿರುವದು ದಾಖಲೆಗಳಲ್ಲಿ ಕಂಡುಬಂದಿದೆ. ಈ ನಡುವೆ ಔಷಧಿ ಅಂಗಡಿಗಳಲ್ಲಿ ಕೂಡ ಪೋಷಕರು ಮಕ್ಕಳೊಂದಿಗೆ ಔಷಧಿಗಳ ಖರೀದಿಯ ಭರಾಟೆಯಲ್ಲಿ ನಿಂತಿರುವ ದೃಶ್ಯ ಕಾಣಬಹುದು.
ಶುಚಿತ್ವದ ಕೊರತೆ, ಸೊಳ್ಳೆಗಳ ಹಾವಳಿ ಮುಂತಾದ ಕಾರಣಗಳಿಂದ ಈ ರೋಗಗಳು ಹಬ್ಬುವ ಸಾಧ್ಯತೆಗಳು ಅಧಿಕವಾಗಿವೆ ಎಂದು ಸಮುದಾಯ ಕೇಂದ್ರದ ಮೂಲಗಳು ತಿಳಿಸಿವೆ. ಕುಶಾಲನಗರ ಸರಕಾರಿ ಆಸ್ಪತ್ರೆಯಲ್ಲಿ ಮಕ್ಕಳ ತಜ್ಞರ ಕೊರತೆ ಕೂಡ ಕಂಡುಬಂದಿದ್ದು ಇದರಿಂದ ಬಡಜನತೆ ಖಾಸಗಿ ವೈದ್ಯರ ಮೊರೆಹೋಗಬೇಕಾಗಿದ್ದು ಅಧಿಕ ಶುಲ್ಕ ತೆರಬೇಕಾದ ಪರಿಸ್ಥಿತಿ ಸೃಷ್ಠಿಯಾಗಿದೆ.
ಜಿಲ್ಲೆಯ ಆಸ್ಪತ್ರೆಗಳಲ್ಲಿ ರಜಾ ದಿನಗಳಲ್ಲಿಯೂ ವೈದ್ಯರು ಕರ್ತವ್ಯ ನಿರ್ವಹಿಸುವಂತೆ ಜಿಲ್ಲಾಡಳಿತ ಸೂಚನೆ ನೀಡಿದ್ದು ಮಕ್ಕಳ ಖಾಯಿಲೆಗೆ ಚಿಕಿತ್ಸೆ ನೀಡುವಲ್ಲಿ ಮುತುವರ್ಜಿ ವಹಿಸುವಂತೆ ಆದೇಶ ಹೊರಡಿಸಲಾಗಿದೆ ಎಂದು ತಿಳಿದು ಬಂದಿದೆ. ಮಕ್ಕಳಿಗೆ ಜ್ವರ ಮುಂತಾದ ಖಾಯಿಲೆ ಸೂಚನೆ ಬಂದ ತಕ್ಷಣ ವೈದ್ಯರನ್ನು ಸಂಪರ್ಕಿಸುವಂತೆ ಕುಶಾಲನಗರ ಸರಕಾರಿ ಆಸ್ಪತ್ರೆ ವೈದ್ಯರು ಸಲಹೆ ನೀಡಿದ್ದಾರೆ. ಕುಶಾಲ ನಗರ ಸರಕಾರಿ ಆಸ್ಪತ್ರೆಗೆ ಚಿಕಿತ್ಸೆಗೆ ಬಂದ ಜ್ವರಪೀಡಿತ ಮಗುವೊಂದು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟ ಘಟನೆ ಇಲ್ಲಿ ಸ್ಮರಿಸಬಹುದು.